ಕೋಲಾರ: ‘ಪರಿಶಿಷ್ಟ ಜಾತಿಯ 101 ಜಾತಿಗಳ ಒಟ್ಟು 80 ಕುಲಕಸುಬುಗಳು ಪಟ್ಟಿಯಲ್ಲಿವೆ. ಪ್ರಶ್ನಾವಳಿಯಲ್ಲಿ ಇತರೆ ಎಂಬ ಕಲಂ ಇದ್ದು, ಯಾವ ಜಾತಿಯವರ ಕಸುಬು ಬಿಟ್ಟು ಹೋಗಿದೆಯೋ ಅದನ್ನು ಅಲ್ಲಿ ಸೇರಿಸಬಹುದು. ನಾವು ಯಾವುದೇ ಸಮುದಾಯದ ಕುಲಕಸುಬು ಬಿಟ್ಟಿಲ್ಲ. ಭೋವಿ ಸಮುದಾಯ ಸೇರಿದಂತೆ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಪರಿಶಿಷ್ಟ ಜಾತಿ ಸಮೀಕ್ಷೆಯ ಏಕ ಸದಸ್ಯ ವಿಚಾರಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ತಿಳಿಸಿದರು.
ಸಮೀಕ್ಷೆಯಲ್ಲಿ ಭೋವಿ ಸಮುದಾಯದ ಕೆಲ ಕುಲಕಸುಬು ಕೈಬಿಟ್ಟಿರುವ ದೂರಿನ ಬಗ್ಗೆ ನಗರದಲ್ಲಿ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ‘ನಾವು 2011ರ ಜನಗಣತಿಯಂತೆ ಕ್ರಮ ವಹಿಸಿದ್ದೇವೆ. 2015ರಲ್ಲಿ ಭೋವಿ ಜಾತಿಗೆ ಭೋವ (ಬೆಸ್ತರನ್ನು ಹೊರಡುಪಡಿಸಿ), ಕಲ್ಲು ವಡ್ಡರು, ಮಣ್ಣು ವಡ್ಡರು ಎಂಬ ಹೆಸರು ಸೇರಿಸಲಾಯಿತು. ಅದನ್ನು ಮತ್ತೊಮ್ಮೆ ಪರಿಶೀಲಿಸಿ ನಮ್ಮ ಆ್ಯಪ್‌ಗೆ ಸೇರಿಸಿದೆವು. ಮಣ್ಣು ವಡ್ಡರು, ಕಲ್ಲು ವಡ್ಡರು ಎಂಬುದರ ಜೊತೆಗೆ ಕಲ್ಲುಕುಟುಕರು, ಕಲ್ಲು ಕೆತ್ತನೆ ಮಾಡುವವರು ಎಂಬ ಕಸುಬನ್ನೂ ಸೇರಿಸಿದ್ದೇವೆ’ ಎಂದರು.
‘ಹೊಲೆಯ’ ಎಂಬ ಪದ ಬಳಸುತ್ತಿರುವುದಕ್ಕೆ ಪ್ರತಿಕ್ರಿಯಿಸಿ, ‘ಈ ಸಮಸ್ಯೆ ಇದೆ. ಯಾವುದೇ ಜಾತಿಯವರು ತಮಗೆ ತಾವೇ ಹೆಸರು ಕೊಟ್ಟುಕೊಂಡಿಲ್ಲ. ಯಾವುದೋ ಕಾಲದಲ್ಲಿ ಸವರ್ಣೀಯರು ಪರಿಶಿಷ್ಟರಿಗೆ ಈ ರೀತಿ ಹೆಸರು ಇಟ್ಟಿದ್ದರು. ಜಾತಿ ಹೆಸರು ಹಿಡಿದುಕೊಂಡು ಬೈಯ್ಯುವ ಪರಿಪಾಠ ಈಗಲೂ ಇದೆ. ಈ ಎಲ್ಲಾ ವಿಚಾರ ಅಧ್ಯಯನ ಮಾಡಿ ಸರ್ಕಾರಕ್ಕೆ ಸೂಕ್ತ ಸಲಹೆ ನೀಡಲಿದ್ದೇವೆ’ ಎಂದು ಹೇಳಿದರು.
