
ಕೋಲಾರ: ಜಿಲ್ಲೆಯ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಲವು ಅವಾಂತರ ಸೃಷ್ಟಿಸಿದೆ.
ಶುಕ್ರವಾರ ರಾತ್ರಿ ಗುಡುಗು ಮಿಂಚು ಸಮೇತ ಆರಂಭವಾದ ಮಳೆ ಶನಿವಾರ ನಸುಕಿನವರೆಗೆ ಸುರಿಯುತ್ತಲೇ ಇತ್ತು.
ಕೆರೆಗಳು ಭರ್ತಿಯಾಗಿ ಕೋಡಿ ಒಡೆದಿದ್ದರೆ, ಇತ್ತ ಕಾಲುವೆಗಳು ಉಕ್ಕಿ ಹರಿಯುತ್ತಿವೆ. ಹಲವು ಉದ್ಯಾನಗಳು, ತಗ್ಗು ಪ್ರದೇಶಗಳು, ಕಾಲೊನಿಗಳು, ದೇಗುಲಗಳು ಜಲಾವೃತವಾಗಿವೆ. ಕೋಲಾರ, ಶ್ರೀನಿವಾಸಪುರ ತಾಲ್ಲೂಕಿನ ಹಲವೆಡೆ ಬೆಳೆ ನಾಶವಾಗಿದೆ. ವಿವಿಧೆಡೆ ಮರಗಳು ಧರೆಗುರುಳಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.
ತಾಲ್ಲೂಕಿನ ವಿಟ್ಟಪನಹಳ್ಳಿ ಗ್ರಾಮದ ಬಾಲಕನೊಬ್ಬ ಬಾಳೆ ದಿಂಡು ತರಲು ಹೋಗಿದ್ದವನು ನಿಗೂಢವಾಗಿ ನಾಪತ್ತೆಯಾಗಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಗ್ರಾಮದ ಬಳಿಯ ಕಾಲುವೆಯಲ್ಲಿ ಕೊಚ್ಚಿ ಹೋಗಿರುವ ಅನುಮಾನ ವ್ಯಕ್ತಪಡಿಸಿದ್ದು, ಅಗ್ನಿಶಾಮಕ ದಳದ ಅಧಿಕಾರಿಗಳು ಬಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ಧಾರಾಕಾರ ಮಳೆಗೆ ನಗರದ ಆರ್‌ಟಿಒ ಕಚೇರಿ ಬಳಿ, ರಹಮತ್ ನಗರ ಸೇರಿದಂತೆ ವಿವಿಧ ಪ್ರದೇಶಗಳು ಜಲವೃತಗೊಂಡಿವೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಅಂತರಗಂಗೆ ರಸ್ತೆಯಲ್ಲಿರುವ ಕುವೆಂಪು ಉದ್ಯಾನ ಕೆಸರುಗದ್ದೆಯಾಗಿದೆ. ಎರಡು ದಿನಗಳಿಂದ ಮಂಡಿಮಟ್ಟ ನೀರು ನಿಂತಿದ್ದರೂ ಕೇಳುವವರು ಯಾರೂ ಇಲ್ಲ. ಶನಿವಾರ ಮುಂಜಾನೆ ವಾಕಿಂಗ್ ಮಾಡಲು ಬಂದಿದ್ದ ನಾಗರಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಾಪಸ್ ಹೋದರು. ಪಕ್ಕದಲ್ಲಿ ಕಾಲುವೆ ಇದ್ದರೂ ಉದ್ಯಾನದಿಂದ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಮಾಡಿಲ್ಲ.
ಸರ್ವಜ್ಞ ಉದ್ಯಾನದಲ್ಲೂ ಇದೇ ಪರಿಸ್ಥಿತಿ ನೆಲೆಸಿದೆ. ಹಲವೆಡೆ ನೀರು ತುಂಬಿಕೊಂಡು ಕೆಸರು ಗದ್ದೆಯಂತಾಗಿದೆ.
