
ಕೆಜಿಎಫ್: ತಾಲ್ಲೂಕು ಆಡಳಿತ ಸೌಧದಲ್ಲಿ ವಿದ್ಯುತ್ ಕೈಕೊಟ್ಟು ಜನರ ಕೆಲಸ–ಕಾರ್ಯಗಳಿಗೆ ಅಡ್ಡಿಯಾಗಬಾರದು ಎಂಬ ಕಾರಣಕ್ಕಾಗಿ ಬೃಹತ್ ಡೀಸೆಲ್ ಜನರೇಟರ್‌ಗಳನ್ನು ಅಳವಡಿಸಲಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಅಳವಡಿಸಲಾಗಿರುವ ಈ ಜನರೇಟರ್‌ಗಳ ನಿರ್ವಹಣೆ ಕೊರತೆಯಿಂದಾಗಿ ಅವುಗಳು ತುಕ್ಕು ಹಿಡುಯುವ ಸ್ಥಿತಿಯಲ್ಲಿವೆ.
ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಸುಮಾರು ₹10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ತಾಲ್ಲೂಕು ಆಡಳಿತ ಸೌಧವನ್ನು ಉದ್ಘಾಟಿಸಿದ್ದರು. ಹೊಸದಾಗಿ ನಿರ್ಮಾಣವಾದ ಕಚೇರಿಯಲ್ಲಿ ಎಲ್ಲ ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಹಲವಾರು ಇಲಾಖೆಗಳು ಒಂದೇ ಸೂರಿನಲ್ಲಿ ಬರುತ್ತಿದ್ದ ಕಾರಣ ಸುಮಾರು ₹6 ಲಕ್ಷ ಮೌಲ್ಯದ ಡೀಸೆಲ್ ಜನರೇಟರ್ ಅಳವಡಿಸಲಾಗಿತ್ತು. ಜನರೇಟರ್‌ನಿಂದಾಗಿ ಕಚೇರಿಯ ಲಿಫ್ಟ್ ಸೇರಿದಂತೆ ಕಂಪ್ಯೂಟರ್, ಸಿಸಿಟಿವಿ ಮೊದಲಾದ ಉಪಕರಣಗಳು ವಿದ್ಯುತ್ ವ್ಯತ್ಯಯವಿಲ್ಲದೆ ಕೆಲಸ ಮಾಡುತ್ತಿದ್ದವು. ತಾಲ್ಲೂಕು ಕಚೇರಿ ವೆಚ್ಚದಲ್ಲಿಯೇ ಡೀಸೆಲ್ ಹಾಕಿಸಲಾಗುತ್ತಿತ್ತು. ಅದರ ಉಸ್ತುವಾರಿ ಕೂಡ ಕಂದಾಯ ಇಲಾಖೆಯೇ ವಹಿಸಿಕೊಂಡಿತ್ತು.
ಆದರೆ, ಕ್ರಮೇಣ ದಿನಗಳು ಉರುಳಿದಂತೆ ಕಚೇರಿಯ ಕಂಪ್ಯೂಟರ್‌ಗಳಿಗೆ ಬ್ಯಾಟರಿ ಸಂಪರ್ಕ ಸಿಕ್ಕಿದ ಬಳಿಕ, ಜನರೇಟರ್ ಬಳಕೆ ಮತ್ತು ಅವುಗಳ ಉಪಯೋಗವನ್ನೇ ಅಧಿಕಾರಿಗಳು ಮರೆತರು. ವಿದ್ಯುತ್ ಕಡಿತಗೊಂಡರೂ, ಬ್ಯಾಟರಿ ಸಂಪರ್ಕದಿಂದಾಗಿ ಕಂಪ್ಯೂಟರ್, ಪ್ರಿಂಟರ್‌ಗಳು ಕಾರ್ಯ ನಿರ್ವಹಿಸುತ್ತಿದ್ದ ಕಾರಣ ಜನರೇಟರ್ ಬಳಕೆಗೆ ತಿಲಾಂಜಲಿ ಹಾಡಲಾಯಿತು. ಈ ಮಧ್ಯೆ ಸಬ್ ರಿಜಸ್ಟ್ರರ್ ಕಚೇರಿಯಲ್ಲಿ ಕೂಡ ಬ್ಯಾಟರಿ ಜೊತೆಗೆ ಅವರಿಗೂ ಕೇಂದ್ರ ಕಚೇರಿಯಿಂದ ಮತ್ತೊಂದು ಜನರೇಟರ್ ಮಂಜೂರಾಯಿತು. ಇದೀಗ ಅದೂ ಕೂಡ ಹಾಳು ಬೀಳುವ ಸ್ಥಿತಿಯಲ್ಲಿದೆ. ಕಚೇರಿಯಲ್ಲಿರುವ ಬ್ಯಾಟರಿ ಎರಡು ದಿನ ಬರುತ್ತದೆ. ಜನರೇಟರ್ ಇಟ್ಟುಕೊಂಡು ಏನು ಮಾಡುವುದು ಎನ್ನುತ್ತಾರೆ ಸಬ್ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿ.
