ADVERTISEMENT

ಕೋಲಾರ: ಕೈಗಾರಿಕೆಗಳಲ್ಲಿ ಡ್ರಗ್ಸ್‌ ನಿಯಂತ್ರಣ ಸಮಿತಿ!

ಕಂಪನಿ, ಕೈಗಾರಿಕೆಗಳ ಮುಖ್ಯಸ್ಥರ ಸಭೆ ನಡೆಸಿ ಸೂಚನೆ ನೀಡಲಾಗುವುದು: ಜಿಲ್ಲಾಧಿಕಾರಿ ಎಂ.ಆರ್‌.ರವಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 3:11 IST
Last Updated 23 ಸೆಪ್ಟೆಂಬರ್ 2025, 3:11 IST
ಕೋಲಾರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ‘ನಾರ್ಕೊ ಸಮನ್ವಯ ಕೇಂದ್ರದ ಸಮಿತಿ’ ಸಭೆ ನಡೆಯಿತು. ಕೋಲಾರ ಜಿಲ್ಲಾ ಎಸ್ಪಿ ನಿಖಿಲ್‌ ಬಿ., ಕೆಜಿಎಫ್‌ ಜಿಲ್ಲಾ ಎಸ್ಪಿ ಶಿವಾಂಶು ರಜಪೂತ್‌ ಪಾಲ್ಗೊಂಡಿದ್ದರು
ಕೋಲಾರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ‘ನಾರ್ಕೊ ಸಮನ್ವಯ ಕೇಂದ್ರದ ಸಮಿತಿ’ ಸಭೆ ನಡೆಯಿತು. ಕೋಲಾರ ಜಿಲ್ಲಾ ಎಸ್ಪಿ ನಿಖಿಲ್‌ ಬಿ., ಕೆಜಿಎಫ್‌ ಜಿಲ್ಲಾ ಎಸ್ಪಿ ಶಿವಾಂಶು ರಜಪೂತ್‌ ಪಾಲ್ಗೊಂಡಿದ್ದರು   

ಕೋಲಾರ: ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿರುವ ಎಲ್ಲಾ ಕೈಗಾರಿಕೆ ಹಾಗೂ ಕಂಪನಿಗಳ ಮುಖ್ಯಸ್ಥರ ಸಭೆ ನಡೆಸಿ ಅವರವರ ಕಾರ್ಖಾನೆ ಹಾಗೂ ಕಂಪನಿಗಳಲ್ಲಿ ಮಾದಕ ವಸ್ತುಗಳ ನಿಯಂತ್ರಣ ಸಮಿತಿ ರಚನೆ ಮಾಡಲು ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್‌.ರವಿ ಹೇಳಿದರು.

ನಗರ ಹೊರವಲಯದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ‘ನಾರ್ಕೊ ಸಮನ್ವಯ ಕೇಂದ್ರದ ಸಮಿತಿ’ಯ ಜಿಲ್ಲಾ ಮಟ್ಟದ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಈಚೆಗೆ ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ಹೆಚ್ಚು ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ನಿಗಾ ಇಡಬೇಕಾದ ಅವಶ್ಯವಿದೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಣೆ, ಮಾರಾಟ ಹಾಗೂ ಅವುಗಳ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಎಲ್ಲಾ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು’ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ತಂಬಾಕು ಉತ್ಪನ್ನ ಸೇರಿದಂತೆ ಮಾದಕ ವಸ್ತುಗಳ ದುಶ್ಚಟಗಳಿಗೆ ಕಾರ್ಮಿಕರು ಒಳಗಾಗುತ್ತಿದ್ದಾರೆ. ಇವರಿಗೆ ಅರಿವು ಮೂಡಿಸುವುದು ಸೇರಿದಂತೆ ಮನಪರಿವರ್ತನೆಯ ಕಾರ್ಯಕ್ರಮಗಳನ್ನು ಕಾರ್ಮಿಕ ಇಲಾಖೆ ನಡೆಸಬೇಕು. ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿಯೇ ಇಂಥ ಕಾರ್ಯಕ್ರಮ ನಡೆಸಿ ವ್ಯಸನ ಬಿಡಿಸಬೇಕು’ ಎಂದು ನಿರ್ದೇಶಿಸಿದರು.

