ADVERTISEMENT

ಕಡಿಮೆ ವೇತನ, ಸೌಲಭ್ಯ ನಿರಾಕರಣೆ ಕಾನೂನು ಬಾಹಿರ

ಜೀತ ಪದ್ಧತಿ, ಮಾನವ ಕಳ್ಳಸಾಗಣೆ ತಡೆಗೆ ಮಧ್ಯಮವೂ ಕೈಜೋಡಿಸಬೇಕು: ನ್ಯಾಯಾಧೀಶ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 7:05 IST
Last Updated 25 ಸೆಪ್ಟೆಂಬರ್ 2025, 7:05 IST
ಕೋಲಾರದಲ್ಲಿ ಬುಧವಾರ ನಡೆದ  ಕಾರ್ಯಾಗಾರವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಟೇಶ್ ಆರ್‌. ಉದ್ಘಾಟಿಸಿದರು. ಬಿ.ವಿ.ಗೋಪಿನಾಥ್, ಬೃಂದಾ ಅಡಿಗೆ, ಕಾತ್ಯಾಯಿನಿ ಚಾಮರಾಜ್, ಗಮನ ಶಾಂತಮ್ಮ ಪಾಲ್ಗೊಂಡಿದ್ದರು
ಕೋಲಾರದಲ್ಲಿ ಬುಧವಾರ ನಡೆದ  ಕಾರ್ಯಾಗಾರವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಟೇಶ್ ಆರ್‌. ಉದ್ಘಾಟಿಸಿದರು. ಬಿ.ವಿ.ಗೋಪಿನಾಥ್, ಬೃಂದಾ ಅಡಿಗೆ, ಕಾತ್ಯಾಯಿನಿ ಚಾಮರಾಜ್, ಗಮನ ಶಾಂತಮ್ಮ ಪಾಲ್ಗೊಂಡಿದ್ದರು   

ಕೋಲಾರ: ಯಾವುದೇ ವ್ಯಕ್ತಿಯನ್ನು ಬಲವಂತವಾಗಿ ತಮ್ಮ ಅನುಕೂಲಕ್ಕಾಗಿ ದುಡಿಸಿಕೊಳ್ಳುವುದು, ಆ ವ್ಯಕ್ತಿಗೆ ಸರ್ಕಾರ ನಿಗದಿಪಡಿಸಿದ ವೇತನಕ್ಕಿಂತ ಕಡಿಮೆ ನೀಡುವುದು ಹಾಗೂ ಸೌಲಭ್ಯ ನಿರಾಕರಿಸುವುದು ಕಾನೂನು ಬಾಹಿರವಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ನಟೇಶ್ ಆರ್‌.ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮುಕ್ತಿ ಒಕ್ಕೂಟ ಕರ್ನಾಟಕ, ಶಾಂತ ಜೀವ ಜ್ಯೋತಿ ಬೆಂಗಳೂರು ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಬುಧವಾರ ನಡೆದ ಮಾನವ ಕಳ್ಳ ಸಾಗಣೆ ನಿರ್ಮೂಲನೆ ಮತ್ತು ಜೀತ ಪದ್ಧತಿ ತಡೆಗಟ್ಟುವಲ್ಲಿ ಪತ್ರಕರ್ತರ ಪಾತ್ರ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ಜೀತ ಕಾರ್ಮಿಕರು ವಂಚಿತರಾಗದಂತೆ ಜಾಗೃತಿ ಮೂಡಿಸುವ ಕಾರ್ಯವನ್ನು ಹಂತ ಹಂತವಾಗಿ ಮಾಡಲಾಗುತ್ತಿದೆ ಎಂದರು.

ADVERTISEMENT

ಮಾನವ ಕಳ್ಳ ಸಾಗಣೆ ನಿರ್ಮೂಲನೆ ಮತ್ತು ಜೀತ ಪದ್ಧತಿ ತಡೆಗಟ್ಟುವಲ್ಲಿ ನಾಲ್ಕನೇ ಅಂಗವಾದ ಪತ್ರಿಕಾಂಗವೂ ಕೈ ಜೋಡಿಸಿ ಸಹಕರಿಸಬೇಕು ಎಂದು ಕೋರಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಪತ್ರಕರ್ತರಿಗೆ ಮಾನವೀಯ ಅಂತಃಕರಣ ಇರಬೇಕು. ಆಗ ಮಾನವ ಕಳ್ಳ ಸಾಗಣೆ, ಜೀತ ಪದ್ಧತಿ, ಬಾಲಕಾರ್ಮಿಕ ಪದ್ಧತಿ ಸಮಸ್ಯೆ ನಿವಾರಣೆಗೆ ಧ್ವನಿಯಾಗಬಹುದು ಎಂದರು.