ಒಟ್ಟಾರೆ ಜನರೇಟರ್‌ಗಳು ತಾಲ್ಲೂಕು ಆಡಳಿತ ಕಚೇರಿಗೆ ನಿರುಪಯುಕ್ತವಾಗಿವೆ. ಅವುಗಳು ಬಳಕೆಯಾಗದೆ ನಿರುಪಯುಕ್ತವಾಗಿರುವ ಕಾರಣ ಅವುಗಳ ನಿರ್ವಹಣೆಯನ್ನೇ ತಾಲ್ಲೂಕು ಆಡಳಿತ ಮರೆತಂದಿದೆ. ಇದರಿಂದಾಗಿ ಈ ಜನರೇಟರ್ ಅಳವಡಿಸಿದ ಅಕ್ಕಪಕ್ಕದ ಜಾಗದಲ್ಲಿ ಗಿಡ ಮತ್ತು ಪೊದೆ ಬೆಳೆದುಕೊಂಡಿದೆ. ಅಲ್ಲದೆ, ಜನರೇಟರ್‌ಗಳು ಗಾಳಿ, ಮಳೆಯಲ್ಲಿ ನೆನೆಯುತ್ತಿರುವ ಕಾರಣ ತುಕ್ಕು ಹಿಡಿಯುವ ಸ್ಥಿತಿಗೆ ಬಂದಿವೆ ಎಂದು ಕಚೇರಿ ಸಿಬ್ಬಂದಿಯೇ ಹೇಳುತ್ತಾರೆ.
ಹೊಸ ಕಚೇರಿ ಪ್ರಾರಂಭವಾದಾಗ ಕೆಲವು ದಿನ ಜನರೇಟರ್ ಉಪಯೋಗದಲ್ಲಿಯೇ ಇರಲಿಲ್ಲ. ನಂತರ ಪ್ರಜಾವಾಣಿ ವರದಿ ನಂತರ ಎಚ್ಚೆತ್ತುಕೊಂಡಿದ್ದ ಸಿಬ್ಬಂದಿ ಕೂಡಲೇ ಜನರೇಟರ್ ಸಂಪರ್ಕ ಕಲ್ಪಿಸಿಕೊಟ್ಟಿದ್ದರು. ಜನರೇಟರ್ ಬಳಕೆ ಇಲ್ಲದ ಕಾರಣ ಕಚೇರಿಯ ಲಿಫ್ಟ್ ಕೂಡ ಕೆಲಸ ಮಾಡುತ್ತಿಲ್ಲ. ವಿದ್ಯುತ್ ಇದ್ದಾಗ ಮಾತ್ರ ಲಿಫ್ಟ್ ಕೆಲಸ ಮಾಡುತ್ತದೆ. ಇಲ್ಲವಾದಲ್ಲಿ ಹಿರಿಯ ನಾಗರಿಕರು, ಅಂಗವಿಕಲರು ಒಂದನೇ ಮತ್ತು 2ನೇ ಮಹಡಿಗೆ ನಡೆದುಕೊಂಡೇ ಹೋಗುವ ಅನಿವಾರ್ಯತೆ ಎದುರಾಗಿದೆ. ಐದು ದಿನಗಳಿಂದ ಲಿಫ್ಟ್ ಕೆಟ್ಟುಹೋಗಿದ್ದು, ವಿದ್ಯುತ್ ಇದ್ದಾಗ ಕೂಡ ಕೆಲಸ ಮಾಡುತ್ತಿಲ್ಲ. ಕಂದಾಯ ಅಧಿಕಾರಿಗಳು ಅದನ್ನು ಕೂಡ ಸರಿಪಡಿಸುವ ಗೋಜಿಗೆ ಹೋಗಿಲ್ಲ.
ನಿರ್ವಹಣೆ ಹೊಣೆ ಯಾರದ್ದು?
ಲೋಕೋಪಯೋಗಿ ಇಲಾಖೆಯ ಎಲೆಕ್ಟ್ರಿಕಲ್ ವಿಭಾಗದವರು ಗುತ್ತಿಗೆದಾರರ ಮೂಲಕ ಖರೀದಿ ಮಾಡಿ ಜನರೇಟರ್ ಉಸ್ತುವಾರಿ ವಹಿಸಿಕೊಂಡು ನಂತರ ತಹಶೀಲ್ದಾರರಿಗೆ ಹಸ್ತಾಂತರ ಮಾಡಿದ್ದರು. ಜನರೇಟರ್‌ಗೆ ಇದ್ದ ಒಂದು ವರ್ಷದ ಗ್ಯಾರಂಟಿ ಮತ್ತು ನಿರ್ವಹಣೆ ಅವಧಿ ಈಗ ಮುಗಿದಿದೆ. ಎಲ್ಲ ಉಸ್ತುವಾರಿಯನ್ನು ಕಂದಾಯ ಅಧಿಕಾರಿಗಳೇ ನೋಡಿಕೊಳ್ಳಬೇಕು ಎಂದು ಎಲೆಕ್ಟ್ರಿಕಲ್ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.