ADVERTISEMENT

‌ಕೋಲಾರ | ಪರೀಕ್ಷೆಯಾದ ತಾಸಿನಲ್ಲೇ ಫಲಿತಾಂಶ

ಪಿ.ಎಚ್‍ಡಿ ಕೋರ್ಸ್‌ ವರ್ಕ್: ಉತ್ತರ ವಿ.ವಿಯ ವಿಶೇಷ ಸಾಧನೆ–ವಿಶ್ರಾಂತ ಕುಲಪತಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 7:14 IST
Last Updated 10 ಅಕ್ಟೋಬರ್ 2025, 7:14 IST
ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಆಡಳಿತ ಕಚೇರಿಯಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಮಾಣಪತ್ರ ವಿತರಿಸಿದರು
ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಆಡಳಿತ ಕಚೇರಿಯಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಮಾಣಪತ್ರ ವಿತರಿಸಿದರು    

ಕೋಲಾರ: ಆರು ತಿಂಗಳಲ್ಲಿ ಪಿ.ಎಚ್‍ಡಿ ಆನ್‍ಲೈನ್ ಮತ್ತು ಆಫ್‍ಲೈನ್‍ನಲ್ಲಿ ಕೋರ್ಸ್ ವರ್ಕ್ ತರಗತಿಗಳು ಹಾಗೂ ಪರೀಕ್ಷೆಗಳನ್ನು ನಡೆಸಿ ಕೇವಲ ಒಂದು ಗಂಟೆಯಲ್ಲಿ ಫಲಿತಾಂಶ ನೀಡಿದ್ದಲ್ಲದೇ, ಒಂದೇ ದಿನದಲ್ಲಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ನೋಂದಣಿ ದೃಢೀಕರಣ ಪತ್ರ ವಿತರಿಸಿರುವ ದೇಶದ ಮೊದಲ
ವಿಶ್ವವಿದ್ಯಾಲಯ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ವೇಣುಗೋಪಾಲ್
ಶ್ಲಾಘಿಸಿದರು.

ಟಮಕದಲ್ಲಿರುವ ಉತ್ತರ ವಿಶ್ವವಿದ್ಯಾಲದ ಆಡಳಿತ ಕಚೇರಿಯಲ್ಲಿ 9 ವಿಷಯಗಳ ಪಿ.ಎಚ್‍ಡಿ ಕೋರ್ಸಿನ 78 ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ವಿವಿಧ ಕೋರ್ಸುಗಳಿಗೆ ನೀಡಿರುವ ಅವಕಾಶ, ಆಡಳಿತ, ಬೋಧನಾ ವೈಖರಿ ಮಾದರಿಯಾಗಿದೆ, ಇದರಿಂದಾಗಿ ಸಂಶೋಧನಾರ್ಥಿಗಳು ಅತಿ ಕಡಿಮೆ ಅವಧಿಯಲ್ಲಿ ಕೋರ್ಸ್ ಮುಗಿಸಿ ಡಾಕ್ಟರೇಟ್ ಪದವಿ ಪಡೆಯಲು ಸಹಕಾರಿಯಾಗಿದೆ ಎಂದರು.

ADVERTISEMENT

ಉತ್ತರ ವಿ.ವಿ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಮಾತನಾಡಿ, ‘ಉತ್ತರ ವಿಶ್ವವಿದ್ಯಾಲಯ ಆರಂಭಗೊಂಡ ನಂತರ ಇದು ಮೊದಲ ಹಾಗೂ ಚೊಚ್ಚಲ ಪಿ.ಎಚ್‍ಡಿ ಕಾರ್ಯಕ್ರಮವಾಗಿದೆ. ಈ ಮೊದಲ ಅವಧಿಯಲ್ಲೇ ನಾವು ಹಲವು ದಾಖಲೆ ಮಾಡುವ ತವಕದಲ್ಲಿ ಕೆಲಸ ನಿರ್ವಹಿಸಿದ್ದೇವೆ’ ಎಂದು ತಿಳಿಸಿದರು.

ಅತ್ಯಂತ ತ್ವರಿತವಾಗಿ ಕೋರ್ಸ್ ವರ್ಕ್ ನಡೆಸಿ ತಾತ್ಕಾಲಿಕ ನೋಂದಣಿ ಪ್ರಮಾಣಪತ್ರ ಒಂದೇ ದಿನದಲ್ಲಿ ವಿತರಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.

ಬಿ.ಎಡ್ ಮತ್ತಿತರ ಪರೀಕ್ಷಾ ಫಲಿತಾಂಶ ಸಹ ಒಂದೇ ದಿನದಲ್ಲಿ ಮೌಲ್ಯಮಾಪನ ಮಾಡಿ ನೀಡಿದ ಖ್ಯಾತಿ ಹೊಂದಿದೆ. ವಿ.ವಿಯ ಧ್ಯೇಯ ಯಾವುದೇ ಉತ್ತಮ ಕಾರ್ಯಕ್ಕೆ ವಿಳಂಬ ಸಲ್ಲದು ಎಂಬುದಾಗಿದೆ ಎಂದು ತಿಳಿಸಿದರು.

ಮೌಲ್ಯಮಾಪನ ಕುಲಸಚಿವ ಪ್ರೊ.ಲೋಕನಾಥ್ ಮಾತನಾಡಿ, ‘ಸಂಶೋಧನಾ ವಿದ್ಯಾರ್ಥಿಗಳಿಗೆ ನಮ್ಮ ವಿ.ವಿ ಉತ್ತಮ ಅವಕಾಶ ಕಲ್ಪಿಸಿದೆ. ಅತಿ ಶೀಘ್ರವಾಗಿ ಸಂಶೋಧನೆ ಮುಕ್ತಾಯ ಮಾಡಿ ಮಹಾಪ್ರಬಂಧ ಸಲ್ಲಿಸಿ ಉಳಿದೆಲ್ಲಾ ವಿಶ್ವವಿದ್ಯಾಲಯಗಳಿಗಿಂತ ಉತ್ತಮ ಮಟ್ಟದಲ್ಲಿ ಪ್ರಗತಿ ಸಾಧಿಸಬೇಕು’ ಎಂದು ಕಿವಿಮಾತು ಹೇಳಿದರು.

ಕುಲಸಚಿವ ಶ್ರೀಧರ್, ಹಣಕಾಸು ಅಧಿಕಾರಿ ವಸಂತಕುಮಾರ್, ಮಂಗಸಂದ್ರ ಸ್ನಾತಕೋತ್ತರ ವಿಭಾಗದ ನಿರ್ದೇಶಕಿ ಪ್ರೊ.ಕುಮುಧಾ ಹಾಗೂ ಮುರಳೀಧರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.