ADVERTISEMENT

ಕೋಲಾರ: ಸತ್ಯ ಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆ

ಜಿಲ್ಲೆಯಲ್ಲಿ 13ರಿಂದ ಎರಡು ದಿನ ನಡೆಯಲಿರುವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 4:46 IST
Last Updated 12 ಆಗಸ್ಟ್ 2025, 4:46 IST
ಕೋಲಾರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಾಯಿ ವಿಪತ್ತು ನಿರ್ವಹಣಾ ತಂಡದ ರಾಜ್ಯ ಉಸ್ತುವಾರಿ ರಾಜ್‍ಕುಮಾರ್ ಮಾತನಾಡಿದರು. ಜಿ.ಪಿ.ಕಮಲಾಕ್ಷ, ಆರ್.ಶಶಿಕುಮಾರ್, ಅಮರ ನಾರಾಯಣ, ಮಂಜುಳಾ ಪಾಲ್ಗೊಂಡಿದ್ದರು
ಕೋಲಾರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಾಯಿ ವಿಪತ್ತು ನಿರ್ವಹಣಾ ತಂಡದ ರಾಜ್ಯ ಉಸ್ತುವಾರಿ ರಾಜ್‍ಕುಮಾರ್ ಮಾತನಾಡಿದರು. ಜಿ.ಪಿ.ಕಮಲಾಕ್ಷ, ಆರ್.ಶಶಿಕುಮಾರ್, ಅಮರ ನಾರಾಯಣ, ಮಂಜುಳಾ ಪಾಲ್ಗೊಂಡಿದ್ದರು   

ಕೋಲಾರ: ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಜನ್ಮ ಶತಮಾನೋತ್ಸವ ಅಂಗವಾಗಿ ಶ್ರೀಸತ್ಯ ಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆಯು ನಗರದಲ್ಲಿ ಆ.13ರ ಬುಧವಾರ ನಡೆಯಲಿದೆ ಎಂದು ಶ್ರೀಸತ್ಯ ಸಾಯಿ ವಿಪತ್ತು ನಿರ್ವಹಣಾ ತಂಡದ ರಾಜ್ಯ ಉಸ್ತುವಾರಿ ರಾಜ್‍ಕುಮಾರ್ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಆ.13ರಂದು ಕೋಲಾರ ಜಿಲ್ಲೆಗೆ ಬರುವ ರಥವನ್ನು ಚಿಂತಾಮಣಿ ರಸ್ತೆಯ ಪವರ್ ಗ್ರಿಡ್ ಮುಂಭಾಗದಲ್ಲಿ ಸ್ವಾಗತಿಸಲಾಗುವುದು ಎಂದರು.

ರಥವು ಕೋಲಾರದ ವಾಲ್ಮೀಕಿ ವೃತ್ತದಿಂದ (ಕಾಲೇಜು ಸರ್ಕಲ್) ಬೆಳಿಗ್ಗೆ 10.30ಕ್ಕೆ ಪೂರ್ಣಕುಂಭ, 45 ಕಳಸ, ವೇದಘೋಷ, 9 ಮಂಗಳ ದ್ರವ್ಯಧಾರಕರು, ಮಂಗಳವಾದ್ಯ, ಕಲಾಮೇಳ, ಕೇರಳ ಚಂಡೆ, ಭಜನೆಯೊಂದಿಗೆ ಎಂ.ಜಿ ರಸ್ತೆ ಮೂಲಕ ಎಸ್.ಎನ್.ಆರ್ ಆಸ್ಪತ್ರೆ ಮುಂಭಾಗದ ಶ್ರೀಸತ್ಯ ಸಾಯಿ ಸೇವಾ ಕ್ಷೇತ್ರಕ್ಕೆ ತೆರಳಲಿದೆ ಎಂದು ಹೇಳಿದರು.

ADVERTISEMENT

ಪೂಜೆ, ಪಾದುಕಾ ದರ್ಶನ ಮತ್ತು ಸಭಾ ಕಾರ್ಯಕ್ರಮ ಆಯೋಜಿಸಿದ್ದು, ಸಂಜೆ ವೇದ ಘೋಷ, ಬಾಲವಿಕಾಸ ಮಕ್ಕಳಿಂದ ಭರತನಾಟ್ಯ, ವಿಷ್ಣು, ಲಲಿತಾ ಸಹಸ್ರನಾಮ, ಸ್ವಾಮಿಯ ಸಂದೇಶ ಹಾಗೂ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ ಎಂದರು.

ಆ.14ರಂದು ಕೆಜಿಎಫ್‍ಗೆ ರಥ ಸಂಚರಿಸಲಿದೆ. ಓಂಕಾರ ಸುಪ್ರಭಾತ, ನಗರ ಸಂಕೀರ್ತನೆ, ರುದ್ರಾಭಿಷೇಕ, ಪಾದುಕಾಪೂಜೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ. ಆ.15ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಗೆ ರಥವನ್ನು ಬೀಳ್ಕೊಡಲಾಗುವುದು ಎಂದು ವಿವರಿಸಿದರು.

ಶ್ರೀಸತ್ಯ ಸಾಯಿ ಸೇವಾ ಆರ್ಗನೈಜೇಶನ್ ಜಿಲ್ಲಾ ಯುವ ಸಂಯೋಜಕ ಜಿ.ಪಿ.ಕಮಲಾಕ್ಷ ಮಾತನಾಡಿ, ಭಗವಾನ್ ಶ್ರೀಸತ್ಯ ಸಾಯಿ ಬಾಬಾ ಜನ್ಮ ಶತಮಾನೋತ್ಸವ ಅಂಗವಾಗಿ ಈ ರಥಯಾತ್ರೆ ಆಯೋಜಿಸಿದ್ದು‌ ಬಾಬಾರವರ ಸನ್ನಿಧಿಯ ದಿವ್ಯ ದರ್ಶನ, ಪಾದುಕಾ ನಮಸ್ಕರ ಮತ್ತು ವಿಭೂತಿ ಪ್ರಸಾದ ಪಡೆಯಲು ಅವಕಾಶವಿರುವುದನ್ನು ಭಕ್ತರು ಸದ್ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರಥ ಮೇಲ್ವಿಚಾರಕ ಆರ್.ಶಶಿಕುಮಾರ್, ಶ್ರೀಸತ್ಯಸಾಯಿ ಸಮಿತಿ ಸಂಚಾಲಕ ಅಮರ ನಾರಾಯಣ, ಜಿ.ಪಿ.ಕಮಲಾಕ್ಷ, ಸೇವಾ ವಿಭಾಗದ ಸಂಯೋಜಕಿ ಮಂಜುಳಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.