ADVERTISEMENT

ಕೋಲಾರ| ಇತಿಹಾಸದ ಮ್ಯೂಸಿಯಂಗೆ 5 ಎಕರೆ‌ ಜಾಗ: ಜಿಲ್ಲಾಧಿಕಾರಿ ಎಂ.ಆರ್.ರವಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 7:15 IST
Last Updated 23 ಜನವರಿ 2026, 7:15 IST
ಕೋಲಾರದಲ್ಲಿ ಗುರುವಾರ ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ಸಭೆ ನಡೆಯಿತು
ಕೋಲಾರದಲ್ಲಿ ಗುರುವಾರ ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ಸಭೆ ನಡೆಯಿತು   

ಕೋಲಾರ: ಜಿಲ್ಲೆಯ ಸಮೃದ್ಧ ಪರಂಪರೆ ಸಾರುವ ಶಾಸನ, ವೀರಗಲ್ಲು, ಸ್ಮಾರಕಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಅಗತ್ಯವಿದ್ದು, ಇತಿಹಾಸದ ಮ್ಯೂಸಿಯಂ ನಿರ್ಮಾಣಕ್ಕೆ ಜಾಗ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್​.ರವಿ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಗುರುವಾರ ಸ್ಮಾರಕ, ವೀರಗಲ್ಲು,‌ ಶಾಸನಗಳ ರಕ್ಷಣೆ ಕುರಿತು ನಡೆದ ಪುರಾತತ್ವ ಇಲಾಖೆ, ಮುಜರಾಯಿ, ಪ್ರವಾಸೋದ್ಯಮ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಗೆ ತನ್ನದೆ ಆದ ಐತಿಹಾಸಿಕ, ಸಾಂಸ್ಕೃತಿಕ, ಪಾರಂಪರಿಕ ಇತಿಹಾಸವಿದೆ. ರಾಜ ಮನೆತನದವರು ಆಳ್ವಿಕೆ ನಡೆಸಿದ್ದಾರೆ ಎಂಬುದಕ್ಕೆ ಸಾಕಷ್ಟು ಕುರುಹುಗಳು ಈಗಲೂ ಇವೆ. ಅವೆಲ್ಲ ನಶಿಸಿ ಹೋಗುವ ಮೊದಲೇ ಪತ್ತೆ ಹಚ್ಚಿ ರಕ್ಷಣೆ ಮಾಡಬೇಕಾಗಿದೆ ಎಂದರು.

ADVERTISEMENT

ತಹಶೀಲ್ದಾರ್​, ತಾ.ಪಂ.ಇಒ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ತಂಡವಾಗಿ ತಮ್ಮ ತಾಲ್ಲೂಕು ವ್ಯಾಪ್ತಿಯಲ್ಲಿರುವ ಪಾರಂಪರಿಕಾ ಸ್ಥಳಗಳ ಸ್ಥಿತಿಗತಿ ಬಗ್ಗೆ ವರದಿ ನೀಡಬೇಕು ಎಂದು ಸೂಚಿಸಿದರು.

ಸಮಿತಿ ರಚನೆ ಮಾಡಿದ ನಂತರ ಸಭೆಗಳನ್ನು ನಡೆಸಲಾಗುವುದು. ಆ ಮೂಲಕ ಮ್ಯೂಸಿಯಂ, ಪಾರ್ಕ್​ ನಿರ್ಮಾಣ ಮಾಡಿ ಅದರಲ್ಲಿ ವೀರಗಲ್ಲು, ಸ್ಮಾರಕ, ಶಾಸನಗಳನ್ನು ಇರಿಸಲಾಗುವುದು‌. ಅದರ ಕುರಿತು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮಾಹಿತಿ ನೀಡಲು ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಲಾಗುವುದು. ಇದಕ್ಕೆ ಅಗತ್ಯವಾಗಿ ಬೇಕಾಗಿರುವ ಐದು ಎಕರೆ ಜಾಗವನ್ನು ಅತಿ ಶೀಘ್ರದಲ್ಲೇ ಗುರುತಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್​, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್​.ಎಂ.ಮಂಗಳಾ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ತುಕಾರಾಂ, ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರಿ ಲಕ್ಷ್ಮಿ, ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾ ಅಧ್ಯಕ್ಷ ಗೋಪಾಲ್‌ಗೌಡ, ಅರಿವು ಭಾರತ ಸಂಸ್ಥೆಯ ಅರಿವು ಶಿವಪ್ಪ ಇದ್ದರು.

