
ಕೋಲಾರ: ತಾಲ್ಲೂಕಿನ ನರಸಾಪುರ ಗ್ರಾಮದ ಕೋಲಾರ–ಬೆಂಗಳೂರು ಮಾರ್ಗದಲ್ಲಿ ಹೊಸದಾಗಿ ನಿರ್ಮಿಸಿರುವ ದ್ವಿಪಥ ರಸ್ತೆಗೆ ಡಾಂಬರೀಕರಣ ಕಾಮಗಾರಿ ಪುನರ್ ಆರಂಭವಾಗಿದೆ. ಆದರೆ, ಹೈಕೋರ್ಟ್ ತಡೆಯಾಜ್ಞೆ ಇರುವ ಕಾರಣ ಸ್ವಲ್ಪ ಜಾಗದಲ್ಲಿ ಡಾಂಬರೀಕರಣ ನಡೆದಿಲ್ಲ. ಶುಕ್ರವಾರ ಸಂಜೆ ಈ ಜಾಗ ಮಾತ್ರ ಬಿಟ್ಟು ಕೆಲಸ ನಡೆಯಿತು.
ಅಧಿಕಾರಿಗಳು ಹಾಗೂ ಕೆಲವರು ತಮಗೆ ಸೇರಿದ ಜಾಗವನ್ನು ಬಲವಂತವಾಗಿ ತೆಗೆದುಕೊಂಡು, ಖಾತೆ ರದ್ದು ಮಾಡಿದ್ದಾರೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಕಳೆದ ವರ್ಷವೇ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಆ ಜಾಗದಲ್ಲಿ ಫಲಕ ಕೂಡ ನೆಡಲಾಗಿದೆ.
ಅದೇ ಜಾಗದ ಅಕ್ಕಪಕ್ಕದಲ್ಲೇ ಡಾಂಬರೀಕರಣ ನಡೆಯಿತು. ಗ್ರಾಮಸ್ಥರು ಈ ಜಾಗದಲ್ಲಿ ಗುಂಪುಗೂಡಿ ಕುತೂಹಲದಿಂದ ಚರ್ಚಿಸುತ್ತಿದ್ದರು. ವಿವಿಧ ಪಕ್ಷಗಳ ಮುಖಂಡರು ಸೇರಿದ್ದರು.
ಈ ವೇಳೆ ಸ್ಥಳಕ್ಕೆ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಕುರ್ಕಿ ರಾಜೇಶ್ವರಿ, ‘ನಾನು ರಸ್ತೆ ಕಾಮಗಾರಿಗೆ ಅಥವಾ ಡಾಂಬರೀಕರಣಕ್ಕೆ ವಿರೋಧಿ ಅಲ್ಲ. ಆದರೆ, ಈ ಜಾಗ ನನ್ನದು. ಕಾನೂನುಬದ್ಧವಾಗಿ ನೋಟಿಸ್ ನೀಡಿ ಪರಿಹಾರ ನೀಡಿದರೆ ಮಾತ್ರ ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಿ ಈ ಜಾಗದಲ್ಲಿ ಡಾಂಬರೀಕರಣಕ್ಕೆ ಅವಕಾಶ ಮಾಡಿ ಕೊಡುತ್ತೇನೆ’ ಎಂದರು.
ನಮ್ಮ ಆಸ್ತಿಯ ಖಾತೆ ರದ್ದು ಮಾಡಿ ಬಲವಂತವಾಗಿ ಜಾಗ ವಶಕ್ಕೆ ಪಡೆದಿದ್ದಾರೆ. ಏಕಾಏಕಿ ಕೆಲಸ ಮಾಡಲು ಆರಂಭಿಸಿದ್ದಾರೆ. ಇದು ಮನಸ್ಸಿಗೆ ನೋವುಂಟು ಮಾಡಿತು. ನಾವೇ ಒತ್ತುವರಿ ಮಾಡಿಕೊಂಡಿದ್ದೇವೆ ಎಂದರ್ಥ ಬರುತ್ತದೆ. ಇದು ಅವಮಾನ ಆಗುವಂಥ ವಿಚಾರ. ಹೀಗಾಗಿ, ನಮ್ಮ ಆಸ್ತಿಗೆ ಸಂಬಂಧಿಸಿದಂತೆ ಮಾತ್ರ ತಡೆಯಾಜ್ಞೆ ತಂದಿದ್ದೇನೆ. ನಮ್ಮ ಆಸ್ತಿ ಉಳಿಸಿಕೊಳ್ಳಲು ಈ ಕ್ರಮ ವಹಿಸಿದೆ ಎಂದು ವಿವರಿಸಿದರು.
