
ಕೋಲಾರ: ಕುಸಿದ ಕಟ್ಟಡದ ಅಡಿಯಲ್ಲಿ ವ್ಯಕ್ತಿಯೊಬ್ಬರು ಸಿಲುಕಿದ್ದರು. ಕೂಡಲೇ ತುರ್ತು ಸೈರನ್ ಮೊಳಗಿತು. ನಿಯಂತ್ರಣ ಕಚೇರಿಯಿಂದ ಅಪಘಾತದ ಬಗ್ಗೆ ಸಂದೇಶ ರವಾನೆಯಾಯಿತು. ವಿವಿಧ ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದವು..!
ಬಹುಮಹಡಿ ಕಟ್ಟಡಕ್ಕೆ ಬೆಂಕಿ ಬಿದ್ದಿತ್ತು. ತಕ್ಷಣ ಮೂರನೇ ಮಹಡಿಯಿಂದ ಹಗ್ಗದ ಮೂಲಕ (ರೋಪ್ ವೇ) ವ್ಯಕ್ತಿಗಳನ್ನು ರಕ್ಷಿಸಿ ಕೆಳಗಿಳಿಸಲಾಯಿತು..!
ವಿಪತ್ತು ಸಂದರ್ಭದಲ್ಲಿ ಸನ್ನದ್ದರಾಗುವುದು ಹೇಗೆ ಎಂಬುದರ ಬಗ್ಗೆ ಜಿಲ್ಲಾ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್‌ಡಿಆರ್‌ಎಫ್) 10ನೇ ಬೆಟಾಲಿಯನ್, ಅಗ್ನಿಶಾಮಕ ಪಡೆ ಮತ್ತು ಇತರ ಸಂಸ್ಥೆಗಳ ಸದಸ್ಯರು ಮಂಗಳವಾರ ನೀಡಿದ ಅಣಕು ಪ್ರದರ್ಶನದ ದೃಶ್ಯಗಳು ಇವು.
ಜಿಲ್ಲೆಯಲ್ಲಿ ಅಗ್ನಿ ಅವಘಡ ಅಥವಾ ದಿಢೀರ್ ಕಟ್ಟಡ ಕುಸಿತ ಸಂಭವಿಸಿದ ಸಂದರ್ಭದಲ್ಲಿ ಯಾವ ರೀತಿ ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕು ಎಂಬುವುದರ ಕುರಿತು ಜಿಲ್ಲಾಧಿಕಾರಿ ಎಂ.ಆರ್.ರವಿ ಮಾರ್ಗದರ್ಶನದಲ್ಲಿ ಅಣಕು ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ 10.30ರ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡವು ರಚನಾತ್ಮಕ ವೈಫಲ್ಯದಿಂದ ಕುಸಿದಿದೆ ಎಂಬ ಕಲ್ಪಿತ ಸನ್ನಿವೇಶದೊಂದಿಗೆ ಕಾರ್ಯಾಚರಣೆ ಆರಂಭವಾಯಿತು. ಕಟ್ಟಡದ ಅವಶೇಷಗಳ ಅಡಿಯಲ್ಲಿ ಅನೇಕ ಜನರು ಸಿಲುಕಿದ್ದಾರೆ ಎಂಬ ಮಾಹಿತಿ ದೊರೆತ ತಕ್ಷಣ ರಕ್ಷಣಾ ಪಡೆಗಳು ಕಾರ್ಯಪ್ರವೃತ್ತವಾದವು.
10.40ಕ್ಕೆ ಅಗ್ನಿಶಾಮಕ ದಳ, ಪೊಲೀಸ್ ಮತ್ತು ಆ್ಯಂಬುಲೆನ್ಸ್ ತಂಡಗಳು ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯದ ಪ್ರಾಥಮಿಕ ಮೌಲ್ಯಮಾಪನ ಮಾಡಿದವು. ಪರಿಸ್ಥಿತಿ ಗಂಭೀರವಾಗಿದ್ದರಿಂದ ಎನ್‌ಡಿಆರ್‌ಎಫ್ ತಂಡಕ್ಕೆ ಕರೆ ನೀಡಲಾಯಿತು.
