ಕೋಲಾರ: ‘ಲೋಕಸಭೆ ಚುನಾವಣೆ ಅಧಿಸೂಚನೆ ಘೋಷಣೆಯಾದ ನಂತರ ಜಿಲ್ಲೆಯಲ್ಲಿ 23 ಅಬಕಾರಿ ಪ್ರಕರಣಗಳು ದಾಖಲಾಗಿವೆ. ಸುಮಾರು ₹ 50 ಲಕ್ಷ ಮೌಲ್ಯದ ಮದ್ಯ, ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 2 ಲಾರಿ ಹಾಗೂ 5 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಅಬಕಾರಿ ಇಲಾಖೆಯ ಅಧಿಕಾರಿ ಬಸವರಾಜ್ ತಿಳಿಸಿದರು.
‘17.073 ಲೀಟರ್ ಬಿಯರ್, 107 ಕೇಸ್ ಮದ್ಯ ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯ ಗಡಿ ಹಾಗೂ ವಿವಿಧ ಭಾಗಗಳಲ್ಲಿ ಚೆಕ್ ಪೋಸ್ಟ್ ಕಾರ್ಯನಿರ್ವಹಿಸುತ್ತಿವೆ’ ಎಂದು ಹೇಳಿದರು.
‘ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿದಲ್ಲಿ ಪ್ರಕರಣ ದಾಖಲು ಮಾಡಿ ಬೀಗ ಹಾಕಲಾಗುವುದು. ವೈನ್ ಶಾಪ್‍ಗಳು ಚುನಾವಣೆಯ ಪ್ರಯುಕ್ತ ಟೋಕನ್ ಹಂಚುವುದು ಮುಂತಾದ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಪರವನಾಗಿ ರದ್ದು ಗೊಳಿಸಿ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ’ ಎಂದರು,
ಚುನಾವಣೆಯಲ್ಲಿ ಕಳೆದ ಬಾರಿಗಿಂತ ಶೇ 120 ರಷ್ಟು ಹೆಚ್ಚು ಮದ್ಯ ಮಾರಾಟವಾಗದಂತೆ ಮದ್ಯದ ಅಂಗಡಿಗಳು ಜಾಗೃತಿ ವಹಿಸಬೇಕು. ಹೆಚ್ಚು ಮಾರಾಟವಾದಲ್ಲಿ ಸಮರ್ಪಕವಾದ ಕಾರಣ ತಿಳಿಸಲು ಸೂಚಿಸಲಾಗಿದೆ’ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಗರದ ಬಸ್ ನಿಲ್ದಾಣ ಸುತ್ತಮುತ್ತ ವೈನ್ ಶಾಪ್‍ಗಳಲ್ಲಿ ನಿಗದಿತ ಸಮಯವನ್ನು ಉಲ್ಲಂಘಿಸಿ ಬೆಳ್ಳಂಬೆಳಿಗ್ಗೆ ಮದ್ಯ ಮಾರಾಟ ಮಾಡುತ್ತಿರುವ ದೂರುಗಳಿಗೆ ಸಂಬಂಧಿಸಿದಂತೆ ವಿಶೇಷ ತಂಡ ರಚಿಸಲಾಗುವುದು ಎಂದರು.
ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಮಾರ್ಚ್ 25 ರಂದು ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಸಭೆ ಆಯೋಜಿಸಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.