ADVERTISEMENT

ಕೋಲಾರ | ಮಳೆ ಕೊರತೆಯಿಂದ ರೈತ ಕಂಗಾಲು; 2 ತಿಂಗಳಲ್ಲಿ ಕೇವಲ ಶೇ 3ರಷ್ಟು ಬಿತ್ತನೆ!

ಬಿತ್ತನೆ ಗುರಿ 72,900 ಹೆಕ್ಟೇರ್‌, ಆಗಿದ್ದು 2,363 ಹೆಕ್ಟೇರ್‌

ಕೆ.ಓಂಕಾರ ಮೂರ್ತಿ
Published 28 ಜುಲೈ 2025, 8:01 IST
Last Updated 28 ಜುಲೈ 2025, 8:01 IST
ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮದ ಬಳಿ ಉಳುಮೆಯಲ್ಲಿ ತೊಡಗಿದ್ದ ರೈತ
ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮದ ಬಳಿ ಉಳುಮೆಯಲ್ಲಿ ತೊಡಗಿದ್ದ ರೈತ   

ಕೋಲಾರ: ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಅವಧಿಯಲ್ಲಿ ಅಂದರೆ ಜೂನ್‌ ಹಾಗೂ ಜುಲೈನಲ್ಲಿ ಮಳೆ ಕೊರತೆ ಉಂಟಾಗಿದ್ದು, ಬಿತ್ತನೆಗೆ ಭಾರಿ ಹಿನ್ನಡೆಯಾಗಿ ಪರಿಣಮಿಸಿದೆ. ಕರಾವಳಿ, ಮಲೆನಾಡು ಪ್ರದೇಶ ಸೇರಿದಂತೆ ವಿವಿಧೆಡೆ ಅಬ್ಬರಿಸುತ್ತಿರುವ ಮಳೆ ಬಯಲುಸೀಮೆ ಪ್ರದೇಶದತ್ತ ಮಾತ್ರ ಮುನಿಸಿಕೊಂಡಿದೆ.

ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತಿರುವ ಮಳೆ ಸಾಕಾಗುತ್ತಿಲ್ಲ. ಜಿಲೆಯಲ್ಲಿ ಆರು ತಾಲ್ಲೂಕುಗಳಿಂದ ಸೇರಿ ಈ ಹಂಗಾಮಿನಲ್ಲಿ 72,900 ಹೆಕ್ಟೇರ್‌ ವಿಸ್ತೀರ್ಣದ ಕೃಷಿ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ, ಈ ವರೆಗೆ ಕೇವಲ 2,363 ಹೆಕ್ಟೇರ್‌ (ಶೇ 3.24) ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಅನ್ನದಾತರು ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.

ಮುಂಗಾರು ಅವಧಿಯಲ್ಲಿ ಅಂದರೆ ಜೂನ್‌ 1ರಿಂದ ಜುಲೈ 25ರವರೆಗೆ 74 ಮಿ.ಮೀ. ಮಳೆ ಆಗಿದೆ. ಈ ಸಂದರ್ಭದಲ್ಲಿ ವಾಡಿಕೆ ಮಳೆ 127 ಮಿ.ಮೀ ಆಗಬೇಕಿತ್ತು. ಶೇ 42 ರಷ್ಟು ಕೊರತೆ ಆಗಿದೆ. ಇಡೀ ರಾಜ್ಯದಲ್ಲಿ ಹೆಚ್ಚು ಮಳೆ ಕೊರತೆ ಉಂಟಾಗಿರುವ ಜಿಲ್ಲೆ ಕೂಡ. 

