ಕೋಲಾರ: ಕೋಲಾರ ನಗರಸಭೆ ವ್ಯಾಪ್ತಿಯ ಸಂಗೊಡಹಳ್ಳಿಯ ಸರ್ವೆ ನಂ.10ರಲ್ಲಿ ಜಮೀನಿನಲ್ಲಿ ನಗರಸಭೆಯ 84 ಕಾಯಂ ಪೌರಕಾರ್ಮಿಕರಿಗೆ ಜಿ+2 ಮಾದರಿಯಲ್ಲಿ ಗುಂಪುಮನೆ ನಿರ್ಮಾಣಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ತಮ್ಮ ಅಧ್ಯಕ್ಷತೆಯಲ್ಲಿ ನಗರಸಭೆ ಕಚೇರಿಯಲ್ಲಿ ಬುಧವಾರ ನಡೆದ ಆಶ್ರಯ ಸಮಿತಿ ಸಭೆಯ ಬಳಿಕ ಅವರು ಸುದ್ದಿಗಾರರಿಗೆ ತಿಳಿಸಿದರು.
‘ಸರ್ವೆ ನಂ.10ರಲ್ಲಿನ 5.17 ಎಕರೆ ಜಮೀನಿನ ಪೈಕಿ 2 ಎಕರೆ ಜಾಗವನ್ನು ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕೆ ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಉಳಿದ 3.17 ಎಕರೆ ಜಮೀನಿನಲ್ಲಿ 84 ಪೌರಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಆದರೆ, ಈ ಹಕ್ಕುಪತ್ರಗಳನ್ನು ರದ್ದುಗೊಳಿಸಿ, ಫಲಾನುಭವಿಗಳಿಗೆ 600 ರಿಂದ 800 ಚದರ ಅಡಿ ವಿಸ್ತೀರ್ಣದ ಜಿ+2ಮಾದರಿಯ ಸುಸಜ್ಜಿತ ಗುಂಪುಮನೆ ನಿರ್ಮಿಸಿ ವಿತರಿಸಲು ತೀರ್ಮಾನಿಸಲಾಗಿದೆ’ ಎಂದರು.
‘ಪ್ರತಿ ಮನೆಗೆ ಸುಮಾರು ₹ 8.5 ಲಕ್ಷ ವೆಚ್ಚವಾಗಲಿದ್ದು ₹ 1.5 ಲಕ್ಷ ಕೇಂದ್ರ ಸರ್ಕಾರ ಹಾಗೂ ₹ 7 ಲಕ್ಷವನ್ನು ರಾಜ್ಯ ಸರ್ಕಾರ ಭರಿಸಲಿದೆ. ಫಲಾನುಭವಿಗಳಿಂದ ಯಾವುದೇ ಹಣ ಪಡೆಯುವುದಿಲ್ಲ. ಇನ್ನು ಉಳಿಕೆ ಸ್ಥಳದಲ್ಲೂ ಮನೆಗಳ ನಿರ್ಮಾಣ ಮಾಡಿ ಬಡವರಿಗೆ ಹಂಚಲಾಗುವುದು’ ಎಂದು ತಿಳಿಸಿದರು.
‘ನಗರಸಭೆಗೆ ಸೇರಿದ ಆಸ್ತಿಗಳಿಗೆ ಅಕ್ರಮವಾಗಿ ಪಹಣಿ ದಾಖಲೆಗಳನ್ನು ಬದಲಾಯಿಸಿಕೊಂಡು ಆಸ್ತಿಗಳನ್ನು ಮಾರಾಟ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಜೊತೆ ಚರ್ಚೆ ನಡೆಸಲಾಗಿದೆ. ದಾಖಲೆ ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಅಕ್ರಮ ಖಾತೆಗಳನ್ನು ಮತ್ತು ನೋಂದಣಿಗಳನ್ನು ರದ್ದುಪಡಿಸಿ ನಗರಸಭೆಯ ಹೆಸರಿಗೆ ಖಾತೆ ವರ್ಗಾವಣೆ ಮಾಡಲಾಗುವುದು’ ಎಂದರು.
ಆಶ್ರಯ ಯೋಜನೆ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಲಕ್ಷ್ಮಿದೇವಮ್ಮ, ಉಪವಿಭಾಗಾಧಿಕಾರಿ ಡಾ.ಮೈತ್ರಿ, ತಹಶೀಲ್ದಾರ್ ಡಾ.ನಯನಾ, ಆಯುಕ್ತ ನವೀನ್ ಚಂದ್ರ ಇದ್ದರು.
ನೀರಿನ ಕರ ಪಾವತಿಸುತ್ತಿಲ್ಲ: ಶಾಸಕ
’ನಿವಾಸಿಗಳು ನಗರಸಭೆಗೆ ನೀರಿನ ಕರ ನೀಡುತ್ತಿಲ್ಲ. ಕೇಳಲು ಹೋದರೆ ಅಧಿಕಾರಿಗಳಿಗೆ ಧಮ್ಕಿ ಹಾಕುತ್ತಿದ್ದಾರೆ’ ಎಂದು ಕೊತ್ತೂರು ಮಂಜುನಾಥ್ ಅಸಹಾಯಕತೆ ವ್ಯಕ್ತಪಡಿಸಿದರು. ‘ಕೆಲವರು ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿದ್ದು ನೋಟಿಸ್ ನೀಡಿದರೆ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆಯುತ್ತಿದ್ದಾರೆ’ ಎಂದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಶಾಸಕ ಕೊತ್ತೂರು ಜಿ.ಮಂಜುನಾಥ್ ಬುಧವಾರ ತಾಲ್ಲೂಕಿನಲ್ಲಿ ಸುಮಾರು ₹ 6.39 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ 35 ಫಲಾನುಭವಿಗಳಿಗೆ ಮಂಜೂರಾಗಿರುವ ಉಚಿತ ಕೊಳವೆಬಾವಿ ಕೊರೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೋಲಾರ ನಗರಸಭೆ ಡಲ್ಟ್ ಅನುದಾನದಲ್ಲಿ ನಗರದ ಪೋಲಿಸ್ ವರಿಷ್ಠಾಧಿಕಾರಿ ವಸತಿ ಗೃಹದಿಂದ ಚಿಕ್ಕಬಳ್ಳಾಪುರ ರಸ್ತೆ ರೈಲ್ವೆ ಸೇತುವೆವರೆಗೆ ₹ 3.89 ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಪಾದಚಾರಿ ಮಾರ್ಗ ಅಭಿವೃದ್ಧಿ ಕೋಲಾರ ನಗರಸಭೆಯ ಎಸ್.ಡಿ.ಎಂ.ಎಫ್ ಅನುದಾನದಲ್ಲಿ ₹ 2.5 ಕೋಟಿ ವೆಚ್ಚದಲ್ಲಿ ಕೋಲಾರ ನಗರದ ಕೋಲಾರಮ್ಮ ಕೆರೆಗೆ ಸೇರುವ ರಾಜಕಾಲುವೆಯಲ್ಲಿ ಸೇತುವೆ ಮತ್ತು ತಡೆಗೋಡೆ ನಿರ್ಮಾಣ ಮಾಡುತ್ತಿರುವುದಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.