ADVERTISEMENT

ಕೋಲಾರ : ಬಲ್ಕ್ ಮಿಲ್ಕ್ ಕೇಂದ್ರ ಸ್ಥಾಪನೆಗೆ ಚಿಂತನೆ

ಕೋಚಿಮುಲ್ ನಿರ್ದೇಶಕ ಆರ್.ರಾಮಕೃಷ್ಣೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2018, 14:21 IST
Last Updated 26 ಆಗಸ್ಟ್ 2018, 14:21 IST
ಕೋಲಾರ ತಾಲ್ಲೂಕಿನ ಗೊಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಭಾನುವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಕೋಲಾರ ತಾಲ್ಲೂಕಿನ ಗೊಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಭಾನುವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.   

ಕೋಲಾರ: ‘ತಾಲ್ಲೂಕಿನ ಹಾಲು ಉತ್ಪಾದನಾ ಕೇಂದ್ರಗಳಲ್ಲಿ ಬಲ್ಕ್ ಮಿಲ್ಕ್ ಕೇಂದ್ರ (ಬಿಎಂಸಿ) ಸ್ಥಾಪನೆ ಮಾಡಲು ಕೋಚಿಮುಲ್ ಮಂಡಳಿ ಚಿಂತನೆ ನಡೆಸಿದೆ’ ಎಂದು ಕೋಚಿಮುಲ್ ನಿರ್ದೇಶಕ ಆರ್.ರಾಮಕೃಷ್ಣೇಗೌಡ ತಿಳಿಸಿದರು.

ತಾಲ್ಲೂಕಿನ ಗೊಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಭಾನುವಾರ ನಡೆದ ಸರ್ವಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿ, ‘ರೈತರು ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು ಎಂಬ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ’ ಎಂದರು.

‘ರೈತರು ರಾಸುಗಳಿಗೆ ವಿಮೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಅಪಘಾತ ವಿಮೆ, ಜೀವವಿಮೆ ಎರಡೂ ಯೋಜನೆಗಳಿಗೆ ₨ 1 ಲಕ್ಷ ಮತ್ತು ₨ 2 ಲಕ್ಷ ರೈತರ ಕುಟುಂಬಕ್ಕೆ ಸಿಗುತ್ತದೆ. ಈ ಕುರಿತು ಸಂಘದ ಕಾರ್ಯದರ್ಶಿ ರೈತರಿಗೆ ಅರಿವು ಮೂಡಿಸಿ ವಿಮೆ ಕಟ್ಟಲು ತಿಳಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಆಡಳಿತ ಮಂಡಳಿ ರಚನೆಯಾದ ನಂತರ 16% ಇದ್ದ ಎಸ್ಎನ್ಎಫ್‌ ಫಲಿತಾಂಶವನ್ನು 95% ಹೆಚ್ಚಿಸಲಾಗಿದೆ. ರೈತರು ಹಾಲಿನ ಕೇಂದ್ರಗಳಿಗೆ ಗುಣಮಟ್ಟದ ಹಾಲು ಸರಬರಾಜು ಮಾಡಿದ್ದಲ್ಲಿ ಸರ್ಕಾರದಿಂದ ದೊರೆಯುವ ₨ 5 ಪ್ರೋತ್ಸಾಹಧನ ಪಡೆಯಲು ಅರ್ಹರಾಗುತ್ತಾರೆ. ಎಲ್ಲಾ ಹಾಲು ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಒಕ್ಕೂಟದಿಂದ ₨ 1 ಲಕ್ಷದಿಂದ ₨ 5 ಲಕ್ಷದವರೆಗೆ ಸಹಾಯಧನ ನೀಡಲಾಗುವುದು. ಇದರ ಪ್ರಯೋಜನೆ ಪಡೆದುಕೊಳ್ಳಲು ಮುಂದಾಗಬೇಕು’ ಎಂದು ಹೇಳಿದರು.

‘ರೈತರು ಹಸುಗಳಿಗೆ ಸೂಕ್ತ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸುವ ಮೂಲಕ ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ನೀಡಬೇಕು’ ಎಂದು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಎಂ.ಸಿ ಶ್ರೀನಿವಾಸಗೌಡ ತಿಳಿಸಿದರು.

‘ಜಂತು ಹುಳು ಮಾತ್ರೆಯನ್ನು ಆರು ತಿಂಗಳಿಗೊಮ್ಮೆ ನೀಡಬೇಕು. ಪಶು ಸಂಗೋಪನೆ ಹಾಗೂ ಒಕ್ಕೂಟದ ವೈದ್ಯರು ಕಾಲುಬಾಯಿ ಲಸಿಕೆ ಹಾಕಲು ಬಂದಾಗ ಕಡ್ಡಾಯವಾಗಿ ಹಾಕಿಸುವ ಮೂಲಕ ಹಸುವಿನ ಆರೋಗ್ಯ ಕಾಪಾಡಬೇಕು’ ಎಂದು ಸಲಹೆ ನೀಡಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ನಾಲ್ಕು ವಿದ್ಯಾರ್ಥಿಗಳಿಗೆ ₨ ನಗದು ಬಹುಮಾನ ನೀಡಿ ಪುಸ್ಕರಿಸಲಾಯಿತು.

ಒಕ್ಕೂಟದ ವಿಸ್ತರಣಾಧಿಕಾರಿ ಎಚ್.ಎಸ್ ನಾಗೇಂದ್ರ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಜಿ ಮಂಜುನಾಥ್, ಸಂಘದ ನಿರ್ದೇಶಕರಾದ ಮಾರ್ಕೋಂಡಪ್ಪ, ವಿ.ರಾಜಬಾಬು, ಸಮೀರ್ ಪಾಷ, ಕಾರ್ಯದರ್ಶಿ ಜಿ ಆಂಜಿನಪ್ಪ, ಮುಖಂಡರಾದ ಜವನೇಗೌಡ. ಚಂದ್ರಮ್ಮ, ನೀಲಮ್ಮ, ಗೌರಮ್ಮ, ರಾಮಕೃಷ್ಣಪ್ಪ, ರಾಮಸುಬ್ಬಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.