ADVERTISEMENT

ಕೋಲಾರ: ಸಾಗುವಳಿ ಅಕ್ರಮ- ಮಂಜೂರಾತಿ ತನಿಖೆಗೆ ಕೃಷ್ಣ ಬೈರೇಗೌಡ ಆದೇಶ

ವರದಿ ನೀಡಲು 2 ವಾರದ ಗಡುವು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2018, 15:31 IST
Last Updated 7 ಸೆಪ್ಟೆಂಬರ್ 2018, 15:31 IST
ಕೋಲಾರದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದರು.
ಕೋಲಾರದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದರು.   

ಕೋಲಾರ: ‘ಸರ್ಕಾರಿ ಜಮೀನುಗಳ ಸಾಗುವಳಿ ಪ್ರಕರಣದಲ್ಲಿ ನಡೆದಿರುವ ಅಕ್ರಮ- ಮಂಜೂರಾತಿ ಸಂಬಂಧ ತನಿಖೆ ನಡೆಸಿ ಎರಡು ವಾರದಲ್ಲಿ ವರದಿ ನೀಡಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಜಿಲ್ಲಾಧಿಕಾರಿಗೆ ಆದೇಶಿಸಿದರು.

ಇಲ್ಲಿ ಶುಕ್ರವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಈವರೆಗೆ 94ಎ, 94ಬಿ, 94ಸಿ ಹಾಗೂ 94ಸಿಸಿ ಅಡಿ ಸರ್ಕಾರಿ ಜಮೀನು ಒತ್ತುವರಿ ಸಕ್ರಮಗೊಳಿಸಿರುವ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಿ’ ಎಂದು ಹೇಳಿದರು.

‘ಕೋಲಾರ ತಾಲ್ಲೂಕಿನ ಅಣ್ಣಿಹಳ್ಳಿ ಗ್ರಾಮದಲ್ಲಿ ಕೃಷ್ಣಪ್ಪ ಮತ್ತು ಕುಟುಂಬದ 4 ಮಂದಿಗೆ ತಲಾ 4 ಎಕರೆ ಜಮೀನು ಮಂಜೂರು ಮಾಡಲಾಗಿದೆ. 2 ಕಲ್ಯಾಣ ಮಂಟಪದ ಮಾಲೀಕರಿಗೆ ಅಕ್ರಮ ಸಕ್ರಮದ ಲಾಭ ಕೊಡುವುದು ಎಷ್ಟು ಸರಿ? ತಹಶೀಲ್ದಾರ್ ವಿಜಯಣ್ಣ ಅಕ್ರಮ ಸಕ್ರಮದಲ್ಲಿ ಭ್ರಷ್ಟಾಚಾರ ಎಸಗಿರುವ ಬಗ್ಗೆ ದೂರು ಬಂದಿವೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಆರೋಪಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಉಪ ವಿಭಾಗಾಧಿಕಾರಿ ಶುಭಾ ಕಲ್ಯಾಣ್‌, ‘ಕೋಲಾರ ತಾಲ್ಲೂಕಿನ 167 ಅಕ್ರಮ ಸಕ್ರಮ ಪ್ರಕರಣಗಳ ಸಂಬಂಧ ಈಗಾಗಲೇ ತನಿಖೆ ನಡೆಯುತ್ತಿದೆ. ಸಿಬ್ಬಂದಿ ಕೊರತೆ ಕಾರಣಕ್ಕೆ ತನಿಖೆ ವಿಳಂಬವಾಗಿದೆ. 2 ವಾರದಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ನೀಡುತ್ತೇವೆ’ ಎಂದು ತಿಳಿಸಿದರು.

ಚಪ್ಪಲಿ ಸವೆಸಬೇಕು: ಶ್ರೀನಿವಾಸಪುರ, ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕಿನಲ್ಲಿ ಕಂದಾಯ ಅದಾಲತ್ ಗುರಿ ಸಾಧನೆ ಶೂನ್ಯವಾಗಿರುವ ಬಗ್ಗೆ ಅಸಮಾಧಾನಗೊಂಡ ಸಚಿವರು, ‘ಎರಡು ತಲೆಮಾರಿನಿಂದ ಪವತಿ ಖಾತೆ ಮಾಡಿಸಿಕೊಳ್ಳಲು ಸಾಧ್ಯವಾಗದ ರೈತರಿಗೆ ಸರ್ಕಾರಿ ಸೌಲಭ್ಯ ಇಲ್ಲವಾಗಿದೆ. ಒಂದು ತಿದ್ದುಪಡಿಗೆ ರೈತರು ಎಷ್ಟು ಚಪ್ಪಲಿ ಸವೆಸಬೇಕು? ಎಷ್ಟು ಜೇಬು ಖಾಲಿ ಮಾಡಿಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ. ಪೋಡಿ ಮತ್ತು ಪಿಂಚಣಿ ಅದಾಲತ್‌ಗೆ ತಕ್ಷಣವೇ ವೇಳಾಪಟ್ಟಿ ಸಿದ್ಧಪಡಿಸಿ’ ಎಂದು ತಹಶೀಲ್ದಾರ್‌ಗಳಿಗೆ ತಾಕೀತು ಮಾಡಿದರು.

