ADVERTISEMENT

ರಸ್ತೆಗುಂಡಿ ಮುಚ್ಚುವ ಡ್ರಾಮಾ ಬಿಡಿ: ಅನುದಾನ ಕೊಡಿಸಿ-ಶಾಸಕ ನಂಜೇಗೌಡ ಸವಾಲು

ಬಿಜೆಪಿ ಸ್ಥಳೀಯ ಮುಖಂಡರು, ಕಾರ್ಯಕರ್ತರಿಗೆ ಶಾಸಕ ನಂಜೇಗೌಡ ಸವಾಲು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 6:58 IST
Last Updated 8 ಸೆಪ್ಟೆಂಬರ್ 2022, 6:58 IST
ಮಳೆಯಿಂದ ಹದಗೆಟ್ಟ ರಸ್ತೆಗಳ ದುರಸ್ತಿ ಕುರಿತು ಶಾಸಕ ಕೆ.ವೈ.ನಂಜೇಗೌಡ ಬುಧವಾರ ಮಾಲೂರಿನಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳ ಸಭೆ ನಡೆಸಿದರು
ಮಳೆಯಿಂದ ಹದಗೆಟ್ಟ ರಸ್ತೆಗಳ ದುರಸ್ತಿ ಕುರಿತು ಶಾಸಕ ಕೆ.ವೈ.ನಂಜೇಗೌಡ ಬುಧವಾರ ಮಾಲೂರಿನಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳ ಸಭೆ ನಡೆಸಿದರು   

ಮಾಲೂರು: ‘ಬಿಜೆಪಿ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ತಾಲ್ಲೂಕಿನ ಹದಗೆಟ್ಟಿರುವ ರಸ್ತೆಗಳ ಗುಂಡಿ ಮುಚ್ಚುವ ಹೈಡ್ರಾಮಾ ಮಾಡುವ ಮೂಲಕ ಅವರದೇ ಪಕ್ಷದ ಸರ್ಕಾರದ ವಿರುದ್ಧ ಪತ್ರಿಭಟಿಸುತ್ತಿರುವುದು ಹಾಸ್ಯಾಸ್ಪದ’ ಎಂದು ಶಾಸಕ ಕೆ.ವೈ.ನಂಜೇಗೌಡ
ವ್ಯಂಗ್ಯವಾಡಿದರು.

ಮಳೆಯಿಂದ ಹದಗೆಟ್ಟ ರಸ್ತೆಗಳ ದುರಸ್ತಿ ಕುರಿತು ಬುಧವಾರ ಲೋಕೋಪಯೋಗಿ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.

‘ನಮ್ಮ ತಾಲ್ಲೂಕಿನಲ್ಲಿ ಮಾತ್ರ ರಸ್ತೆಗಳು ಹದಗೆಟ್ಟಿಲ್ಲ. ಇಡೀ ರಾಜ್ಯದಲ್ಲೇ ಈ ಸಮಸ್ಯೆ ಇದೆ.ಸಚಿವರ ಕ್ಷೇತ್ರವಾದ ಪಕ್ಕದ ಹೊಸಕೋಟೆ ರಸ್ತೆಗಳದ್ದೂ ಇದೇ ಪರಿಸ್ಥಿತಿ. ಅಲ್ಲಿಯ ಜಿಲ್ಲಾ ಉಸ್ತುವಾರಿ ಸಚಿವರು ಬಿಜೆಪಿಯವರೇ ಆಗಿದ್ದಾರೆ. ಗುಂಡಿ ಮುಚ್ಚುವ ಡ್ರಾಮಾ ಬಿಟ್ಟು ಬಿಜೆಪಿಯವರು ಸರ್ಕಾರ ಮತ್ತು ಸಚಿವರಿಗೆ ಹೇಳಿ ಅನುದಾನ ಕೊಡಿಸಲಿ’ ಎಂದು ಸವಾಲು ಹಾಕಿದರು.

ADVERTISEMENT

‘ಬಿಜೆಪಿ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ರಸ್ತೆ ಗುಂಡಿ ಮುಚ್ಚಲು ಅನುದಾನ ಬಿಡುಗಡೆ ಮಾಡಿ ಎಂದು ಕೇಳಿಕೊಂಡರು ಯಾವ ಪ್ರತಿಕ್ರಿಯೆ ದೊರೆತ್ತಿಲ್ಲ. ಬಂದಿರುವ ಕನಿಷ್ಠ ಅನುದಾನದಲ್ಲಿ ರಸ್ತೆ ದುರಸ್ತಿ ಕಾಮಗಾರಿ ಪ್ರಾರಂಭಿಸಿ ತಾಲ್ಲೂಕಿನ ಜನತೆಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಲಾಗುವುದು’ ಎಂದರು.

ಪುರಸಭಾ ಅಧ್ಯಕ್ಷೆ ಭವ್ಯ ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಜಾಕೀರ್ ಖಾನ್, ಮಾಜಿ ಅಧ್ಯಕ್ಷ ಎನ್.ವಿ.ಮುರಳಿಧರ್, ಲೋಕೋಪಯೋಗಿ ಇಲಾಖೆ ಎಇಇ ಜಿ.ವೆಂಕಟೇಶ್, ರಾಜಗೋಪಾಲ್, ಮುಖ್ಯಾಧಿಕಾರಿ ಪವನ್ ಕುಮಾರ್, ಜೆ.ಇ.ಪೂರ್ಣಿಮ, ಸದಸ್ಯ ಮಂಜುನಾಥ್, ಮುಖಂಡರಾದ ಎಂ.ಸಿ.ರವಿ, ಕೋಳಿನಾರಾಯಣ್, ವೆಂಕಟಸ್ವಾಮಿ, ಕೃಷ್ಣಪ್ಪ, ಎಂ.ಪಿ.ವಿ.ಮಂಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.