ADVERTISEMENT

‘ಮಳೆ ಕೊರತೆಯಿಂದ ಬಿತ್ತನೆಯಲ್ಲಿ ಭಾರಿ ಕುಂಠಿತವಾಗಿದೆ. ಬಿತ್ತನೆಯ ಪ್ರಮುಖ ಹಂತದಲ್ಲಿ ಮಳೆ ಬರಲಿಲ್ಲ. ವಾರದಿಂದ ಬಿಟ್ಟು ಬಿಟ್ಟು ಮಳೆ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಬಿತ್ತನೆ ಚಟುವಟಿಕೆ ವೇಗ ಪಡೆದುಕೊಳ್ಳುವ ವಿಶ್ವಾಸವಿದೆ. ಈ ವರ್ಷ ಬಿತ್ತನೆ ಪ್ರದೇಶದ ಗುರಿ ಕಡಿಮೆ ಆಗಿದೆ. ವಿವಿಧ ಕಾರಣಗಳಿಂದ ರೈತರು ತರಕಾರಿ ಹಾಗೂ ಹಣ್ಣಿನ ಬೆಳೆಗೆ ಮೊರೆ ಹೋಗುತ್ತಿದ್ದಾರೆ. ರಾಗಿ ಬೆಳೆ ಪ್ರದೇಶವೂ ಕಡಿಮೆ ಆಗಿದೆ’ ಎಂದು ಕೃಷಿ ಜಂಟಿ ನಿರ್ದೇಶಕಿ ಎಂ.ಆರ್‌.ಸುಮಾ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ರಾಗಿ ಬಿತ್ತನೆ ಕೇವಲ 522 ಹೆಕ್ಟೇರ್‌ನಲ್ಲಿ ನಡೆದಿದೆ. ಗುರಿ ಇರುವುದು 54,136 ಹೆಕ್ಟೇರ್‌. ಒಂದೆರಡು ದಿನ ಮಳೆ ಬಂತೆಂದು ಕೆಲ ರೈತರು ರಾಗಿ ಬಿತ್ತನೆ ಮಾಡಿದ್ದು, ಮೊಳಕೆಯಲ್ಲೇ ಒಣಗುತ್ತಿದೆ. ಜಿಲ್ಲೆಯಲ್ಲಿ ಸೆಪ್ಟೆಂಬರ್‌ ಮಧ್ಯಭಾಗದವರೆಗೆ ಬಿತ್ತನೆಗೆ ಅವಕಾಶವಿದ್ದು, ಮುಗಿಲತ್ತ ರೈತರ ಚಿತ್ತ ನೆಟ್ಟಿದೆ. ಆಗಸ್ಟ್‌ ಮೊದಲ ವಾರ ಬೀಳುವ ಮಳೆ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಈಗಾಗಲೇ ತೊಗರಿ, ನೆಲಗಡಲೆ ಸೇರಿದಂತೆ ಹಲವು ಬೆಳೆಗಳ ಬಿತ್ತನೆ ಅವಧಿ ಮೀರುತ್ತಿದೆ.

‘ತುಂತುರು ಮಳೆ ನಂಬಿಕೊಂಡೇ ರೈತರು ಬಿತ್ತನೆಯಲ್ಲಿ ತೊಡಗಿದ್ದಾರೆ. ಮಳೆ ಕೊರತೆ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ರಾಗಿ ಸೇರಿದಂತೆ ವಿವಿಧ ಆಹಾರ ‌ಧಾನ್ಯಗಳ ಕೊರತೆ ಉಂಟಾಗಲಿದೆ. ಜೊತೆಗೆ ಜಾನುವಾರುಗಳಿಗೆ ಮೇವಿನ ಕೊರತೆ ಆಗಲಿದೆ’ ಎಂದು ತೊಟ್ಲಿ ಗ್ರಾಮದ ರಮೇಶ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಕಡಿಮೆ ಬಿತ್ತನೆಯಾಗಿರುವುದು ಬಂಗಾರಪೇಟೆ (ಶೇ 1.05) ತಾಲ್ಲೂಕಿನಲ್ಲಿ. 11,999 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಿದ್ದು, 126 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಆಗಿದೆ. ನಂತರ ಶ್ರೀನಿವಾಸಪುರ ತಾಲ್ಲೂಕು ಇದ್ದು, ಕೇವಲ ಶೇ 1.54ರಷ್ಟು ಬಿತ್ತನೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಜುಲೈ ಅವಧಿಗೆ 8,359 ಮೆಟ್ರಿಕ್‌ ಟನ್‌ ಯೂರಿಯಾ ರಸಗೊಬ್ಬರದ ಅಗತ್ಯವಿದ್ದು, 9,793 ಮೆಟ್ರಿಕ್ ಟನ್‌ ಪೂರೈಕೆ ಆಗಿದೆ. 6,299 ಮೆಟ್ರಿಕ್ ‌ಟನ್‌ ಮಾರಾಟವಾಗಿದ್ದು, 3,494 ಮೆಟ್ರಿಕ್‌ ಟನ್‌ ದಾಸ್ತಾನು ಇದೆ.

