ADVERTISEMENT

ಮುಳಬಾಗಿಲು: ಡಾಂಬರು ಕಂಡು ದಶಕವಾಯ್ತು!

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2025, 7:31 IST
Last Updated 3 ಫೆಬ್ರುವರಿ 2025, 7:31 IST
ಮುಳಬಾಗಿಲು ತಾಲ್ಲೂಕಿನ ಯಳಗೊಂಡಹಳ್ಳಿ ಮಾರ್ಗದ ಮಿಣಜೇನಹಳ್ಳಿಯ ರಸ್ತೆ ಸಂಪೂರ್ಣವಾಗಿ ಡಾಂಬರು ಮಾಯವಾಗಿ ಮಣ್ಣಿನ ರಸ್ತೆಯಾಗಿ ಬದಲಾಗಿರುವುದು
ಮುಳಬಾಗಿಲು ತಾಲ್ಲೂಕಿನ ಯಳಗೊಂಡಹಳ್ಳಿ ಮಾರ್ಗದ ಮಿಣಜೇನಹಳ್ಳಿಯ ರಸ್ತೆ ಸಂಪೂರ್ಣವಾಗಿ ಡಾಂಬರು ಮಾಯವಾಗಿ ಮಣ್ಣಿನ ರಸ್ತೆಯಾಗಿ ಬದಲಾಗಿರುವುದು   

ಮುಳಬಾಗಿಲು: ತಾಲ್ಲೂಕಿನ ಪಿಚ್ಚಗುಂಟ್ಲಹಳ್ಳಿಯಿಂದ ಮಿಣಜೇನಹಳ್ಳಿವರೆಗಿನ ರಸ್ತೆ ಸುಮಾರು 10 ವರ್ಷಗಳಿಂದಲೂ ದುರಸ್ತಿ ಕಾಣದೆ ನನೆಗುದಿಗೆ ಬಿದ್ದಿದೆ. ಜನ ಮತ್ತು ವಾಹನ ಸಂಚರಿಸಲು ಪ್ರಯಾಸಪಡಬೇಕಾಗಿದೆ. ರಸ್ತೆಯನ್ನು ಡಾಂಬರು ಅಥವಾ ಸಿಮೆಂಟ್ ರಸ್ತೆಯನ್ನಾಗಿ ಮಾಡಬೇಕಾಗಿದೆ. ಇದು ಸಾರ್ವಜನಿಕರ ಆಗ್ರಹವೂ ಹೌದು.

ಯಳಗೊಂಡಹಳ್ಳಿ ಮಾರ್ಗವಾಗಿ ಹೋಗುವ ಪಿಚ್ಚಗುಂಟ್ಲಹಳ್ಳಿಯಿಂದ ಮಿಣಜೇನಹಳ್ಳಿ ಮೂಲಕ ನೆರೆಯ ಕೆಜಿಎಫ್ ಹಾಗೂ ಬಂಗಾರಪೇಟೆ ತಾಲ್ಲೂಕುಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದೆ. ಡಾಂಬರು ಕಿತ್ತು ಹೋಗಿ ಮಣ್ಣಿನ ರಸ್ತೆಯಾಗಿ ಬದಲಾಗಿ ಸುಮಾರು ಹತ್ತು ವರ್ಷವೇ ಕಳೆದಿದೆ.

ರಸ್ತೆ ಉದ್ದಕ್ಕೂ ಮೊಣಕಾಲುದ್ಧದ ಗುಂಡಿಗಳು ಬಿದ್ದಿವೆ. ಇಂತಹ ದುರ್ಗಮ ರಸ್ತೆಯಲ್ಲಿ ಪ್ರತಿದಿನ ವಿದ್ಯಾರ್ಥಿಗಳು, ವಯೋವೃದ್ಧರು, ಮಹಿಳೆಯರು, ಬಾಣಂತಿಯರು, ಗರ್ಭಿಣಿಯರು ಹಾಗೂ ಸಾರ್ವಜನಿಕರು ಪ್ರತಿನಿತ್ಯ ಸಂಚರಿಸಬೇಕು. ಜನರಿಗೂ ಇದೇ ವಾಡಿಕೆ ಆಗಿದೆ.

ADVERTISEMENT

ವಾಹನ ಓಡಾಟದಿಂದ ಜಲ್ಲಿಕಲ್ಲು ರಸ್ತೆ ಬದಿಗೆ ಸರಿದಿದೆ. ರಸ್ತೆ ಉದ್ದಕ್ಕೂ ಕೇವಲ ಮಣ್ಣು ತುಂಬಿಕೊಂಡಿದ್ದು ದಿನವೂ ವಾಹನಗಳಿಗೆ ದೂಳಿನ ಮಜ್ಜನವಾಗುತ್ತದೆ. ರಸ್ತೆಯಲ್ಲಿ ಸುಮಾರು ಮೂರು, ನಾಲ್ಕು ಅಡಿಯಷ್ಟು ಆಳದ ಗುಂಡಿಗಳು ಬಿದ್ದಿದ್ದು, ವಾಹನಗಳು ಗುಂಡಿಗಳಲ್ಲಿ ಹತ್ತಿ, ಇಳಿದು ಸಂಚಾರ ಮಾಡಬೇಕು.