‘ಕೋಲಾರ ತಾಲ್ಲೂಕಿನಲ್ಲಿ ಈವರೆಗೆ 14 ಕಂದಾಯ ಅದಾಲತ್‌ ನಡೆಸಿರುವುದು ಬಿಟ್ಟರೆ ಉಳಿದ 5 ತಾಲ್ಲೂಕುಗಳಲ್ಲಿ ಅದಾಲತ್‌ ಆರಂಭಿಸಿಯೇ ಇಲ್ಲ. ತಿಂಗಳಿಗೆ ಕನಿಷ್ಠ 3ರಂತೆ ಈವರೆಗೆ ಒಟ್ಟು 15 ಅದಾಲತ್‌ ನಡೆಯಬೇಕಿತ್ತು. ಅದಾಲತ್‌ ಬಗ್ಗೆ ಉಪ ವಿಭಾಗಾಧಿಕಾರಿಯು ಕಾಲಕಾಲಕ್ಕೆ ಪ್ರಗತಿ ಪರಿಶೀಲಿಸಬೇಕು’ ಎಂದರು.

‘ಕಂದಾಯ ಅದಾಲತ್‌ ಮೂಕ ವ್ಯಾಯಾಮವಾಗಬಾರದು. ಸಾರ್ವಜನಿಕರು ವರ್ಷಗಟ್ಟಲೇ ಸರ್ಕಾರಿ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಅದಾಲತ್‌ ಸಹಕಾರಿ. ಆದ ಕಾರಣ ಸಕಾಲದಲ್ಲಿ ತಪ್ಪದೆ ಅದಾಲತ್‌ ನಡೆಸಿ’ ಎಂದು ಹೇಳಿದರು.

ಪ್ರಚಾರ ನಡೆಸಬೇಕು: ‘ನೈಜ ಫಲಾನುಭವಿಗಳ ಸರ್ಕಾರಿ ಜಮೀನು ಒತ್ತುವರಿ ಸಕ್ರಮಗೊಳಿಸಿ ಮನೆಯ ಹಕ್ಕುಪತ್ರ ಹಾಗೂ ಜಮೀನಿನ ಸಾಗುವಳಿ ಚೀಟಿ ಪಡೆಯಲು ಅರ್ಜಿ ಸಲ್ಲಿಸುವಂತೆ ವ್ಯಾಪಕ ಪ್ರಚಾರ ನಡೆಸಬೇಕು. ಅರ್ಜಿ ಸ್ವೀಕರಿಸಲು ಕೊನೆ ದಿನವಾದ ಸೆ.16ರೊಳಗೆ ಎಲ್ಲಾ ಫಲಾನುಭವಿಗಳು ಅರ್ಜಿ ಸಲ್ಲಿಸುವಂತೆ ಕ್ರಮ ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಸರ್ಕಾರಿ ಜಮೀನುಗಳಲ್ಲಿ ನಿರ್ಮಾಣಗೊಂಡ ಮನೆಗಳನ್ನು ಸಕ್ರಮಗೊಳಿಸಿದ ಹಕ್ಕುಪತ್ರ ಪಡೆಯಲು ಫಲಾನುಭವಿಗಳು ಶುಲ್ಕ ಪಾವತಿಸದೆ ಹಿಂದೇಟು ಹಾಕುತ್ತಿದ್ದಾರೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹೇಳಿದರು. ಅದಕ್ಕೆ ಸಚಿವರು, ‘ಸ್ಥಳೀಯ ಶಾಸಕರಿಂದ ಸಾಮೂಹಿಕ ಸಮಾರಂಭದಲ್ಲಿ ತಾತ್ಕಾಲಿಕ ಹಕ್ಕುಪತ್ರ ವಿತರಿಸಲು ವ್ಯವಸ್ಥೆ ಮಾಡಿ. ಆಗ ಶುಲ್ಕ ಪಾವತಿಸಲು ಫಲಾನುಭವಿಗಳನ್ನು ಉತ್ತೇಜಿಸಿದಂತಾಗುತ್ತದೆ’ಎಂದು ಸಲಹೆ ನೀಡಿದರು.