1,261.75 ಕ್ವಿಂಟಲ್‌ ಬಿತ್ತನೆ ಬೀಜ ಪೂರೈಕೆ ಆಗಿದೆ. 757.75 ಕ್ವಿಂಟಲ್‌ ಬಿತ್ತನೆ ಬೀಜವನ್ನು ವಿತರಿಸಲಾಗಿದ್ದು, 364.75 ಕ್ವಿಂಟಲ್‌ ದಾಸ್ತಾನು ಇದೆ.

‘ಬಿತ್ತನೆ ಇನ್ನೂ ಸರಿಯಾಗಿ ಆರಂಭವಾಗದ ಕಾರಣ ಯೂರಿಯಾ ರಸಗೊಬ್ಬರ ಹಾಗೂ ಬಿತ್ತನೆ ಬೀಜಕ್ಕೆ ಹೆಚ್ಚೇನೂ ಬೇಡಿಕೆ ಬಂದಿಲ್ಲ. ನಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚು ಪೂರೈಕೆ ಆಗಿದ್ದು, ದಾಸ್ತಾನು ಇದೆ’ ಎಂದು ಸುಮಾ ಹೇಳಿದರು.

ಕೋಲಾರ ತಾಲ್ಲೂಕಿನ ಕಿತ್ತಂಡೂರು ಗ್ರಾಮದ ಬಳಿ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದ ರೈತರು
ಜಿಲ್ಲೆಯಲ್ಲಿ ಜೂನ್‌ನಲ್ಲಿ ಮಳೆ ಕೊರತೆ ಉಂಟಾಯಿತು. ನಮ್ಮಲ್ಲಿ ಮುಂಗಾರು ಮಳೆ ಆಗುವುದೇ ಕೊನೆ ಹಂತದಲ್ಲಿ. ದಕ್ಷಿಣ ಕನ್ನಡದಲ್ಲಿ ಮುಂಗಾರು ಮುಗಿಯುವಾಗ ಇಲ್ಲಿ ಆರಂಭವಾಗುತ್ತದೆ. ಬಿತ್ತನೆಗೆ ಇನ್ನೂ ಕಾಲಾವಕಾಶ ಇದೆ
– ಎಂ.ಆರ್‌.ರವಿ, ಜಿಲ್ಲಾಧಿಕಾರಿ ಕೋಲಾರ
ಜಿಲ್ಲೆಯಲ್ಲಿ ಈ ವರ್ಷವೂ ಮಳೆ ಕೊರತೆ ಉಂಟಾಗಿದೆ. ಸೆಪ್ಟೆಂಬರ್‌ ಮಧ್ಯಭಾಗದವರೆಗೆ ರಾಗಿ ಬಿತ್ತನೆ ನಡೆಯುತ್ತಿರುತ್ತದೆ. ರೈತರು ಆತಂಕಪಡುವ ಅಗತ್ಯವಿಲ್ಲ ಈಗ ಬಿತ್ತನೆ ಚುರುಕು ಪಡೆಯುತ್ತಿದೆ
– ಎಂ.ಆರ್‌.ಸುಮಾ, ಕೃಷಿ ಜಂಟಿ ಕಾರ್ಯದರ್ಶಿ