10.50ಕ್ಕೆ ಸ್ಥಳಕ್ಕೆ ಬಂದ ತಂಡವು ಅತ್ಯಾಧುನಿಕ ಶೋಧನಾ ಸಾಧನಗಳೊಂದಿಗೆ ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡಿತು. ಅವಶೇಷಗಳನ್ನು ಕತ್ತರಿಸುವ 'ಕಟಿಂಗ್ ತಂಡ' ಮತ್ತು ಕಟ್ಟಡದ ಸ್ಥಿರತೆ ಪರಿಶೀಲಿಸುವ 'ತಾಂತ್ರಿಕ ತಂಡಗಳು' ಸುರಕ್ಷಿತ ಮಾರ್ಗಗಳನ್ನು ನಿರ್ಮಿಸಿ ಗಾಯಾಳುಗಳನ್ನು ಹೊರತಂದವು.
ಕಾರ್ಯಾಚರಣೆಯನ್ನು ವ್ಯವಸ್ಥಿತವಾಗಿ ನಡೆಸಲು ಆವರಣದಲ್ಲಿ ವಿಶೇಷ ಘಟಕಗಳನ್ನು ಸ್ಥಾಪಿಸಲಾಗಿತ್ತು.
ಅಧಿಕಾರಿಗಳು ರಕ್ಷಣಾ ಕಾರ್ಯವನ್ನು ನಿರ್ದೇಶಿಸಲು ತಾತ್ಕಾಲಿಕ ಕಚೇರಿ. ಸ್ಯಾಟಲೈಟ್ ಫೋನ್ ಮತ್ತು ವಾಕಿ-ಟಾಕಿಗಳ ಮೂಲಕ ಮಾಹಿತಿ ವಿನಿಮಯವಾಯಿತು. ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆ ನೀಡಲು ವೈದ್ಯರು ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿಯ ತಂಡಗಳನ್ನು ಸನ್ನದ್ಧವಾಗಿ ಇರಿಸಲಾಗಿತ್ತು. ವಿಪತ್ತು ಸಂಭವಿಸಿದಾಗ ವಿವಿಧ ಇಲಾಖೆಗಳ ಪ್ರತಿಕ್ರಿಯೆ ಸಮಯವನ್ನು ಅಳೆಯುವುದು ಮತ್ತು ಸಂಪನ್ಮೂಲಗಳ ಲಭ್ಯತೆಯನ್ನು ಪರಿಶೀಲಿಸುವುದು ಈ ಪ್ರದರ್ಶನದ ಮುಖ್ಯ ಗುರಿಯಾಗಿತ್ತು. ಅಲ್ಲದೆ, ಇಲಾಖೆಗಳ ನಡುವಿನ ಸಮನ್ವಯತೆಯನ್ನು ಸುಧಾರಿಸಿ ವಿಪತ್ತಿನ ಸಮಯದಲ್ಲಿ ಜೀವಹಾನಿಯನ್ನು ತಡೆಗಟ್ಟುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಶ್ವಾನವನ್ನು ಕೂಡ ಪರಿಶೀಲನೆಗೆ ಬಳಸಿಕೊಳ್ಳಲಾಯಿತು.ಮಧ್ಯಾಹ್ನ 11.55ಕ್ಕೆ ಅಣಕು ಪ್ರದರ್ಶನವು ಕೊನೆಗೊಂಡಿತು.
ಶಾಲಾ ಮಕ್ಕಳು, ಎನ್‌ಸಿಸಿ ಕೆಡೆಟ್‌ಗಳು ಸೇರಿದಂತೆ ನೂರಾರು ಸಾರ್ವಜನಿಕರು ಕುತೂಹಲದಿಂದ ರೋಚಕ ಅಣಕು ಕಾರ್ಯಾಚರಣೆಯನ್ನು ಕಣ್ತುಂಬಿಕೊಂಡರು.
ಕಂದಾಯ, ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಆರೋಗ್ಯ ಕಲ್ಯಾಣ ಇಲಾಖೆ ಅಧಿಕಾರಿಗಳು ಇದ್ದರು.
ಜಿಲ್ಲಾಧಿಕಾರಿ ಎಂ.ಆರ್.ರವಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್.ಮಂಗಳಾ, ಉಪವಿಭಾಗಾಧಿಕಾರಿ ಡಾ.ಮೈತ್ರಿ, ಎಸ್‌ಡಿಆರ್‌ಎಫ್ ಕಮಾಂಡರ್, ಪೊಲೀಸ್, ಕಂದಾಯ ಇಲಾಖೆ, ಗೃಹರಕ್ಷಕ ದಳ ಅಧಿಕಾರಿಗಳು, ಸಿಬ್ಬಂದಿ ವರ್ಗ, ನಾಗರಿಕ ರಕ್ಷಣೆ, ಸ್ವಯಂಸೇವಕರು ಮತ್ತು ಎನ್‌ಸಿಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.