‘ಜಿಲ್ಲೆಯ 1,798 ಗ್ರಾಮಗಳಲ್ಲಿ 1,445 ಗ್ರಾಮಗಳಿಗೆ ಸ್ಮಶಾನ ಭೂಮಿ ನೀಡಿದ್ದೇವೆ. 353 ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ನೀಡಬೇಕಿದ್ದು, ಜಾಗ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಖಾಸಗಿ ವ್ಯಕ್ತಿಗಳು ಜಮೀನು ನೀಡಿದರೂ ಪಡೆಯಲಾಗುವುದು. ಮಾಲೂರು ತಾಲ್ಲೂಕಿನಲ್ಲಿ 74 ಕಡೆ ಜಾಗ ನೀಡಬೇಕಿದೆ’ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಕಾಮಗಾರಿ ಪೂರ್ಣಗೊಂಡಿಲ್ಲ: ‘ಮಾರ್ಕಂಡೇಯ ಜಲಾಶಯದಿಂದ ಮಾಲೂರು ತಾಲ್ಲೂಕಿನ 165 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಕಾಮಗಾರಿ 5 ವರ್ಷದಿಂದ ನಡೆಯುತ್ತಿದೆ. ಯೋಜನೆಗೆ ₹ 45 ಕೋಟಿ ವೆಚ್ಚವಾಗಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ’ ಎಂದು ಶಾಸಕ ಕೆ.ವೈ.ನಂಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಕುಡಿಯುವ ನೀರು ಯೋಜನೆಯ ಗುತ್ತಿಗೆ ಪಡೆದಿರುವ ಸಾಯಿ ಸುಧೀರ್ ಕಂಪನಿ ಪ್ರತಿನಿಧಿ ಲಿಂಗರಾಜು ಕಾಮಗಾರಿ ವಿಳಂಬವಾಗಿರುವುದಕ್ಕೆ ವಿವರಣೆ ನೀಡಲು ಮುಂದಾದರು. ಇದರಿಂದ ಸಿಡಿಮಿಡಿಯಾದ ಸಚಿವರು, ‘ಸಮಸ್ಯೆ ನಮ್ಮ ತಲೆ ಮೇಲೆ ಹಾಕಿ ನೀವು ಮಜಾ ತೆಗೆದುಕೊಳ್ಳುವುದು ಬೇಡ. ಸಮಸ್ಯೆಗೆ ಪರಿಹಾರೋಪಾಯ ಕಂಡುಕೊಂಡು ಕೆಲಸ ಮಾಡಿಸಬೇಕು’ ಎಂದು ಗುಡುಗಿದರು.

‘ನಮ್ಮ ಎಂಜಿನಿಯರ್‌ಗಳು ಕೆಲಸ ಮಾಡದ ಕಂಪನಿಗೆ ನೋಟಿಸ್ ಜಾರಿ ಮಾಡಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಠೇವಣಿ ಮುಟ್ಟುಗೋಲು ಹಾಕಿಕೊಂಡಿದ್ದರೆ ಎಲ್ಲಾ ಸರಿಯಾಗುತ್ತಿತ್ತು. ಆದರೆ, ಎಂಜಿನಿಯರ್‌ಗಳು ಗುತ್ತಿಗೆದಾರರ ಮುಲಾಜಿನಲ್ಲಿ ಇರುವುದರಿಂದ ಕೆಲಸ ಆಗದಿದ್ದರೂ ಬಿಲ್‌ ಪಾವತಿಯಾಗಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಡಿಡಿಪಿಐಗೆ ತರಾಟೆ: ‘ಮಾಸ್ತಿ ವಸತಿ ಶಾಲೆಯನ್ನು ಕ್ರೈಸ್ಟ್‌ ಸಂಸ್ಥೆಗೆ ಒಪ್ಪಿಸುವ ಸಂಬಂಧ ಪ್ರಕ್ರಿಯೆ ಆರಂಭಿಸುವಂತೆ 2 ತಿಂಗಳ ಹಿಂದೆ ಸೂಚನೆ ನೀಡಿದ್ದೆ. ಆದರೆ, ಈವರೆಗೂ ಆ ಕೆಲಸ ಆಗಿಲ್ಲ. ಶಿಕ್ಷಣ ಇಲಾಖೆಗೆ ವಿದ್ಯಾರ್ಥಿನಿಲಯ ನಡೆಸುವ ಸಾಮರ್ಥ್ಯವಿಲ್ಲ. ಕನಿಷ್ಠ ಕ್ರೈಸ್ಟ್‌ ಸಂಸ್ಥೆಗೆ ಹಸ್ತಾಂತರ ಮಾಡುವಂತೆ ಸೂಚಿಸಿದ್ದರೂ ಸಂಬಂಧಪಟ್ಟವರ ಜತೆ ಚರ್ಚೆ ನಡೆಸಿಲ್ಲ’ ಎಂದು ಸಚಿವರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರತ್ನಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