ಜೂನ್‌ ಜುಲೈ ಮಳೆ ಕೊರತೆ

ಕೋಲಾರ ಜಿಲ್ಲೆಯಲ್ಲಿ ಜೂನ್‌ನಲ್ಲಿ 66 ಮಿ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ 27 ಮಿ.ಮೀ.ಮಳೆ ಆಗಿದೆ. ಈ ಮೂಲಕ ಶೇ 60ರಷ್ಟು ಕೊರತೆ ಉಂಟಾಗಿತ್ತು. ಜುಲೈನಲ್ಲಿ ಶೇ 27ರಷ್ಟು ಕೊರತೆ ಆಗಿದೆ. 61 ಮಿ.ಮೀ ವಾಡಿಕೆ ಮಳೆ ಬದಲಾಗಿ 47 ಮಿ.ಮೀ ಮಳೆಯಾಗಿದೆ. ಜೂನ್‌ನಲ್ಲಿ ಇಡೀ ರಾಜ್ಯದಲ್ಲಿ ಕೋಲಾರ ಜಿಲ್ಲೆ ಮಾತ್ರ ತೀವ್ರ ಮಳೆ ಕೊರತೆ ಎದುರಿಸಿತ್ತು. ಜುಲೈನಲ್ಲೂ ಕೊರತೆ ಉಂಟಾಗಿದೆ.

ಕಳೆದ ಬಾರಿ ಆಗಸ್ಟ್‌ನಲ್ಲಿ ಬಿತ್ತನೆ ಚುರುಕು

ಜಿಲ್ಲೆಯಲ್ಲಿ ಕಳೆದ ವರ್ಷವೂ ಜುಲೈ ಅಂತ್ಯದವರೆಗೆ ಬಿತ್ತನೆ ಪ್ರಮಾಣ ಕುಂಠಿತವಾಗಿ ಇದೇ ಪರಿಸ್ಥಿತಿ ನೆಲೆಸಿತ್ತು. ಆದರೆ ಆಗಸ್ಟ್‌ ತಿಂಗಳಲ್ಲಿ ವರುಣ ಕರುಣೆ ತೋರಿದ್ದ ಕಾರಣ ಬಿತ್ತನೆ ವೇಗ ಪಡೆದುಕೊಂಡಿತ್ತು. ಜುಲೈ 31ರವರೆಗೆ ಕೇವಲ 12491 ಹೆಕ್ಟೇರ್‌ನಲ್ಲಿ ‌ಬಿತ್ತನೆ ಮೂಲಕ ಶೇ 13.09 ಸಾಧನೆ ಆಗಿತ್ತು. ಆಗಸ್ಟ್‌ ತಿಂಗಳೊಂದರಲ್ಲೇ ಸುಮಾರು 57 ಸಾವಿರ ಹೆಕ್ಟೇರ್‌ ಬಿತ್ತನೆ ನಡೆದಿದ್ದು ವಿಶೇಷವಾಗಿತ್ತು.  ಈ ಬಾರಿಯೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಜೂನ್‌ ಹಾಗೂ ಜುಲೈ ಮಧ್ಯಭಾಗದವರೆಗೆ ಮಳೆ ಇಲ್ಲದೆ ಕೃಷಿ ಚಟುವಟಿಕೆ ಹಿಂದೆ ಬಿದ್ದಿತ್ತು. ಈಗ ಅಲ್ಪಸ್ವಲ್ಪ ಮಳೆಯಾಗುತ್ತಿದ್ದು ನಿಧಾನವಾಗಿ ಬಿತ್ತನೆ ಚುರುಕು ಪಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.