ಸರ್ಕಾರ ಪ್ರಸ್ತಾವ ಕಳುಹಿಸಿಕೊಡಲು ಸೂಚನೆ

ಜಿಲ್ಲೆಯಲ್ಲಿ ರಾಜ್ಯ ಪುರಾತತ್ವ ಇಲಾಖೆ ವ್ಯಾಪ್ತಿಗೆ 19 ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವ್ಯಾಪ್ತಿಗೆ 5 ಸ್ಮಾರಕಗಳನ್ನು ಗುರುತಿಸಲಾಗಿದೆ. ಇವುಗಳಿಗೆ ಸರ್ಕಾರದಿಂದ ಅಧಿಸೂಚನೆ ದೊರೆತಿಲ್ಲ ಎಂದು ಪುರಾತತ್ವ ಇಲಾಖೆ ಅಧಿಕಾರಿ ಕಾವ್ಯಶ್ರೀ ತಿಳಿಸಿದರು. ರಾಜ್ಯ ಪುರಾತತ್ವ ಇಲಾಖೆ ಈಗಾಗಲೇ ಗುರುತಿಸಿರುವ ಸ್ಮಾರಕಗಳನ್ನು ಸಂರಕ್ಷಿಸಲು ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದ್ದು. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿ ಅನುಮೋದನೆ ಪಡೆಯಲು ಕ್ರಮ ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ಹೊಸ ಐತಿಹಾಸಿಕ ತಾಣಗಳನ್ನು ಗುರುತಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಿದ ನಂತರ ಅವುಗಳನ್ನು ಪಟ್ಟಿಗೆ ಸೇರಿಸಬೇಕು. ಇತಿಹಾಸ ತಜ್ಞರು ಕಾಲೇಜು ವಿದ್ಯಾರ್ಥಿಗಳನ್ನು ಒಳಗೊಂಡಂತೆ ಸ್ಮಾರಕಗಳ ಸಂರಕ್ಷಣೆ ಕುರಿತು ಶೀಘ್ರದಲ್ಲೇ ಜಿಲ್ಲಾ ಮಟ್ಟದ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಎಂ.ಆರ್​.ರವಿ ತಿಳಿಸಿದರು.

ಹೆರಿಟೇಜ್​ ಕ್ಲಬ್​ಗಳಿಗೆ ಮರು ಜೀವ ಕೊಡಿ

ಜಿಲ್ಲೆಯ ಎಲ್ಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿರುವ ಹೆರಿಟೇಜ್​ ಕ್ಲಬ್​ಗಳಿಗೆ ಮರುಜೀವ ನೀಡಬೇಕು. ವಿದ್ಯಾರ್ಥಿಗಳಲ್ಲಿ ಐತಿಹಾಸಿಕ ಪ್ರಜ್ಞೆ ಮೂಡಿಸಲು ಕ್ರಮ ಕೈಗೊಳ್ಳಬೇಕು. ದೇವಾಲಯದ ಆವರಣದಲ್ಲಿ ಅಥವಾ ಆಸುಪಾಸಿನಲ್ಲಿ ಅಸುರಕ್ಷಿತವಾಗಿರುವ ವೀರಗಲ್ಲು ಹಾಗೂ ಶಾಸನಗಳನ್ನು ಗುರುತಿಸಿ ಅವುಗಳಿಗೆ ಹಾನಿಯಾಗದಂತೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಮುಂದಾಗಬೇಕು ಎಂದು ಎಂ.ಆರ್.ರವಿ ತಿಳಿಸಿದರು.

ನಶಿಸಿ ಹೋಗುವ ಮುನ್ನ ಸಂರಕ್ಷಿಸಬೇಕು

ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ 169 ನ್ಯೂತಲಿಕ್​ ಸ್ಥಳಗಳಿವೆ. ಇದಕ್ಕೆ ಸಾಕ್ಷಿಗಳಿದ್ದು ನಶಿಸಿ ಹೋಗುತ್ತಿವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಶಿವಪ್ಪ ಅರಿವು ಬೇಸರ ವ್ಯಕ್ತಪಡಿಸಿದರು. ಇತಿಹಾಸ ಸಾರುವ ಕುರುಹುಗಳು ಇರುವ ಸ್ಥಳಗಳಿಗೆ ಅರಿವು ಭಾರತ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿ ಅವುಗಳನ್ನೆಲ್ಲ ಸಂಗ್ರಹಿಸಿ ಜನರಿಗೆ ಜಾಗೃತಿ ಮೂಡಿಸಲು ಜಿಲ್ಲಾ ಮ್ಯೂಸಿಯಂ ಅಗತ್ಯವಿದೆ ಎಂದರು. ಇರುವ ದೇವಾಲಯಗಳ ಬಗ್ಗೆ ತಿಳಿಸಲು ಟೂರಿಸ್ಟ್​ ಸರ್ಕಿಟ್​ ಮಾಡಬೇಕು. ಸಾಹಿತಿ ಸ್ವಾತಂತ್ರ ಹೋರಾಟಗಾರರ ಹೆಸರಿನಲ್ಲಿ ಸ್ಮಾರಕ ಸ್ಥಳಗಳ ಕುರಿತು ಮಾಹಿತಿ ತಿಳಿಸುವ ಬೋರ್ಡ್​ಗಳನ್ನು ಅಲ್ಲಲ್ಲಿ ಅಳವಡಿಸಬೇಕು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.