ADVERTISEMENT

ಜಿಲ್ಲೆಯ ನಾಲ್ವರು ಶಾಸಕರು ಯಾರ ಕಡೆ?

ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಅಧಿಕಾರ ಹಸ್ತಾಂತರ ವಿಚಾರ– ‘ತಲೆಗಳ’ ಲೆಕ್ಕಾಚಾರ!

ಕೆ.ಓಂಕಾರ ಮೂರ್ತಿ
Published 23 ನವೆಂಬರ್ 2025, 7:05 IST
Last Updated 23 ನವೆಂಬರ್ 2025, 7:05 IST
ಕೊತ್ತೂರು ಮಂಜುನಾಥ್‌
ಕೊತ್ತೂರು ಮಂಜುನಾಥ್‌   

ಕೋಲಾರ: ಅತ್ತ ಅಧಿಕಾರ ಹಸ್ತಾಂತರ ವಿಚಾರದಲ್ಲಿ ಗಹನ ಚರ್ಚೆ ಹಾಗೂ ಬೆಂಬಲಕ್ಕಾಗಿ ‘ತಲೆಗಳ’ ಲೆಕ್ಕಾಚಾರ ಬಿರುಸುಗೊಂಡಿದ್ದರೆ ಇತ್ತ ಜಿಲ್ಲೆಯಲ್ಲಿ ನಾಲ್ವರು ಶಾಸಕರು ಯಾರ ಪರವಾಗಿ ಬ್ಯಾಟ್‌ ಬೀಸಬಹುದು ಎಂಬ ಚರ್ಚೆಗಳೂ ಗರಿಗೆದರಿವೆ.

ಆ ಶಾಸಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಂತೆ, ಈ ಶಾಸಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪರವಂತೆ ಎಂಬ ಚರ್ಚೆಗಳು ಕಾಫಿ ಶಾಪ್‌, ದರ್ಶಿನಿ, ಆಟೊ, ಟೆಂಪೊ ಸ್ಟ್ಯಾಂಡ್‌ ಸೇರಿದಂತೆ ವಿವಿಧೆಡೆಯಿಂದ ಕೇಳಿಬರುತ್ತಿವೆ. ನಾಲ್ಕು ಜನರ ಮಧ್ಯೆ ನಿಂತರೆ ಅದರಲ್ಲಿ ಒಬ್ಬರು ಈ ಬಗ್ಗೆ ಮಾತನಾಡುವುದನ್ನು ಕಾಣಬಹುದು. ಜೊ‌ತೆಗೆ ಜಾತಿ ಲೆಕ್ಕಾಚಾರ, ಶಾಸಕರ ಮೇಲಿರುವ ಪ್ರಕರಣಗಳು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜೊ‌ತೆ ಇರುವ ಆಪ್ತತೆ, ಹಿಂದೆಲ್ಲಾ ಎಷ್ಟೆಲ್ಲಾ ಒಡನಾಟ ಹೊಂದಿದ್ದರು ಎಂಬುದರ ಕುರಿತಂತೆ ಜನಸಾಮಾನ್ಯರು ಚರ್ಚಿಸುತ್ತಿದ್ದ ಕುತೂಹಲ ಮೂಡಿಸಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್‌ನ ನಾಲ್ವರು ಶಾಸಕರಾದ ಬಂಗಾರಪೇಟೆಯ ಎಸ್.ಎನ್‌.ನಾರಾಯಣಸ್ವಾಮಿ, ಮಾಲೂರಿನ ಕೆ.ವೈ.ನಂಜೇಗೌಡ, ಕೆಜಿಎಫ್‌ನ ರೂಪಕಲಾ ಶಶಿಧರ್‌ ಹಾಗೂ ಕೋಲಾರದ ಕೊತ್ತೂರು ಮಂಜುನಾಥ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಇದ್ದಾರೆ. ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಕೋಲಾರದವರೇ ಆಗಿದ್ದು, ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕ್ಷೇತ್ರದಿಂದ ಗೆದ್ದಿದ್ದಾರೆ.

