ಕೋಲಾರ: ಜಿಲ್ಲೆಯಲ್ಲಿ ಸ್ವಚ್ಛತಾ ಕಾರ್ಯಕ್ಕಾಗಿ ಜಿಲ್ಲಾಡಳಿತವು ನಗರಸಭೆಯೊಂದಿಗೆ ‘ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆ’ ಎಂಬ ವಿಶೇಷ ವಿಶೇಷ ತಂಡ ರಚಿಸಿದ್ದು, ನಗರದ ಗಾಂಧಿವನದಲ್ಲಿ ಗುರುವಾರ ವಾಹನಕ್ಕೆ ಜಿಲ್ಲಾಧಿಕಾರಿ ಎಂ.ಆರ್.ರವಿ ಚಾಲನೆ ನೀಡಿದರು.
ಈ ಕಾರ್ಯಪಡೆಯು ನಗರಸಭೆ ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿನ ಉದ್ಯಾನಗಳು, ರಸ್ತೆಗಳು, ಚರಂಡಿಗಳು ಮತ್ತು ಕೆರೆಗಳ ಸ್ವಚ್ಛತೆ ಕಾರ್ಯ ನಿರ್ವಹಣೆ ಮಾಡಲಿದೆ. ಸಾರ್ವಜನಿಕರಲ್ಲಿ ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸುವುದು, ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ತಡೆಯುವುದು, ಹಾಗೂ ಕಾನೂನು ಉಲ್ಲಂಘಿಸುವವರ ಮೇಲೆ ಕ್ರಮ ಕೈಗೊಳ್ಳುವುದು ಇದರ ಮುಖ್ಯ ಜವಾಬ್ದಾರಿಗಳು ಎಂದು ಅವರು ತಿಳಿಸಿದರು.
ತ್ಯಾಜ್ಯ ವಿಲೇವಾರಿ ಮತ್ತು ಸ್ವಚ್ಛತೆ ನಿಯಮ ಉಲ್ಲಂಘಿಸುವವರ ಮೇಲೆ ದಂಡ ವಿಧಿಸುವುದು ಮತ್ತು ಅಗತ್ಯವಿದ್ದರೆ ಎಫ್.ಐ.ಆರ್ ದಾಖಲಿಸುವುದು, ನಿಷೇಧಿತ ಪ್ಲಾಸ್ಟಿಕ್ ಬಳಕೆ ತಡೆಯುವುದು ಮತ್ತು ನಿಯಮ ಉಲ್ಲಂಘಿಸುವರ ಮೇಲೆ ಕ್ರಮ ಜರುಗಿಸುವುದು ಈ ಕಾರ್ಯಪಡೆಯ ರಚನೆಯ ಉದ್ದೇಶಗಳಲ್ಲಿ ಒಂದು ಎಂದು ಹೇಳಿದರು.
ಕುಡಿಯುವ ನೀರಿನ ಸೋರಿಕೆಗಳ ಬಗ್ಗೆ ವರದಿ ಸಲ್ಲಿಸುವುದು, ಸಾರ್ವಜನಿಕ ಶೌಚಾಲಯಗಳ ಬಳಕೆ ಮತ್ತು ನೈರ್ಮಲ್ಯವನ್ನು ಕಾಪಾಡಲು ಕ್ರಮ ಕೈಗೊಳ್ಳುವುದು ಈ ಕಾರ್ಯಪಡೆಯ ಜವಾಬ್ದಾರಿ ಆಗಿರುತ್ತದೆ ಎಂದರು.
ಈ ಕಾರ್ಯಪಡೆಯು ಪ್ರತಿ ದಿನ ಬೆಳಿಗ್ಗೆ 6 ರಿಂದ 9 ರವರೆಗೆ ಮತ್ತು ಸಂಜೆ 5 ರಿಂದ 8 ರವರೆಗೆ ಕಾರ್ಯನಿರ್ವಹಿಸಿ, ನಗರಗಳನ್ನು ಪರಿವೀಕ್ಷಣೆ ಮಾಡುತ್ತದೆ. ಅನೈರ್ಮಲ್ಯವಿರುವ ಪ್ರದೇಶಗಳನ್ನು (ಬ್ಲಾಕ್ ಸ್ಪಾಟ್‌ಗಳನ್ನು) ಗುರುತಿಸಿ, ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಈ ಕಾರ್ಯಪಡೆಯನ್ನು ಮೊದಲಿಗೆ ಕೋಲಾರ ನಗರಸಭೆಯಲ್ಲಿ ಯಶಸ್ವಿಯಾಗಿ ಕಾರ್ಯಗತಗೊಳಿಸಿ, ಬಳಿಕ ಇತರ ಪುರಸಭೆ ಮತ್ತು ನಗರಸಭೆಗಳಲ್ಲಿ ವಿಸ್ತರಿಸುವ ಯೋಜನೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಎಂ.ಮಲ್ಲೇಶ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಸದಸ್ಯರು, ನಗರಸಭೆ ಆಯುಕ್ತರು ನವೀನ್ ಚಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.