ಶಾಲೆಯಲ್ಲಿ ಮಕ್ಕಳಿಂದ ಸ್ವಂತ ಕೆಲಸ ಮಾಡಿಸಿಕೊಂಡ ಕೋಲಾರದ ಗಾಂಧಿನಗರ ಮತ್ತು ತಿರುಮಲಕೊಪ್ಪ ಗ್ರಾಮದ ಶಾಲೆಯ ಶಿಕ್ಷಕರನ್ನು ಅಮಾನತು ಮಾಡದಿರುವುದಕ್ಕೆ ಡಿಡಿಪಿಐ ವಿರುದ್ಧ ಕೆಂಡಾಮಂಡಲರಾದ ಸಚಿವರು, ‘ತಪ್ಪು ಮಾಡಿದ ಶಿಕ್ಷಕರನ್ನು ದಂಡಿಸಲು ಏನು ಸಮಸ್ಯೆ? ಏಕೆ ತಾರತಮ್ಯ ಮಾಡುತ್ತೀರಿ?’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ರತ್ನಯ್ಯ, ‘ಈಗಾಗಲೇ ಒಬ್ಬ ಶಿಕ್ಷಕರನ್ನು ಅಮಾನತು ಮಾಡಲಾಗಿದೆ’ ಎಂದರು. ಆಗ ಸಚಿವರು, ‘ಉಳಿದ ಇಬ್ಬರು ಶಿಕ್ಷಕರ ಮೇಲೂ ಶಿಸ್ತುಕ್ರಮ ಜರುಗಿಸಿ’ ಎಂದು ಆದೇಶಿಸಿದರು.

ಮೌಲ್ಯಮಾಪನ ಮಾಡಿಸಿ: ‘ಇಲಾಖೆಯಿಂದ 2 ಸಾವಿರ ಕೆ.ಜಿ ಬೀಜಗಳನ್ನು ಬೀಜದುಂಡೆ ಮಾಡಿಸಿ ಬಿತ್ತನೆ ಮಾಡಲಾಗುತ್ತಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ) ಶ್ರೀನಿವಾಸರಾವ್ ಮಾಹಿತಿ ನೀಡಿದರು. ಆಗ ಸಚಿವರು, ‘ಬಿತ್ತನೆ ಪೂರ್ಣಗೊಂಡ ಬಳಿಕ ಬೀಜಗಳ ಮೊಳೆತಿರುವ ಪ್ರಮಾಣದ ಬಗ್ಗೆ ತಜ್ಞರಿಂದ ಮೌಲ್ಯಮಾಪನ ಮಾಡಿಸಿ’ ಎಂದು ಸಲಹೆ ನೀಡಿದರು.

ಶಾಸಕರಾದ ಎಸ್‌.ಎನ್‌.ನಾರಾಯಣಸ್ವಾಮಿ, ನಾಗೇಶ್‌, ರೂಪಕಲಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ, ಉಪಾಧ್ಯಕ್ಷೆ ಯಶೋದಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌ ಹಾಜರಿದ್ದರು.

ಅಂಕಿ ಅಂಶ......
* 124 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಸಾಧ್ಯತೆ
* ₹ 4.18 ಕೋಟಿ ಅನುದಾನ ನೀರಿಗೆ ಅಗತ್ಯ
* ₹ 6 ಕೋಟಿ ಅನುದಾನ ಜಿಲ್ಲಾಡಳಿತದಲ್ಲಿದೆ
* 4,803 ಪೋಡಿ ಪ್ರಕರಣಗಳ ವಿಲೇವಾರಿ
* 5,761 ಪೋಡಿ ಪ್ರಕರಣಗಳು ಬಾಕಿಯಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.