‘ಮಾದಕ ವಸ್ತುಗಳಿಗೆ ಯುವ ಸಮುದಾಯ ಹೆಚ್ಚು ಆಕರ್ಷಿತವಾಗುತ್ತಿದೆ. ಇವುಗಳ ಬಳಕೆಯಿಂದ ದೇಹದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ದೂರ ಉಳಿಯುವಂತೆ ನೋಡಿಕೊಳ್ಳಲು ಜಾಗೃತಿ ಕಾರ್ಯಕ್ರಮಗಳು ಹಾಗೂ ವಿವಿಧ ಸ್ಪರ್ಧೆಗಳನ್ನು ಶಾಲಾ ಕಾಲೇಜುಗಳಲ್ಲಿ ನಡೆಸಬೇಕು. ಈಗಾಗಲೇ ಕೆಲವು ವಿದ್ಯಾಸಂಸ್ಥೆಗಳಲ್ಲಿ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಪದವಿ ಕಾಲೇಜುಗಳಲ್ಲಿ ಸಮಿತಿ ರಚಿಸಿ ಒಂದು ವರ್ಷದ ಯೋಜನೆ ರೂಪಿಸಿಕೊಂಡು ಸಂಪೂರ್ಣವಾಗಿ ಮಾದಕ ವಸ್ತುಗಳ ನಿಯಂತ್ರಣ ಮಾಡಬೇಕು ಎಂದು ಅವರ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಖಾಸಗಿ ಪಾರ್ಸೆಲ್ ಸರ್ವೀಸ್‍ಗಳ ಕಚೇರಿಗಳನ್ನು ಹಾಗೂ ಆನ್‍ಲೈನ್ ಮಾರುಕಟ್ಟಯ ಗೋದಾಮುಗಳನ್ನು ಪರಿಶೀಲಿಸಬೇಕು. ರೈಲ್ವೆ ಇಲಾಖೆಯ ಸಿಬ್ಬಂದಿ ಸಹ ನಿಲ್ದಾಣದಲ್ಲಿ ಮಾದಕ ವಸ್ತುಗಳ ಸರಬರಾಜು ಬಗ್ಗೆ ನಿಗಾ ವಹಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತನಿಖೆ ನಡೆಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮಾತನಾಡಿ, ‘ಜಿಲ್ಲೆಯಲ್ಲಿ ಡ್ರಗ್ಸ್‌ ಸರಬರಾಜು ಮಾಡುತ್ತಿರುವ ಜಾಲದ ಸಂಪರ್ಕ ಕಡಿತಗೊಳಿಸಲು ಹಲವಾರು ಕ್ರಮ ಕೈಗೊಳ್ಳಲಾಗಿದೆ. ಹಲವರನ್ನು ಬಂಧಿಸಿ ಮಾದಕ ವಸ್ತು ವಶಪಡಿಸಿಕೊಳ್ಳಲಾಗುತ್ತಿದೆ. ಬಂಧಿತರನ್ನು ತನಿಖೆಗೆ ಒಳಪಡಿಸಿ ಇನ್ನಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ. ಕೈಗಾರಿಕಾ ಪ್ರದೇಶದಲ್ಲೂ ನಿಗಾ ಇಡಲಾಗಿದೆ’ ಎಂದರು.

‘ನಿರ್ಬಂಧಿತ ಮತ್ತುಭರಿಸುವ ಔಷಧಿಗಳು ಜನ ಸಾಮಾನ್ಯರೆಲ್ಲರಿಗೂ ಮಾರಾಟ ಮಾಡುವಂತಿಲ್ಲ. ಈ ಬಗ್ಗೆ ಜಿಲ್ಲೆಯ ಮಾದಕ ವಸ್ತುಗಳ ನಿಯಂತ್ರಣ ಅಧಿಕಾರಿಗಳು ಔಷಧಿ ಅಂಗಡಿಗಳಲ್ಲಿ ಪರಿಶೀಲಿಸಿ ಎಚ್ಚರ ವಹಿಸಬೇಕು’ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು. ಶಾಲಾ ಕಾಲೇಜುಗಳಲ್ಲಿನ ಡ್ರಗ್ಸ್‌ ನಿಯಂತ್ರಣ ಸಮಿತಿಗಳು ಪ್ರತಿತಿಂಗಳ ಚಟುವಟಿಕೆಗಳ ವರದಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸಲ್ಲಿಸಬೇಕು ಎಂದು ತಿಳಿಸಿದರು.

ಕಾಲೇಜು ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ರಜೆಯ ದಿನಗಳಲ್ಲಿ ಮನೆಗೆ ಹೋಗಿ ಮರಳಿ ಬರುವ ಸಂದರ್ಭದಲ್ಲಿ ಯಾವುದಾದರೂ ಮಾದಕ ವಸ್ತು ತೆಗೆದುಕೊಂಡು ಬರುತ್ತಾರೆಯೇ ಎಂಬುದನ್ನು ಪರಿಶೀಲಿಸಬೇಕು ಎಂದರು.

