ADVERTISEMENT

ಕೋಲಾರ: ವ್ಹೀಲೆ, ಪುಂಡರ ಹಾವಳಿ ತಡೆಯಲು ಫ್ಲೈಓವರ್‌ನಲ್ಲಿ ಕಾರು, ಬೈಕ್‌ ನಿರ್ಬಂಧ

ಜಿಲ್ಲೆಯಲ್ಲಿ ಡಿ.31ರ ಮಧ್ಯರಾತ್ರಿ 12.30ರವರೆಗೆ ಹೊಸ ವರ್ಷದ ಸಂಭ್ರಮಾಚರಣೆಗೆ ಅನುಮತಿ: ಎಸ್‌ಪಿ ನಿಖಿಲ್‌

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 4:45 IST
Last Updated 30 ಡಿಸೆಂಬರ್ 2025, 4:45 IST
ಕೋಲಾರ ಹೊರವಲಯದ ರಾಷ್ಟ್ರೀಯ ಹೆದ್ದಾರಿ–75 ಫ್ಲೈಓವರ್‌ 
ಕೋಲಾರ ಹೊರವಲಯದ ರಾಷ್ಟ್ರೀಯ ಹೆದ್ದಾರಿ–75 ಫ್ಲೈಓವರ್‌    

ಕೋಲಾರ: ಹೊಸ ವರ್ಷಾಚರಣೆ, ಸಂಭ್ರಮ ಕಾರಣ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಪೊಲೀಸರು ಮಾರ್ಗಸೂಚಿ ಹೊರಡಿಸಿದ್ದು ಹೋಟೆಲ್‌, ಬಾರ್‌. ರೆಸ್ಟೋರೆಂಟ್‌ ಮಾಲೀಕರು ಹಾಗೂ ಸಾರ್ವನಿಕರಿಗೆ ಕೆಲವೊಂದು ಸಲಹೆ, ಸೂಚನೆ ನೀಡಿದ್ದಾರೆ.

‘ಹೊಸ ವರ್ಷದ ಹಿಂದಿನ ರಾತ್ರಿ ಅಂದರೆ ಡಿ.31ರಂದು ಮಧ್ಯರಾತ್ರಿ 12.30ವರೆಗೆ ಮಾತ್ರ ಆಚರಣೆಗೆ ಅವಕಾಶವಿರಲಿದೆ. ನಂತರ ಯಾವುದೇ ರೀತಿಯ ಆಚರಣೆಯನ್ನು ನಿರ್ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ ಹಾಕಿ ವ್ಹೀಲಿಂಗ್‌ಗೆ ಕಡಿವಾಣ ವಿಧಿಸಲಿದ್ದೇವೆ. ಪುಂಡರ ಹಾವಳಿ ತಡೆಯಲು ವಿಶೇಷ ತಂಡ ರಚಿಸಿದ್ದು, ಪರಿಶೀಲನೆ ನಡೆಸಲಿದೆ. ಡಿ.31ರ ರಾತ್ರಿ ರಾಷ್ಟ್ರೀಯ ಹೆದ್ದಾರಿಯ–75ರಲ್ಲಿ ನರಸಾಪುರ, ಬೆಳ್ಳೂರು ಕ್ರಾಸ್‌ ಸೇರಿದಂತೆ ಎಲ್ಲಾ ಫ್ಲೈಓವರ್‌ಗಳಲ್ಲಿ ಬೈಕ್‌ ಹಾಗೂ ಕಾರು ಪ್ರವೇಶಕ್ಕೆ ನಿರ್ಬಂಧ ಹೇರಿದ್ದೇವೆ. ಸರ್ವಿಸ್‌ ರಸ್ತೆಯಲ್ಲಿಯೇ ಹೋಗಬೇಕು. ಫ್ಲೈಓವರ್‌ನಲ್ಲಿ ವ್ಹೀಲಿಂಗ್‌ ಮಾಡುವ ಸಾಧ್ಯತೆ ಇರುವುದರಿಂದ ಈ ಕ್ರಮ ವಹಿಸಿದ್ದೇವೆ ಎಂದರು.

ADVERTISEMENT

ಮದ್ಯಪಾನ ಮಾಡಿ ವಾಹನ ಚಾಲನೆ (ಡ್ರಂಕ್‌ ಅಂಡ್‌ ಡ್ರೈವ್‌) ಮಾಡುವವರ ಮೇಲೂ ನಿಗಾ ಇಡಲಿದ್ದೇವೆ. ಹೀಗಾಗಿ, ಕುಡಿದು ವಾಹನ ಚಾಲನೆ ಮಾಡಬಾರದೆಂದು ವಿನಂತಿಸಿಕೊಳ್ಳುತ್ತೇನೆ. ಮದ್ಯಪಾನ ಮಾಡುವಂತಿದ್ದರೆ ಬೇರೆ ಯಾರನ್ನಾದರೂ ಚಾಲಕರನ್ನು ಇಟ್ಟುಕೊಂಡು ಅವರ ಜೊತೆ ಮನೆಗೆ ಹೋಗಿ. ಇಲ್ಲವೇ ಮನೆಯಲ್ಲಿಯೇ ಹೊಸ ವರ್ಷದ ಪಾರ್ಟಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ವ್ಹೀಲಿಂಗ್‌, ಕುಡಿದು ಚಾಲನೆ ಮಾಡಿ ಕಾನೂನು ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ ವಹಿಸುತ್ತೇವೆ. ಕೋರ್ಟ್‌ ಕೇಸುಗಳು ಆಗುತ್ತವೆ. ಕನಿಷ್ಠ ₹ 10 ಸಾವಿರ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹಾಗೆಯೇ, ಹೊಸ ವರ್ಷದ ದಿನ ತಮ್ಮ ಮಕ್ಕಳು ಎಲ್ಲಿಗೆ ಹೋಗುತ್ತಾರೆ ಎಂಬುದರ ಮೇಲೆ ನಿಗಾ ಇಡಿ ಇಡಿ. ಯಾರ ಜೊತೆ ಹೋಗುತ್ತಿದ್ದಾರೆ, ಯಾವಾಗ ವಾಪಸ್‌ ಬರುತ್ತಾರೆ ಎಂಬುದರ ಬಗ್ಗೆ ಪೋಷಕರು ವಿಶೇಷ ಕಾಳಜಿ ತೆಗೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.

ಹೊಸ ವರ್ಷಾಚರಣೆ ಸಂಬಂಧ ಮಾರ್ಗಸೂಚಿ ಬಿಡುಗಡೆ ರಾತ್ರಿ 12.30ರ ನಂತರ ಸಂಭ್ರಮಾಚರಣೆಗೆ ನಿರ್ಬಂಧ ಹೋಟೆಲ್‌, ಬಾರ್‌. ರೆಸ್ಟೋರೆಂಟ್‌ ಮಾಲೀಕರು, ಸಾರ್ವನಿಕರಿ‌ಗೆ ಸೂಚನೆ

ವರ್ಷ ವರ್ಷಾಚರಣೆ ಸಂಬಂಧ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ವಿಶೇಷ ತಂಡ ರಚಿಸಿ ನಿಗಾ ಇಡಲಾಗಿದೆ. ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದು
ನಿಖಿಲ್‌ ಬಿ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.