ಕೆಲವರು ನನ್ನಿಂದಾಗಿ ಕೆಲಸ ಸ್ಥಗಿತಗೊಂಡಿದೆ ಎಂದು ಭಾವಿಸಿದ್ದಾರೆ. ನಾನು ಯಾವತ್ತೂ ರಸ್ತೆ ನಿರ್ಮಾಣಕ್ಕೆ ವಿರೋಧಿ ಅಲ್ಲ. ಈ ವಿಚಾರ ಹೆಚ್ಚಿನವರಿಗೆ ಗೊತ್ತಿದೆ. ಖಾತೆ ರದ್ದು ಮಾಡಿದ್ದಕ್ಕೆ ನ್ಯಾಯಾಲಯ ಮೊರೆ ಹೋದೆ. ನನಗೆ ನಮ್ಮ ಜನ ಮುಖ್ಯ, ಅವರಿಗಾಗಿ ಜಾಗ ಬಿಟ್ಟು ಕೊಡಲು ಸಿದ್ಧ. ಆದರೆ, ಹಾಗೆಯೇ ಕೊಟ್ಟರೆ ತಪ್ಪು ನಮ್ಮದು ಎಂದಾಗುತ್ತದೆ. ಈ ಜಾಗದ ಸಂಬಂಧ ಮತ್ತೆ ನಮ್ಮ ಹೆಸರಿಗೆ ಖಾತೆ ಮಾಡಬೇಕು. ಹೀಗಾಗಿ, ಕಾನೂನಾತ್ಮಕವಾಗಿ ಸರ್ಕಾರದಿಂದ ಪರಿಹಾರ ಪಡೆದು ಜಾಗ ಬಿಟ್ಟು ಕೊಡುತ್ತೇವೆ. ಅದಕ್ಕೆ ತಮ್ಮಂದಿರೂ ಒಪ್ಪಿದ್ದಾರೆ. ಈ ವಿಚಾರವನ್ನು ಎಇಇ ಮಂಜುನಾಥ್ ಇದ್ದಾಗಲೇ ಚರ್ಚಿಸಲಾಗಿತ್ತು. ಏಕೆ ಖಾತೆ ರದ್ದು ಮಾಡಿದರೋ ಗೊತ್ತಿಲ್ಲ ಎಂದರು.
ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ ಈಗಲೇ ಜಾಗ ಬಿಟ್ಟುಕೊಡಲು ಆಗಲ್ಲ. ಅದು ಕಾನೂನು ಪ್ರಕ್ರಿಯೆ ಮೂಲಕವೇ ಆಗಬೇಕಿದೆ. ಖಾತೆ ನಮ್ಮ ಹೆಸರಿಗೆ ಮತ್ತೆ ಆಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು, ಮುಖಂಡರು ಇದ್ದರು
ಕೆಲವರ ತಪ್ಪಿನಿಂದ ಸಮಸ್ಯೆ
ಸೃಷ್ಟಿ ಕೆಲವರು ಎಸಗಿದ ತಪ್ಪಿನಿಂದಾಗಿ ಈ ರಸ್ತೆಯಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ರಸ್ತೆ ನಿರ್ಮಾಣ ಕಾಮಗಾರಿ ವಿಳಂಬವಾಯಿತು ದೂಳು ಸೃಷ್ಟಿಯಾಗಿ ಎಲ್ಲರಿಗೂ ಸಮಸ್ಯೆ ತಂದೊಡ್ಡಿತು. ಐದಾರು ತಿಂಗಳಿನಿಂದ ರಸ್ತೆ ಕಾರ್ಯ ನಿಂತಿತ್ತು. ಡಾಂಬರೀಕರಣಕ್ಕಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರೆಗೆ ಹೋಗಬೇಕಾಯಿತು ಎಂದು ಕುರ್ಕಿ ರಾಜೇಶ್ವರಿ ಹೇಳಿದರು.
ಸರ್ಕಾರ ತಮ್ಮದೆಂದು ಕೆಲವರ ದರ್ಪ
ಕೆಲವರು ತಮಗೆ ಅಧಿಕಾರವಿದೆ ಸರ್ಕಾರ ತಮ್ಮದೇ ಎಂದು ದರ್ಪ ತೋರಿಸಲು ಮುಂದಾಗಿದ್ದಾರೆ. ಅಕ್ರಮವಾಗಿ ನಮ್ಮ ಜಾಗದ ಖಾತೆ ರದ್ದು ಮಾಡಿದ್ದಾರೆ ಎಂದು ಕುರ್ಕಿ ರಾಜೇಶ್ವರಿ ಆಕ್ರೋಶ ವ್ಯಕ್ತಪಡಿಸಿದರು. ನರಸಾಪುರ ಗ್ರಾಮದಲ್ಲಿ ಈಗ ನಿರ್ಮಾಣವಾಗುತ್ತಿರುವ ದ್ವಿಪಥ ರಸ್ತೆಗೆ ಚರಂಡಿಯೂ ಇಲ್ಲ ಪಾದಚಾರಿ ಮಾರ್ಗವೂ ಇಲ್ಲ. ಹೀಗಾಗಿ ಈಗಲೂ ನ್ಯಾಯಾಲಯಕ್ಕೆ ಹೋಗಿ ರಸ್ತೆ ಕಾಮಗಾರಿ ನಿಲ್ಲಿಸಬಹುದು. ಆದರೆ ನಾನು ಆ ರೀತಿ ಮಾಡಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.