‘ಪರಿಶಿಷ್ಟ ಜಾತಿಯ 101 ಜಾತಿ ಹೊರತುಪಡಿಸಿ ಹೊಸ ಜಾತಿ ಸೇರಿಸಲು ಆಗದು. ರಾಜ್ಯ ಸರ್ಕಾರಕ್ಕೆ ಆ ಅಧಿಕಾರ ಇಲ್ಲ. ಅದಕ್ಕೆ ಬೇರೆಯದ್ದೇ ಆದ ಕ್ರಮವಿದೆ. ಹಾಗೆಯೇ ಆಯಾಯ ಸಮುದಾಯಗಳು ತಮ್ಮ ಜಾತಿಗಳ ಹೆಸರನ್ನು ಸ್ವಇಚ್ಛೆಯಿಂದ ಬದಲಾಯಿಸಿಕೊಳ್ಳಲು ಅವಕಾಶವಿರಬೇಕು. ಈ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ರಾಜ್ಯ, ನಗರ, ರಸ್ತೆ, ವೃತ್ತಗಳು, ನಮ್ಮ ಹೆಸರನ್ನು ಬದಲಾಯಿಸುತ್ತಿದ್ದೇವೆ. ಯಾರೋ, ಯಾವುದೋ ಶತಮಾನಗಳಲ್ಲಿ ಹೆಸರಿರುವ ಜಾತಿಗಳನ್ನು, ಅವಮಾನವನ್ನು ಎಷ್ಟು ದಿನ ಸಹಿಸಿಕೊಳ್ಳಲು ಸಾಧ್ಯ’ ಎಂದು ಪ್ರಶ್ನಿಸಿದರು.
ಪರಿಶಿಷ್ಟ ಜಾತಿ ಸಮೀಕ್ಷೆ ನಂತರ ಜಾತಿ ಪ್ರಮಾಣಪತ್ರ ವಿಚಾರದಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಬಗ್ಗೆ ಮಾತನಾಡಿ, ‘ಯಾವುದೇ ಜಾತಿ ನಮೂದಿಸಿದರೂ ಜಾತಿ ಪ್ರಮಾಣಪತ್ರಕ್ಕೆ ಯಾವುದೇ ತೊಂದರೆ ಆಗದಂತೆ ಸರ್ಕಾರದ ಗಮನಕ್ಕೆ ತರುತ್ತೇವೆ. ಜಾತಿ ಪ್ರಮಾಣಪತ್ರದಲ್ಲಿ ಯಾವ ಜಾತಿ ಇರುತ್ತದೋ ಅದೇ ಉಳಿಯುತ್ತದೆ’ ಎಂದರು.
ಕೆಲ ಪರಿಶಿಷ್ಟ ಜಾತಿಯವರು ಕ್ರೈಸ್ತ ಧರ್ಮಕ್ಕೆ, ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದು ಅದನ್ನು ಯಾವ ರೀತಿ ಪರಿಗಣಿಸುತ್ತೀರಿ ಎಂಬುದಕ್ಕೆ, ‘ಸಮೀಕ್ಷೆಯ ಪ್ರಶ್ನಾವಳಿಯಲ್ಲಿ ಧರ್ಮದ ಕಲಂ ಸೇರಿಸಿಲ್ಲ. 101 ಜಾತಿಗಳಲ್ಲಿ ಜಾತಿ ಪತ್ರ ಪಡೆದು ಮೀಸಲಾತಿ ಸೌಲಭ್ಯ ಹಾಗೂ ಇತರ ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳಾಗಿರುತ್ತಾರೋ ಅವರು ಅದೇ ಜಾತಿ ನಮೂದಿಸಬೇಕು’ ಎಂದು ಹೇಳಿದರು.