ADVERTISEMENT

ನಾಲ್ವರು ಶಾಸಕರು ಸದ್ಯಕ್ಕೆ ಯಾರ ಪರವಾಗಿಯೂ ಬಹಿರಂಗವಾಗಿ ಗುರುತಿಸಿಕೊಂಡಿಲ್ಲ, ಯಾರ ಪರವಾಗಿಯೂ ಹೇಳಿಕೆ ನೀಡಿಲ್ಲ. ಇಲ್ಲಿಯವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜತೆ ಎಲ್ಲಾ ಶಾಸಕರೂ ಆತ್ಮೀಯವಾಗಿದ್ದಾರೆ.‌ ಆದರೆ, ಒಳಗುಟ್ಟು ಬಿಟ್ಟುಕೊಡುತ್ತಿಲ್ಲ. ಜತೆಗೆ ಸಚಿವ ಸ್ಥಾನದ ಆಸೆ, ಈ ಹಿಂದೆ ನೀಡಿದ ಭರವಸೆಗಳ ಮೇಲೂ ಲೆಕ್ಕಾಚಾರಗಳು ನಿಂತಿವೆ. 

‘ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಡುವೆ ಉತ್ತಮ ಬಾಂಧವ್ಯವಿದೆ. ಯಾರು ಮುಖ್ಯಮಂತ್ರಿ ಆಗಬೇಕು, ಯಾರು ಕೆಳಗಿಳಿಯಬೇಕು ಎಂದು ಹೇಳುವಷ್ಟು ನಾವು ದೊಡ್ಡವರಲ್ಲ. ಆ ಬಗ್ಗೆ ಹೈಕಮಾಂಡ್‌ ನಿರ್ಧಾರ ಮಾಡಲಿದ್ದು, ಅವರ ನಿರ್ಧಾರಗಳಿಗೆ ನಾವು ಬದ್ಧ. ಆದರೆ ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದು ಬೇಡಿಕೆ ಇಟ್ಟಿದ್ದೇವೆ’ ಎಂಬುದಾಗಿ ಹೇಳುತ್ತಿದ್ದಾರೆ ಅಷ್ಟೆ.

ಇನ್ನು ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಬೈರತಿ ಸುರೇಶ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆ.ಎಚ್.ಮುನಿಯಪ್ಪ ಅವರು ಗುರುವಾರ ರಾತ್ರಿ ಸಚಿವ ಸತೀಶ ಜಾರಕಿಹೊಳಿ ಮನೆಯಲ್ಲಿ ನಡೆದ ಭೋಜನಕೂಟದಲ್ಲಿ ಪಾಲ್ಗೊಂಡಿದ್ದರು.

ಈ ಎಲ್ಲಾ ಬೆಳವಣಿಗೆಗಳು ರಾಜಕೀಯ ವಲಯದಲ್ಲಿ ಮಾತ್ರವಲ್ಲದೆ, ಜಿಲ್ಲೆಯ ಜನಸಾಮಾನ್ಯರಲ್ಲೂ ಬಹಳ ಕುತೂಹಲ ಮೂಡಿಸಿವೆ, ವಿವಿಧ ರೀತಿಯ ಚರ್ಚೆಗೆ ಕಾರಣವಾಗಿವೆ.

ಅನಿಲ್‌ ಕುಮಾರ್‌
ಎಸ್.ಎನ್‌.ನಾರಾಯಣಸ್ವಾಮಿ
ಕೆ.ಎಚ್‌.ಮುನಿಯಪ್ಪ
ಕೆ.ವೈ.ನಂಜೇಗೌಡ
ರೂಪಕಲಾ ಶಶಿಧರ್‌
ಬೈರತಿ ಸುರೇಶ್‌
ಮುಖ್ಯಮಂತ್ರಿಯಾಗಿ ಯಾರಿರಬೇಕು ಯಾರನ್ನು ಇಳಿಸಬೇಕು ಎಂಬುದನ್ನು ನಿರ್ಧಾರ ಮಾಡುವವರು ದೊಡ್ಡವರು. ನಾನು ಕೊತ್ತೂರು ಮಂಜುನಾಥ್‌ ರೂಪಕಲಾ ಶಶಿಧರ್‌ ಹೇಳಲು ಆಗುತ್ತದೆಯೇ?
ಬೈರತಿ ಸುರೇಶ್‌ ಜಿಲ್ಲಾ ಉಸ್ತುವಾರಿ ಸಚಿವ