ಬಂಗಾರಪೇಟೆ ಮಾರ್ಗದದಲ್ಲಿರುವ ಆರ್‌ಟಿಒ ಕಚೇರಿ ಸುತ್ತಲು ಮಳೆನೀರು ತುಂಬಿಕೊಂಡಿದೆ. ಪಕ್ಕದಲ್ಲಿರುವ ಗಣೇಶ ದೇಗುಲದ ಸುತ್ತಲೂ ನೀರು ತುಂಬಿಕೊಂಡಿದೆ. ಎರಡನೇ ಶನಿವಾರ ರಜೆ ಇದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರಾಗಲಿ ಅಥವಾ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಕಚೇರಿಗೆ ಬಂದಿರಲಿಲ್ಲ. ಹೀಗಾಗಿ, ತೊಂದರೆಯಾಗಲಿಲ್ಲ. ಆದರೆ, ಪ್ರತಿಬಾರಿ ಮಳೆ ಬಂದಾಗಲೂ ಈ ಕಚೇರಿಯ ಸುತ್ತಲೂ ಜಲಾವೃತ್ತವಾಗುವುದು ಸಾಮಾನ್ಯವಾಗಿದೆ. ಪಕ್ಕದಲ್ಲಿ ಕಾಲುವೆ ಹರಿದು ಹೋಗುತ್ತಿದೆ.
ಬೈರೇಗೌಡ ನಗರದಲ್ಲಿಯೂ ಕೆಲ ರಸ್ತೆಗಳು ಜಲಾವೃತಗೊಂಡಿವೆ. ಇದಲ್ಲದೇ, ನಗರದ ಖಾದ್ರಿಪುರ, ಕಾರಂಜಿಕಟ್ಟೆ, ಮುನೇಶ್ವರ ನಗರ, ಸಾರಿಗೆ ನಗರ, ರಹಮತ್ ನಗರ ಮುಂತಾದ ತಗ್ಗು ಪ್ರದೇಶಗಳು ಜಲವೃತಗೊಂಡಿದ್ದು, ಈ ಭಾಗದ ನಿವಾಸಿಗಳಿಗೆ ತೊಂದರೆ ಆಗಿದೆ. ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರು ರಾತ್ರಿ ಜಾಗರಣೆ ಮಾಡಬೇಕಾದ ಪರಿಸ್ಥಿತಿ ಬಂದೊದಗಿತ್ತು.
ಬಡಾವಣೆ ರಸ್ತೆಗಳ ಗುಂಡಿಗಳಲ್ಲಿ ನೀರು ತುಂಬಿಕೊಂಡು ಕೆಸರು ಹೊಂಡಳಾಗಿ ಮಾರ್ಪಟ್ಟಿವೆ. ದ್ವಿಚಕ್ರ ವಾಹನ ಸವಾರರು ಪರದಾಡುತ್ತಿರುವುದು ಕಂಡುಬಂತು. ಯುಜಿಡಿಗಳ ಸಮಸ್ಯೆಯಿಂದ ಕಲುಷಿತ ನೀರು ಇಡೀ ರಸ್ತೆಯಲ್ಲಿ ಹರಿಯುತ್ತಿದೆ. ಈ ಪರಿಣಾಮ ವಾಹನ ಸವಾರರು ಹಾಗೂ ಸಾರ್ವಜನಿಕರು ಮೂಗುಮುಚ್ಚಿಕೊಂಡು ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ಉಂಟಾಗಿತ್ತು. ತಿಂಗಳಾನುಗಟ್ಟಲೇ ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ಈ ಪರಿಸ್ಥಿತಿ ಬಂದೊದಗಿದೆ.
ಕೆಲವು ದಿನಗಳಿಂದ ಸುರಿದ ಉತ್ತಮ ಮಳೆಯ ಪರಿಣಾಮ ಜಿಲ್ಲೆಯಲ್ಲಿ ಹಲವು ಪ್ರಮುಖ ಕೆರೆಗಳು ತುಂಬಿ ಕೋಡಿ ಹರಿದಿವೆ. ಇದರಿಂದ ಜನರು ಹಾಗೂ ರೈತರು ಸಂತೋಷಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.