ಕೋಲಾರ: ನಗರ ಹಾಗೂ ಗ್ರಾಮಾಂತರ ಪ್ರದೇಶದ ವಿವಿಧೆಡೆ ಮಳೆ ಅಬ್ಬರಿಸಿದ್ದು ರಸ್ತೆಗಳು, ಉದ್ಯಾನಗಳು, ಅಂಡರ್‌ಪಾಸ್‌ಗಳು ಜಲಾವೃತವಾಗಿವೆ.
ಗುರುವಾರ ಸಂಜೆ ಆರಂಭವಾದ ಮಳೆ ಶುಕ್ರವಾರ ನಸುಕಿನವರೆಗೆ ಸುರಿಯುತ್ತಲೇ ಇತ್ತು. ಖಾದ್ರಿಪುರ ಸೇರಿದಂತೆ ನಗರದೊಳಗೆ ಹಾಗೂ ಹೊರವಲಯದ ರೈಲ್ವೆ ಸೇತುವೆ ಬಳಿ ನೀರು ತುಂಬಿಕೊಂಡಿದ್ದು, ಜನರು ರಸ್ತೆ ದಾಟಲು ಹರಸಾಹಸಪಟ್ಟರು. ಶಾಲಾ ಮಕ್ಕಳು ರಸ್ತೆ ದಾಟಲು ಸಾಧ್ಯವಾಗದೆ ರೈಲ್ವೆ ಟ್ರ್ಯಾಕ್‌ನಲ್ಲಿ ಸಾಗಿದ್ದು ಕಂಡುಬಂತು. ನೀರು ಹರಿದು ಹೋಗಲು ಜಾಗವಿಲ್ಲದಂತಾಗಿದೆ. ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಯುವಕರು ನೀರಿಗಿಳಿದು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡಾವಣೆಗಳಲ್ಲಿನ ರಸ್ತೆಗಳು ಕೆಸರುಮಯವಾಗಿವೆ. ಗುಂಡಿಗಳಲ್ಲಿ ನೀರು ತುಂಬಿಕೊಂಡು ಕೆಲ ರಸ್ತೆಗಳಲ್ಲಿ ಕಾಲಿಡಲಾರದ ಸ್ಥಿತಿ ನೆಲೆಸಿದೆ. ತಗ್ಗು ಪ್ರದೇಶದಲ್ಲಿ ರಸ್ತೆ ಉದ್ದಕ್ಕೂ ಮಳೆಯ ನೀರು ನಿಂತಿತ್ತು. ಈಗಾಗಲೇ ತುಂಬಿಕೊಂಡಿದ್ದ ಕೆರೆಗಳು ಮತ್ತಷ್ಟು ಭರ್ತಿಯಾಗಿ ಕೋಡಿ ಒಡೆದಿವೆ.
ನಗರದಲ್ಲಿ ಚರಂಡಿಗಳೇ ಮಾಯವಾಗಿದ್ದು, ಮಳೆ ನೀರು ರಸ್ತೆಗೆ ನುಗ್ಗುತ್ತಿದೆ. ಹಲವೆಡೆ ಇದೇ ಪರಿಸ್ಥಿತಿ ನಿರ್ಮಾಣವಾಯಿತು. ಹಲವೆಡೆ ಚರಂಡಿಗಳಲ್ಲಿ ನೀರು ತುಂಬಿಕೊಂಡು ತ್ಯಾಜ್ಯ ಸಮೇತ ರಸ್ತೆಗಳಲ್ಲಿ ಹರಿಯಿತು. ಚೇಂಬರ್‌ಗಳು ತುಂಬಿಕೊಂಡು ಉಕ್ಕುತ್ತಿದ್ದ ದೃಶ್ಯ ಕಂಡುಬಂತು. ವಾಹನ ಸವಾರರು ಪರದಾಡಿದರು.
ನಗರದ ಹೃದಯಭಾಗದಲ್ಲಿರುವ ಕುವೆಂಪು ಉದ್ಯಾನ ಕೆರೆಯಂತಾಗಿದೆ. ಸಂಪೂರ್ಣ ನೀರು ತುಂಬಿಕೊಂಡಿದ್ದು ಹರಿದು ಹೋಗಲು ಜಾಗವಿಲ್ಲದಂತಾಗಿದೆ. ಪಕ್ಕದಲ್ಲಿ ದೊಡ್ಡ ಚರಂಡಿ ಇದ್ದರೂ ಉದ್ಯಾನದಿಂದ ಸಂಪರ್ಕವಿಲ್ಲದಾಗಿದೆ. ಸಂತೆಕಟ್ಟೆ ಮಾರುಕಟ್ಟೆ ಪ್ರದೇಶ ಕೆಸರುಮಯವಾಗಿತ್ತು. ಸಾರ್ವಜನಿಕರು ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀನಿವಾಸಪುರ, ಬಂಗಾರಪೇಟೆ ಹಾಗೂ ಮುಳಬಾಗಿಲಿನ ಹಲವೆಡೆ ಬಡಾವಣೆಗಳಲ್ಲೂ ಜನರು ಪರದಾಡಿದರು.
ತಾಡಿಗೋಳ್‌ನಲ್ಲಿ 149 ಮಿ.ಮೀ. ಮಳೆ
ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್‌ನಲ್ಲಿ 149 ಮಿ.ಮೀ (1.5 ಸೆಂ.ಮೀ.) ಮಳೆಯಾಗಿದ್ದು ಗುರುವಾರ ರಾತ್ರಿಯಿಂದ ಶುಕ್ರವಾರ ನಸುಕಿನವರೆಗೆ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ ಪ್ರದೇಶ ಕೂಡ. ಕೋಲಾರ ತಾಲ್ಲೂಕಿನ ಮಣಿಘಟ್ಟದಲ್ಲಿ 148 ಮಿ.ಮೀ. ಶ್ರೀನಿವಾಸಪುರ ತಾಲ್ಲೂಕಿನ ಅರಿಕುಂಟೆಯಲ್ಲಿ 137 ಮಿ.ಮೀ. ಶ್ರೀನಿವಾಸಪುರ ಪಟ್ಟಣದಲ್ಲಿ 131 ಮಿ.ಮೀ. ಹೊದಲಿಯಲ್ಲಿ 105 ಮಿ.ಮೀ. ಮುಳಬಾಗಿಲು ತಾಲ್ಲೂಕಿನ ಬಳ್ಳದಲ್ಲಿ 127 ಮಿ.ಮೀ. ಊರುಕುಂಟೆಮಿಟ್ಟೂರಿನಲ್ಲಿ 104 ಮಿ.ಮೀ. ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.