ADVERTISEMENT

ಫುಡ್‌ ಕೋರ್ಟ್‌ ವಿಚಾರ| ಷಟ್‌ ಅಪ್‌ ಎಂದ ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್‌!

ಶಾಸಕರ ಬೆಂಬಲಿಗರ ವಿರುದ್ಧ ಮುಗಿಬಿದ್ದ ಮುನಿಯಪ್ಪ ಬಣ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 3:56 IST
Last Updated 16 ಆಗಸ್ಟ್ 2025, 3:56 IST
ಕೋಲಾರದಲ್ಲಿ ಫುಡ್‌ ಕೋರ್ಟ್‌ ಉದ್ಘಾಟನೆ ವೇಳೆ ಸಚಿವ ಬೈರತಿ ಸುರೇಶ್‌ ಸಮ್ಮುಖದಲ್ಲಿ ಶಾಸಕರ ಬೆಂಬಲಿಗರು ಹಾಗೂ ಮುನಿಯಪ್ಪ ಬೆಂಬಲಿಗರ ನಡುವೆ ಜಗಳ ನಡೆಯಿತು
ಕೋಲಾರದಲ್ಲಿ ಫುಡ್‌ ಕೋರ್ಟ್‌ ಉದ್ಘಾಟನೆ ವೇಳೆ ಸಚಿವ ಬೈರತಿ ಸುರೇಶ್‌ ಸಮ್ಮುಖದಲ್ಲಿ ಶಾಸಕರ ಬೆಂಬಲಿಗರು ಹಾಗೂ ಮುನಿಯಪ್ಪ ಬೆಂಬಲಿಗರ ನಡುವೆ ಜಗಳ ನಡೆಯಿತು    

ಕೋಲಾರ‌: ಕೆಲ ದಿನಗಳ ಬಿಡುವಿನ ಬಳಿಕ ಘಟಬಂಧನ್‌ ಹಾಗೂ ಕೆ.ಎಚ್‌.ಮುನಿಯಪ್ಪ ಬಣಗಳ ನಡುವೆ ಮತ್ತೆ ಘರ್ಷಣೆ ನಡೆದಿದೆ. ಶಾಸಕ ಕೊತ್ತೂರು ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್ ಕುಮಾರ್‌ ಹಾಗೂ ಅವರ ಬೆಂಬಲಿಗರ ವಿರುದ್ಧ ನಗರಸಭೆ ಮಾಜಿ ಸದಸ್ಯ ಸೋಮಶೇಖರ್‌ ಹಾಗೂ ಹಾಲಿ ಸದಸ್ಯ ಪ್ರಸಾದ್‌ ಬಾಬು ಮುಗಿಬಿದ್ದರು.

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶುಕ್ರವಾರ ನಗರಕ್ಕೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಸಮ್ಮುಖದಲ್ಲೇ ಮಾತಿನ ಚಕಮಕಿ ನಡೆದಿದ್ದು, ನೂಕಾಟ–ತಳ್ಳಾಟದಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೂ ತಲುಪಿತ್ತು.

ಸ್ವಾತಂತ್ರ್ಯ ಕಾರ್ಯಕ್ರಮದ ಬಳಿಕ ನಗರದ ಕಾಲೇಜು ವೃತ್ತದಲ್ಲಿ ನಗರಸಭೆ ನಿರ್ಮಿಸಿರುವ ಫುಡ್‌ ಕೋರ್ಟ್‌ ಅನ್ನು ಬೈರತಿ ಸುರೇಶ್‌ ಉದ್ಘಾಟಿಸಿದರು.

ADVERTISEMENT

ಕಾಲೇಜಿನ ಮುಂದೆ ಇರುವ ಕುಟೀರಗಳ ನಿರ್ಮಾಣ ವಿಚಾರ ಪ್ರಸ್ತಾಪವಾಗಿ ವಾಗ್ವಾದ ಆರಂಭವಾಯಿತು. ಉಸ್ತುವಾರಿ ಸಚಿವರ ಮುಂದೆಯೇ ಎರಡೂ ಬಣದವರು ಏಕವಚನದಲ್ಲಿ ಮಾತನಾಡಲು ಆರಂಭಿಸಿದರು.

ಇದು ಸಿಎಸ್‌ಆರ್‌ ನಿಧಿಯಿಂದ ಮಾಡಿರುವುದು, ಹೋಂಡಾ ಕಂಪನಿಯವರು ಎಂದು ಕೊತ್ತೂರು ಮಂಜುನಾಥ್ ಉತ್ತರಿಸುತ್ತಿದ್ದಂತೆ ಕೆ.ಎಚ್ ಮುನಿಯಪ್ಪ ಬಣದವರು ತಕರಾರು ತೆಗೆದರು. ಇಲ್ಲಿ ಸೌಲಭ್ಯ ಬರಲು ಹಿಂದಿನ ಎಸ್‌ಪಿ (ದೇವರಾಜ್‌) ಕಾರಣ; ಇವರಲ್ಲ ಎಂದು ಸೋಮಶೇಖರ್ ಹೇಳುತ್ತಿದ್ದಂತೆ ಶಾಸಕರ ಬೆಂಬಲಿಗರು ಗರಂ ಆದರು.

