ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಗುರುವಾರ ನಡೆದ ‘ದೇಶಕ್ಕಾಗಿ 90 ದಿನಗಳ ಮಧ್ಯಸ್ಥಿಕೆ’ ವಿಶೇಷ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರತೀ ವರ್ಷ ನಾಲ್ಕು ಬಾರಿ ರಾಷ್ಟ್ರೀಯ ಲೋಕ ಅದಾಲತ್ ನಡೆಸಲಾಗುತ್ತದೆ. ಈಗಾಗಲೇ ಮೊದಲನೇ ಲೋಕ ಅದಾಲತ್ ಮಾರ್ಚ್ 8 ರಂದು ನಡೆದಿದೆ. ಇದೀಗ ಎರಡನೇ ಲೋಕ ಅದಾಲತ್ ನಡೆಯಲಿದೆ. ಕಳೆದ ಬಾರಿಯ ಲೋಕ ಅದಾಲತ್‍ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ 66,154 ಪ್ರಕರಣಗಳನ್ನು ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿದಾರರ ಸಹಕಾರದಿಂದ ವಿಲೇವಾರಿ ಮಾಡಲಾಗಿದೆ’ ಎಂದರು.
‘ಈ ಬಾರಿ ನಡೆಯುತ್ತಿರುವ ಲೋಕ ಅದಾಲತ್‍ನಲ್ಲಿ ಜಿಲ್ಲೆಯ ಎಲ್ಲಾ ಆರು ತಾಲ್ಲೂಕುಗಳಿಗೆ ಸಂಬಂಧಿಸಿದ ಶೇ 10ಕ್ಕಿಂತ ಹೆಚ್ಚು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ವಿಲೇವಾರಿ ಮಾಡುವ ಯೋಜನೆ ಇದೆ. ಕೊಲೆ, ಅತ್ಯಾಚಾರದಂತಹ ಪ್ರಕರಣಗಳು ಲೋಕ ಅದಾಲತ್‍ನಲ್ಲಿ ತೀರ್ಮಾನವಾಗುವುದಿಲ್ಲ. ಮೋಟಾರು ವಾಹನ ಅಪಘಾತ, ಜೀವನಾಂಶ, ಆಸ್ತಿ ವಿಭಾಗದ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ಈ ಅದಾಲತ್‍ನಲ್ಲಿ ವಿಲೇವಾರಿ ಮಾಡಬಹುದು’ ಎಂದು ತಿಳಿಸಿದರು.
‘ಲೋಕ ಅದಾಲತ್‍ನಲ್ಲಿ ತೀರ್ಮಾನ ಮಾಡುವುದಾದರೆ ಪ್ರಕರಣಗಳು ಅತೀ ಶೀಘ್ರ ಇತ್ಯರ್ಥವಾಗುತ್ತವೆ. ನ್ಯಾಯಾಲಯದ ಶುಲ್ಕ ಇರುವುದಿಲ್ಲ. ಕೆಲವರಿಗೆ ವಕೀಲರನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಲೋಕ ಅದಾಲತ್‍ನಲ್ಲಿ ನುರಿತ ವಕೀಲರು ಸಂಧಾನಕಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಜೊತೆಗೆ ಸಮಯವೂ ಉಳಿತಾಯವಾಗಲಿದ್ದು, ಕಕ್ಷಿದಾರರು ಅವರ ತೀರ್ಪನ್ನು ಅವರೇ ಪಡೆದುಕೊಳ್ಳಬಹುದು. ಇಲ್ಲಿ ಇತ್ಯರ್ಥವಾದ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಉಭಯಕಡೆಯ ಕಕ್ಷಿದಾರರ ನಡುವೆ ಬಾಂಧವ್ಯವೂ ಉಳಿಯುತ್ತದೆ. ಈ ನಿಟ್ಟಿನಲ್ಲಿ ಕಕ್ಷಿದಾರರು ಈ ಅದಾಲತ್‍ನ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಸುಪ್ರೀಂ ಕೋರ್ಟ್ ಸೂಚನೆಯಂತೆ ಮಧ್ಯಸ್ಥಿಕೆಯಲ್ಲಿ ಪ್ರಕರಣಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ‘ದೇಶಕ್ಕಾಗಿ 90 ದಿನಗಳ ಮಧ್ಯಸ್ಥಿಕೆ’ ವಿಶೇಷ ಅಭಿಯಾನವನ್ನು ಕಾನೂನು ಸೇವಾ ಪ್ರಾಧಿಕಾರದಿಂದ ನಡೆಸಲಾಗುತ್ತಿದೆ. ಇದರಲ್ಲಿ ವಕೀಲರೇ ಮಧ್ಯಸ್ಥಿಕೆ ವಹಿಸಲಿದ್ದಾರೆ ಎಂದರು.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ.ಎ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್‍ನ ಯಶಸ್ಸಿಗೆ ಸಹಕರಿಸುತ್ತಿರುವ ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ, ಎಲ್ಲಾ ವಕೀಲರು, ಎಲ್ಲಾ ನ್ಯಾಯಾಧೀಶರು ಹಾಗೂ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.
ವಕೀಲರ ಸಂಘದ ಅಧ್ಯಕ್ಷ ಮುನೇಗೌಡ, ವಕೀಲ ಸತೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.