‘ಜಾತಿ ಗಣತಿಗೆ ಸಂಬಂಧಿಸಿದ ಕಾಂತರಾಜ ಆಯೋಗ ಸಿದ್ಧಪಡಿಸಿದ ವರದಿಯಲ್ಲಿ ಈ ಮಾಹಿತಿ ಇರುವುದು ಮಾಧ್ಯಮಗಳಿಂದಲೇ ನಮಗೆ ಗೊತ್ತಾಗಿದೆ. ಅಲ್ಲೂ ಗೊಂದಲ ಇದೆ. ಸುಮಾರು 29 ಲಕ್ಷ ಪರಿಶಿಷ್ಟ ಜಾತಿ ಜನರು ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಎಂದು ಬರೆಸಿದ್ದಾರೆ. ಒಂದೊಂದರಲ್ಲಿ ಯಾವ ಜಾತಿ ಇದೆ ಎಂಬ ಮಾಹಿತಿ ಇಲ್ಲ’ ಎಂದರು.
ಎಚ್.ಎನ್.ನಾಗಮೋಹದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ಸಲಹೆಗಾರ ಕಾಂತರಾಜ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್, ಇ–ಗವರ್ನೆನ್ಸ್ ಅಧಿಕಾರಿ ಯತೀಶ್, ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಉಪವಿಭಾಗಾಧಿಕಾರಿ ಡಾ.ಎಚ್.ಪಿ.ಎಸ್.ಮೈತ್ರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್ ಇದ್ದರು.
101 ಜಾತಿ ಹೊರತುಪಡಿಸಿ ಹೊಸ ಜಾತಿ ಸೇರಿಸಲು ಆಗದು ಜಾತಿ ಪ್ರಮಾಣಪತ್ರಕ್ಕೆ ತೊಂದರೆ ಆಗದು: ಭರವಸೆ ಮೊದಲ ದಿನ ರಾಜ್ಯದಲ್ಲಿ 10,746 ಕುಟುಂಬಗಳ ಸಮೀಕ್ಷೆ
ಪರಿಶಿಷ್ಟ ಜಾತಿ ಸಮೀಕ್ಷೆ ಪರಿಶೀಲನೆ
ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರು ಕೋಲಾರದ ಅಂಬೇಡ್ಕರ್ ನಗರ ಗಾಂಧಿನಗರ ಗದ್ದೆಕಣ್ಣೂರು ಟಮಕ ಸೇರಿದಂತೆ ವಿವಿಧೆಡೆ ಮಂಗಳವಾರ ಪರಿಶಿಷ್ಟ ಜಾತಿಯ ಸಮೀಕ್ಷೆ ವೀಕ್ಷಿಸಿದರು. ಗಣತಿದಾರರು ಮನೆಮನೆಗೆ ತೆರಳಿ ಯಾವ ರೀತಿ ಪ್ರಶ್ನೆ ಕೇಳಿ ಜಾತಿ ನಮೂದು ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿದರು. ಗಣತಿದಾರರು ಸಂಯಮದಿಂದ ವರ್ತಿಸಬೇಕೆಂದು ಸೂಚನೆ ನೀಡಿ ಪರಿಶಿಷ್ಟ ಜಾತಿಯವರು ತಮ್ಮ ಜಾತಿ ಹೆಸರನ್ನು ಸ್ಪಷ್ಟವಾಗಿ ನಮೂದಿಸಬೇಕು ಎಂದರು. ಸಮೀಕ್ಷೆಯ ಮೊದಲ ದಿನ ರಾಜ್ಯದಲ್ಲಿ ಒಟ್ಟು 10746 ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್ ತಿಳಿಸಿದರು. ‘ಸಮೀಕ್ಷೆಯು ಸುಗಮವಾಗಿ ನಡೆಯುತ್ತಿದ್ದು ಎಲ್ಲೂ ಗೊಂದಲ ಉಂಟಾಗಿಲ್ಲ. ಪ್ರಶ್ನಾವಳಿ ಭರ್ತಿ ಮಾಡುವಾಗ ಕೆಲವೆಡೆ ಸಣ್ಣಪುಟ್ಟ ತಾಂತ್ರಿಕ ಅಡಚಣೆ ಉಂಟಾಗಿದ್ದು ಸರಿಪಡಿಸಲಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.