‘ನೀನ್ಯಾವನು ಶಾಸಕರ ಬಗ್ಗೆ ಮಾತನಾಡಲು, ಏಕವಚನದಲ್ಲಿ ಮಾತನಾಡಿಸುತ್ತೀಯಾ, ಶಾಸಕರಿಗೆ ಗೌರವ ಕೊಡುವುದು ಬೇಡವೇ’ ಎಂದು ಘಟಬಂದನ್‌ ಮುಖಂಡರು ಕೈ ಕೈ ಮಿಲಾಯಿಸಲು ಮುಂದಾದರು. ಮುನಿಯಪ್ಪ ಬಣದ ಕೆ.ಜಯದೇವ್‌ ಕೂಡ ಮತ್ತೊಂದು ಬಣದವರೊಂದಿಗೆ ಜಗಳಕ್ಕಿಳಿದರು. ಪೊಲೀಸರು ದೂರ ಸರಿಸಿದರು.

ಆಗ ಬೈರತಿ ಸುರೇಶ್ ಗರಂ ಆಗಿ ಮಧ್ಯಪ್ರವೇಶ ಮಾಡಿ, ‘ಷಟ್‌ ಅಪ್‌, ನೀನು (ಸೋಮಶೇಖರ್) ನಗರಸಭೆ ಮಾಜಿ ಸದಸ್ಯ. ಶಾಸಕರ ಮಾತು ಕೇಳು. ಮಕ್ಕಳಾಟ ಆಡುತ್ತಿದ್ದೀರಾ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ನಾವೆಲ್ಲ ಕಾಂಗ್ರೆಸ್‌ನವರು ಎಲ್ಲರೂ ಒಂದೇ. ಸುಮ್ಮನಿರಬೇಕು’ ಎಂದು ಬುದ್ಧಿವಾದ ಹೇಳಿದರು.

ನೂಕಾಟ ನಡೆಯುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶ ಮಾಡಿ ಎರಡೂ ಬಣದವರನ್ನು ತಳ್ಳಿದರು. 

ಫುಡ್‌ ಕೋರ್ಟ್‌ ಪಕ್ಕದಲ್ಲಿರುವ ಕುಟೀರ ನಿರ್ಮಿಸಿದ್ದು ಹಿಂದಿನ ಎಸ್‌ಪಿ ಎಂದು ಸೋಮು ಸಿಎಸ್‌ಆರ್‌ ಹಣ ಎಂದ ಕೊತ್ತೂರು ಮಂಜುನಾಥ್‌ ಸಚಿವರ ಎದುರೇ ಕಿತ್ತಾಟ

₹33.8 ಲಕ್ಷ ವೆಚ್ಚದಲ್ಲಿ ಫುಡ್‌ ಕೋರ್ಟ್‌

ಕೋಲಾರ ನಗರಸಭೆಯಿಂದ ₹ 33.8 ಲಕ್ಷ ವೆಚ್ಚದಲ್ಲಿ ಕಾಲೇಜು ವೃತ್ತದಲ್ಲಿ ನಿರ್ಮಿಸಿರುವ ಫುಡ್‌ ಕೋರ್ಟ್‌ಗೆ ಸಚಿವ ಬೈರತಿ ಸುರೇಶ್‌ ಚಾಲನೆ ನೀಡಿದರು. ಇಲ್ಲಿ 27 ಕೌಂಟರ್‌ಗಳಿದ್ದು ಈ ಭಾಗದ ರಸ್ತೆ ಬದಿಯಲ್ಲಿ ತಿನಿಸು ಮಾರುವವರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಲಾಟರಿ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗುತ್ತದೆ ದಿನದ ಶುಲ್ಕವನ್ನು ಸದ್ಯದಲ್ಲೇ ನಿಗದಿಪಡಿಸಲಾಗುತ್ತದೆ. ಶಾಸಕ ಕೊತ್ತೂರು ಮಂಜುನಾಥ್‌ ಎಂಎಲ್‌ಸಿ ಅನಿಲ್‌ಕುಮಾರ್‌ ನಗರಸಭೆ ಅಧ್ಯಕ್ಷೆ ಲಕ್ಷ್ಮಿ ದೇವಮ್ಮ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ ಜಿಲ್ಲಾಧಿಕಾರಿ ಎಂ.ಆರ್‌.ರವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್‌ ಪಿ.ಬಾಗೇವಾಡಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್‌ ನಗರಸಭೆ ಆಯುಕ್ತ ನವೀನ್‌ ಚಂದ್ರ ಹಾಗೂ ನಗರಸಭೆ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.