ಎರಡೂ ಬಣಗಳಿಂದ ಶಾಸಕರ ಸಂಪರ್ಕ

ಎರಡೂ ಬಣಗಳಿಂದ ಜಿಲ್ಲೆಯ ಶಾಸಕರನ್ನು ಸಂಪರ್ಕಿಸಿ ಮಾತುಕತೆ ನಡೆಸಲಾಗಿದೆ ಎಂಬ ಮಾಹಿತಿ ‘ಪ್ರಜಾವಾಣಿ’ಗೆ ಲಭಿಸಿದೆ. ಅಲ್ಲದೇ ಕೆಡಿಪಿ ಸಭೆಗೆಂದು ಕೋಲಾರಕ್ಕೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಕೂಡ ಸ್ಥಳೀಯ ಕಾಂಗ್ರೆಸ್‌ ಶಾಸಕರ ಜೊತೆ ಆಪ್ತವಾಗಿ ಮಾತನಾಡಿ ಭರವಸೆ ಪಡೆದುಕೊಂಡು ಹೋಗಿರುವುದು ಗೊತ್ತಾಗಿದೆ. ಸಭೆಯಲ್ಲಿ ನಂಜೇಗೌಡ ಕೊತ್ತೂರು ಮಂಜುನಾಥ್‌ ರೂಪಕಲಾ ಶಶಿಧರ್‌ ಇದ್ದರು. ಬೈರತಿ ಸುರೇಶ್‌ ಪತ್ರಿಕಾಗೋಷ್ಠಿ ನಡೆಸುವಾಗಲೇ ಪಕ್ಕದಲ್ಲಿದ್ದ ಶಾಸಕ ಕೊತ್ತೂರು ಮಂಜುನಾಥ್‌ ಅವರಿಗೆ ವರಿಷ್ಠರಿಂದ ಕರೆಬಂದಿದ್ದು ಯಾರದ್ದು ಇರಬಹುದೆಂದು ಕುತೂಹಲ ಮೂಡಿಸಿದೆ.

ಸಿ.ಎಂಗೆ ನನಗಿಂತ ರೂಪಮ್ಮ ಆಪ್ತರು

ಸಿದ್ದರಾಮಯ್ಯ ಅವರಿಗೆ ನನಗಿಂತ ರೂಪಮ್ಮ ಹೆಚ್ಚು ಆಪ್ತವಾಗಿದ್ದಾರೆ. ನಾನೊಬ್ಬನೇ ಅಲ್ಲ. ಜೆಡಿಎಸ್‌ ಬಿಜೆಪಿ ಸೇರಿದಂತೆ ರಾಜ್ಯದ 224 ಶಾಸಕರೂ ಮುಖ್ಯಮಂತ್ರಿ ಆಪ್ತರೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಹೇಳಿದರು.

ಹೈಕಮಾಂಡ್‌ ತೀರ್ಮಾನಕ್ಕೆ ನಾವು ಬದ್ಧ

ಸಿದ್ದರಾಮಯ್ಯ ಸದ್ಯ ಮುಖ್ಯಮಂತ್ರಿ ಆಗಿದ್ದಾರೆ. ತಾವು ಮುಖ್ಯಮಂತ್ರಿ ಆಗಬೇಕೆನ್ನುವ ವಿಚಾರವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಮ್ಮ ಬಳಿ ಯಾವತ್ತೂ ಚರ್ಚಿಸಲ್ಲ. ಹೈಕಮಾಂಡ್‌ ಮಟ್ಟದಲ್ಲಿ ಏನು ಒಪ್ಪಂದ ನಡೆದಿದೆ ಎಂಬ ವಿಚಾರ ನಮಗೆ ಗೊತ್ತಿಲ್ಲ. ಹೈಕಮಾಂಡ್‌ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ. ಜನರ ಆಶೀರ್ವಾದವಿರುವವರೆಗೆ ನಾನು ಕೋಲಾರದಲ್ಲಿ ಶಾಸಕನಾಗಿರುತ್ತೇನೆ. ಅದೇ ಮಾತನ್ನು ಸಿದ್ದರಾಮಯ್ಯ ಕೂಡ ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ? ಸಿದ್ದರಾಮಯ್ಯ ಕೊಟ್ಟ ಮಾತು ತಪ್ಪುವುದಿಲ್ಲ. ಆದರೆ ಅವರು ಏನು ಮಾತು ಕೊಟ್ಟಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಹಾಗೆಯೇ ಶ್ರಮಪಟ್ಟವರಿಗೆ ಫಲ ಸಿಕ್ಕೇ ಸಿಗುತ್ತದೆ. –ಕೊತ್ತೂರು ಮಂಜುನಾಥ್‌ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.