ದೂಳು ಎಬ್ಬಿಸುವ ಟಿಪ್ಪರ್‌ಗಳು: ಇನ್ನು ಇದೇ ರಸ್ತೆ ಒಂದು ಭಾಗದಲ್ಲಿ ಆಳವಾದ ಕಲ್ಲು ಬಂಡೆಗಳು ಹಾಗೂ ಜಲ್ಲಿ ಕಲ್ಲುಗಳ ಕ್ರಷರ್‌ ಇವೆ. ಭಾರೀ ಗಾತ್ರದ ಟಿಪ್ಪರ್ ಲಾರಿಗಳು ಜಲ್ಲಿ, ಎಂ-ಸ್ಯಾಂಡ್ ಮತ್ತಿತರ ಕಲ್ಲಿನ ಸಾಮಗ್ರಿ ಸಾಗಿಸುವ ಕಾರಣದಿಂದ ರಸ್ತೆ ಹಾಳಾಗಿದೆ. ರಸ್ತೆ ಮೇಲೆ ದೂಳು ಹೊಗೆಯಂತೆ ಆವರಿಸಿಕೊಳ್ಳುತ್ತದೆ.

ಮಳೆ ಬಂದರೆ ನೀರು ಗುಂಡಿಗಳು: ಇನ್ನು ರಸ್ತೆಯಲ್ಲಿ ನಿರ್ಮಾಣವಾಗಿರುವ ಗುಂಡಿಗಳು ಮಳೆಗಾಲದಲ್ಲಿ ಮಳೆ ನೀರಿನಿಂದ ತುಂಬಿಕೊಂಡಿರುತ್ತವೆ. ಆ ಸಂದರ್ಭದಲ್ಲಿ ರಸ್ತೆ ಯಾವುದು ಅಥವಾ ಗುಂಡಿ ಯಾವುದು ಎಂದು ತಿಳಿಯದ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಪ್ರಯಾಣಿಕರು.

ಚರ್ಮ ಕಾಯಿಲೆ ಭೀತಿ: ಬೇಸಿಗೆ ಕಾಲದಲ್ಲಿ ರಸ್ತೆ ದೂಳು ಗಾಳಿಯಲ್ಲಿ ಹರಡಿ ಕೆಲವರಿಗೆ ಕೆಮ್ಮು, ನೆಗಡಿ ಪ್ರಾರಂಭವಾದರೆ ಮತ್ತೆ ಕೆಲವರಿಗೆ ಚರ್ಮದ ಮೇಲೆ ದೂಳು ಬಿದ್ದು ಸಣ್ಣ ಸಣ್ಣ ಗುಳ್ಳೆಗಳು ಎದ್ದೇಳುತ್ತವೆ. ಹೀಗಾಗಿ ರಸ್ತೆ ದೂಳು ರೋಗಗಳಿಗೆ ಕಾರಣವಾಗಿದೆ.

ಪ್ರತಿನಿತ್ಯ ಶಾಲಾ ವಾಹನದಲ್ಲಿ ಹಾಗೂ ಕೆಲವೊಮ್ಮೆ ಬಸ್‌ಗಳಲ್ಲಿ ಶಾಲೆಗಳಿಗೆ ಹೋಗಿ ಬರುವಾಗ ಆಳವಾದ ಗುಂಡಿಗಳಲ್ಲಿ ವಾಹನಗಳು ಇಳಿದು ಹತ್ತುವಾಗ ಕೆಳಗೆ ಬೀಳುವಂತೆ ವಾಲುತ್ತವೆ. ಆ ಸಮಯದಲ್ಲಿ ಎಲ್ಲಿ ಬಿದ್ದು ಪ್ರಾಣಕ್ಕೆ ಗಂಡಾಂತರ ಬರಬಹುದೋ ಎಂಬ ಭಯವಾಗುತ್ತದೆ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

₹2.5ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಮೊದಲ ಪ್ರಾಶಸ್ತ್ಯದಲ್ಲಿಯೇ ರಸ್ತೆ ಡಾಂಬರೀಕರಣ ನಡೆಸಲು ಶಾಸಕರು ತಿಳಿಸಿದ್ದಾರೆ.
ಹನುಮಪ್ಪ ಲೋಕೋಪಯೋಗಿ ಇಲಾಖೆ ಎಂಜಿನಿಯರ್
ಬಾಣಂತಿ ಗರ್ಭಿಣಿಯರಿಗೆ ದುಸ್ತರ
ಹಳ್ಳ ದಿನ್ನೆ ಕಲ್ಲು ಜಲ್ಲಿ ದೂಳು ಮತ್ತಿತರ ಸಮಸ್ಯೆಗಳೇ ತುಂಬಿಕೊಂಡಿರುವ ರಸ್ತೆಯಲ್ಲಿ ಬಾಣಂತಿ ತಾಯಂದಿರು ಹಾಗೂ ಗರ್ಭಿಣಿಯರು ಸಂಚಾರ ಮಾಡಲು ಆಗದ ಸ್ಥಿತಿ ಇದೆ. ಸ್ವಲ್ಪ ಯಾಮಾರಿದರೂ ಪ್ರಾಣಕ್ಕೆ ಸಂಚಕಾರ ಬರಲಿದೆ. ಡಾಂಬರು ಇಲ್ಲದ ರಸ್ತೆಗೆ ಇನ್ನಾದರೂ ಇಲಾಖೆ ಅಥವಾ ಜನಪ್ರತಿನಿಧಿಗಳು ಡಾಂಬರು ಭಾಗ್ಯ ಕಲ್ಪಿಸಿದರೆ ಜನರ ಬದುಕು ಸುಗುಮವಾಗಲಿದೆ. ವೆಂಕಟಪ್ಪ ಸ್ಥಳೀಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.