ಕೋಲಾರ: ನಗರದ ಹೊರವಲಯದ ಗಾಜಲದಿನ್ನೆಯಲ್ಲಿರುವ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯೊಬ್ಬರು ಹಾಸ್ಟೆಲ್ ಕೊಠಡಿಯಲ್ಲಿ ಬುಧವಾರ ಬೆಳಿಗ್ಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಆ ವಿದ್ಯಾರ್ಥಿನಿಯನ್ನು ಆರ್.ಎಲ್.ಜಾಲಪ್ಪ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.
ಬುಧವಾರ ಬೆಳಿಗ್ಗೆ 11 ಗಂಟೆಗೆ ಪರೀಕ್ಷೆ ಇತ್ತು. ಅದಕ್ಕೂ ಮೊದಲು ವಿದ್ಯಾರ್ಥಿನಿಯು ಪ್ರಾರ್ಥನೆಯಲ್ಲಿ ಕೂಡ ಪಾಲ್ಗೊಂಡಿದ್ದರು. ಇನ್ನಿತರ ವಿದ್ಯಾರ್ಥಿಗಳು ಪರೀಕ್ಷೆಗೆ ಓದಿಕೊಳ್ಳುತ್ತಿದ್ದಾಗ ಈ ವಿದ್ಯಾರ್ಥಿನಿಯು ಹಾಸ್ಟೆಲ್‌ನ ಕೊಠಡಿಗೆ ತೆರಳಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಕೆ ಬಾರದೇ ಇದ್ದುದ್ದನ್ನು ಗಮನಿಸಿದ ಸ್ನೇಹಿತೆಯರು, ಕೊಠಡಿಗೆ ಹೋಗಿ ಗಮನಿಸಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಇದ್ದದ್ದನ್ನು ನೋಡಿ ಕೂಡಲೇ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲಿಸಿದರು.
ವಿದ್ಯಾರ್ಥಿನಿಯು ಮಾನಸಿಕ ಒತ್ತಡಕ್ಕೆ ಸಿಲುಕಿದ್ದ ಪ್ರಸಂಗ ಹಿಂದೆಯೂ ವರದಿ ಆಗಿತ್ತು. ಪರೀಕ್ಷಾ ಒತ್ತಡದಿಂದ ಈ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಜಿಲ್ಲೆಯ ಅಲ್ಪಅಸಂಖ್ಯಾತರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ವಸತಿ ಶಾಲೆಯಲ್ಲಿ ವಾರ್ಡನ್ ಹುದ್ದೆ ಖಾಲಿಬಿದ್ದಿದೆ. ಪ್ರಾಂಶುಪಾಲರೇ ನೋಡಿಕೊಳ್ಳಬೇಕಿದ್ದು, ವಸತಿ ಶಾಲೆಯಲ್ಲಿ ಏನು ನಡೆಯುತ್ತಿದೆ ಎಂಬುದೇ ಇಲ್ಲಿನ ಶಿಕ್ಷಕರಿಗೆ ಸರಿಯಾಗಿ ಗೊತ್ತಿಲ್ಲ, ಸರಿಯಾಗಿ ಮಾಹಿತಿ ಕೊಡುವುದಿಲ್ಲ, ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯವೂ ಇದರಲ್ಲಿದೆ ಎಂದು ಸಾರ್ವಜನಿಕರು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.