ಕಾನೂನುಗಳು ಎಷ್ಟರ ಮಟ್ಟಿಗೆ ಜಾರಿ ಆಗುತ್ತಿವೆ ಎಂಬುದು ಕೂಡ ಮುಖ್ಯ. ಎಷ್ಟೋ ಇಲಾಖೆಗಳಲ್ಲಿ ಹೊರಗುತ್ತಿಗೆ ಪದ್ಧತಿ ಇದೆ. ಅವರಿಗೆ ಸರ್ಕಾರಿ ಇಲಾಖೆಗಳಲ್ಲೇ ಕನಿಷ್ಠ ವೇತನ ನೀಡುತ್ತಿಲ್ಲ. ಪಿಎಫ್‌, ಇಎಸ್‌ಐ ಸೇರಿದಂತೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದು ವಿಷಾದಿಸಿದರು.

ಹೊಟ್ಟೆ ತುಂಬಲು ಬೇಕಾದ ವೇತನವನ್ನಾದರೂ ಕೊಡಬೇಕು. ಅವರ ಹೆಸರಿನಲ್ಲಿ ಯಾರೋ ಗುತ್ತಿಗೆದಾರ ಬೆಳೆಯುತ್ತಿದ್ದಾನೆ. ನಮ್ಮ ಇಲಾಖೆಗಳು, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಕೈಗಾರಿಕಾ ಇಲಾಖೆ ಏನು ಮಾಡುತ್ತಿವೆ ಎಂದು ಪ್ರಶ್ನಿಸಿದರು.

ಮಾಲೂರು ತಾಲ್ಲೂಕಿನಲ್ಲಿ ಕ್ರಷರ್‌ಗಳಿದ್ದು ಅಲ್ಲಿ ನೂರಾರು ಮಂದಿ ದುಡಿಯುತ್ತಿದ್ದಾರೆ. ಅಲ್ಲಿ ಪದೇಪದೇ ಬಂಡೆ ಬಿದ್ದು ಕಾರ್ಮಿಕರು ಮೃತಪಡುತ್ತಿದ್ದಾರೆ. ಸತ್ತ ಸಂದರ್ಭದಲ್ಲೂ ಆತನ ಕುಟುಂಬದವರಿಗೆ ಸರಿಯಾದ ಪರಿಹಾರ ಸಿಗುತ್ತಿಲ್ಲ. ರಾತ್ರೋರಾತ್ರಿ ಮೃತದೇಹ ಸಾಗಿಸಿಬಿಡುತ್ತಾರೆ. ಮಾಲೀಕರ ಮೇಲೆ ಪ್ರಕರಣವೂ ದಾಖಲಾಗಲ್ಲ. ಇಂಥ ಪ್ರಕರಣಗಳು ಜೀತ ಪದ್ಧತಿ, ಮಾನವ ಕಳ್ಳಸಾಗಣೆ ಆಗುವುದಿಲ್ಲವೇ ಎಂಬುದರ ಬಗ್ಗೆ ಚರ್ಚೆ ನಡೆಯಬೇಕಿದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಗಮನ ಸಂಸ್ಥೆಯ ಶಾಂತಮ್ಮ, ಮುಕ್ತಿ ಒಕ್ಕೂಟದ ಸಂಚಾಲಕಿ ಬೃಂದಾ ಅಡಿಗೆ, ಕಾತ್ಯಾಯಿನಿ ಚಾಮರಾಜ್ ಅವರು ಜೀತ ಪದ್ಧತಿ, ಮಾನವ ಕಳ್ಳಸಾಗಣೆ ನಿಯಂತ್ರಣ ಮತ್ತು ಮಾಧ್ಯಮ ಪಾತ್ರ ಕುರಿತು ಮಾತನಾಡಿದರು. ಬಳಿಕ ಸಂವಾದ ಕೂಡ ನಡೆಯಿತು. ಜೀತ ಮುಕ್ತರಾಗಿ ಬದುಕು ಕಟ್ಟಿಕೊಂಡಿರುವ ರೂಪಾ ತಮ್ಮ ಅನುಭವ ಹಂಚಿಕೊಂಡರು.

ಶಾಂತ ಜೀವ ಜ್ಯೋತಿ ನಿರ್ದೇಶಕ ಪಿ.ಷಣ್ಮುಗ ಸುಂದರಮ್‌, ಜಿಲ್ಲಾ ಸಂಯೋಜಕ ಮಂಜುನಾಥ್‌ ಎಸ್‌., ಮುಕ್ತಿ ಒಕ್ಕೂಟದ ನಿರ್ದೇಶಕರಾದ ರಾಜೇಂದ್ರ ಎ., ದೀನಾ, ಗಾಯತ್ರಿ ಹಾಗೂ ಪತ್ರಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.