ಸಭೆಯಲ್ಲಿ ‘ಪ್ರಜಾವಾಣಿ’ಯ ವಿಶೇಷ ವರದಿ ಪ್ರಸ್ತಾಪವಾಯಿತು. ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್‌, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಜಿ.ಶ್ರೀನಿವಾಸ್‌, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್, ಅಬಕಾರಿ ಉಪ ಆಯುಕ್ತೆ ಸೈಯದ್ ಅಜ್ಮತ್ ಆಫ್ರಿನ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಪರ್ವೀನ್ ತಾಜ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

‘ಪ್ರಜಾವಾಣಿ’ ವರದಿಯಲ್ಲಿ ಸೋಮವಾರ ಪ್ರಕಟವಾಗಿದ್ದ ವಿಶೇಷ ವರದಿ

‘ಪ್ರಜಾವಾಣಿ’ ವರದಿ ಬೆನ್ನಲೇ ಕ್ರಮ

‘ಪ್ರಜಾವಾಣಿ’ಯಲ್ಲಿ ಸೋಮವಾರ ಪ್ರಕಟವಾಗಿದ್ದ ‘ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಗಾಂಜಾ ಘಾಟು’ ಎಂಬ ವಿಶೇಷ ವರದಿ ಬೆನ್ನಲ್ಲೇ ಜಿಲ್ಲಾಧಿಕಾರಿ ಎಂ.ಆರ್‌.ರವಿ ನೇತೃತ್ವದಲ್ಲಿ ‘ನಾರ್ಕೊ ಸಮನ್ವಯ ಕೇಂದ್ರದ ಸಮಿತಿ’ಯ ಜಿಲ್ಲಾ ಮಟ್ಟದ ಸಭೆ ನಡೆದಿದ್ದು ಮಾದಕ ವಸ್ತುಗಳ ನಿಯಂತ್ರಣಕ್ಕೆ ಮತ್ತಷ್ಟು ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ. ‘ಪ್ರಜಾವಾಣಿ’ ವರದಿ ಪ್ರಸ್ತಾಪಿಸಿದ ಎಂ.ಆರ್‌.ರವಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಈ ಸಂಬಂಧ ಕೈಗಾರಿಕಾ ಪ್ರದೇಶದಲ್ಲಿರುವ ಎಲ್ಲಾ ಕೈಗಾರಿಕೆಗಳ ಮುಖ್ಯಸ್ಥರ ಸಭೆ ನಡೆಸಿ ನೌಕರರಿಗೆ ಕಾರ್ಮಿಕರಿಗೆ ಅರಿವು ಮೂಡಿಸಲು ಹಾಗೂ ನಿಗಾ ಇಡಲು ಮಾದಕ ವಸ್ತು ನಿಯಂತ್ರಣ ಸಮಿತಿ ರಚಿಸುವ ಸಂಬಂಧ ಸೂಚನೆ ನೀಡಲು ಚರ್ಚಿಸಿದರು.

ಅ.4ಕ್ಕೆ ಜಿಲ್ಲೆಯಲ್ಲಿ ಬೈಕ್‌ ಜಾಥಾ ನಶೆ ಮುಕ್ತ

ಕೋಲಾರ ಜಿಲ್ಲೆ ಮಾಡುವ ಸಂಬಂಧ ಅರಿವು ಮೂಡಿಸಲು ಅ.4 ರಂದು ಜಿಲ್ಲಾಡಳಿತದಿಂದ ಜಿಲ್ಲೆಯಾದ್ಯಂತ ಬೈಕ್ ಜಾಥಾ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಆ ದಿನ ಜಿಲ್ಲೆಯ ಆರೂ ತಾಲ್ಲೂಕುಗಳಲ್ಲೂ ಬೈಕ್‌ಗಳ ಮೂಲಕ ಜಾಥಾ ನಡೆಸಿ ಪ್ರತಿ ತಾಲ್ಲೂಕಿನಲ್ಲೂ ಒಂದು ರೀತಿಯ ಅರಿವು ಕಾರ್ಯಕ್ರಮ ಮಾಡಲಾಗುವುದು. ಆಯಾಯ ಕ್ಷೇತ್ರದ ಶಾಸಕರು ಪಾಲ್ಗೊಳ್ಳುತ್ತಾರೆ. ಇದರಿಂದ ಜನರಿಗೆ ನಾವೆಲ್ಲರೂ ಉತ್ತಮ ಸಂದೇಶವನ್ನು ನೀಡಬಹುದು ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್‌ ನಿಯಂತ್ರಣ ಸಮಿತಿ ರಚಿಸಿ ನಿಗಾ ಇಡಲಾಗಿದೆ. ಮಾದಕ ವ್ಯಸನ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಕೈಜೋಡಿಸಬೇಕು.
-ನಿಖಿಲ್‌ ಬಿ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.