ADVERTISEMENT

CJI ಮೇಲೆ ಶೂ ಎಸೆತ ಖಂಡಿಸಿ ಅ.17ಕ್ಕೆ ಕೋಲಾರ ಜಿಲ್ಲೆಯಲ್ಲಿ ಸ್ವಯಂಪ್ರೇರಿತ ಬಂದ್‌

ಮನುಸ್ಮೃತಿ ಶಾಸನ ಮರುಸ್ಥಾಪಿಸಲು ಹುನ್ನಾರ: ಆರೋಪ–ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆತ ಖಂಡಿಸಿ ಬಂದ್‌ಗೆ ಕರೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 7:10 IST
Last Updated 15 ಅಕ್ಟೋಬರ್ 2025, 7:10 IST
ಕೋಲಾರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಮುಖಂಡರು ಬಂದ್‌ಗೆ ಸಂಬಂಧಿಸಿದಂತೆ ಕರಪತ್ರ ಬಿಡುಗಡೆ ಮಾಡಿದರು
ಕೋಲಾರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಮುಖಂಡರು ಬಂದ್‌ಗೆ ಸಂಬಂಧಿಸಿದಂತೆ ಕರಪತ್ರ ಬಿಡುಗಡೆ ಮಾಡಿದರು   

ಕೋಲಾರ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರ ಪೀಠದತ್ತ ಈಚೆಗೆ ವಕೀಲರೊಬ್ಬರು ಶೂ ಎಸೆದ ಪ್ರಕರಣ ಖಂಡಿಸಿ ಅ.17ರ ಶುಕ್ರವಾರ ಜಿಲ್ಲೆಯಲ್ಲಿ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಮುಖಂಡರು ಮನವಿ ಮಾಡಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ‘ಸನಾತನವಾದಿ ಮನಸ್ಥಿತಿಯ ವಕೀಲ ರಾಕೇಶ್‌ ಕಿಶೋರ್‌ ಎಂಬಾತ ಈ ಕೃತ್ಯ ಎಸಗಿದ್ದು, ಸರ್ವೋಚ್ಛ ನ್ಯಾಯಾಲಯ ಪೀಠಕ್ಕೆ, ಪ್ರಜಾಪ್ರಭುತ್ವದ ಆತ್ಮವಾದ ಸಂವಿಧಾನಕ್ಕೆ ಹಾಗೂ ಭಾರತದ 140 ಕೋಟಿ ಜನರಿಗೆ ಅವಮಾನ ಮಾಡಿದ್ದಾರೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಬಹುದೊಡ್ಡ ಷಡ್ಯಂತ್ರದ ಭಾಗವಾಗಿದೆ. ಕೋಮುವಾದಿ ಸಂಘಟನೆ ಆರ್‌ಎಸ್‌ಎಸ್‌ಗೆ ನೂರು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಇಂಥ ಕೃತ್ಯ ನಡೆದಿರುವುದು ದೇಶದಲ್ಲಿ ಮತ್ತೆ ಮನುಸ್ಮೃತಿ ಶಾಸನ ಮರುಸ್ಥಾಪಿಸುವ ಹುನ್ನಾರವಾಗಿದೆ‌’ ಎಂದು ದೂರಿದರು.

ಸಿಪಿಎಂ ಮುಖಂಡ ಎಂ.ನಾರಾಯಣಸ್ವಾಮಿ ಮಾತನಾಡಿ, ‘ಆ ವಕೀಲ ಉದ್ದೇಶಪೂರ್ವಕವಾಗಿಯೇ ಶೂ ಎಸೆದಿದ್ದಾರೆ. ಇದು ಅಸ್ಪೃಶ್ಯತೆ ಸಂಕೇತ ಕೂಡ. ಸಂವಿಧಾನದ ಬಗ್ಗೆ ಮನುವಾದಿಗಳಿಗೆ‌ ಕಿಂಚಿತ್ ಗೌರವ ಇಲ್ಲ. ಅವರು ಶೂ ಎಸೆದ ಪ್ರಕರಣವನ್ನು ಖಂಡಿಸಲೇ ಇಲ್ಲ. ಪ್ರಧಾನಿ ಕೂಡ 9 ಗಂಟೆ ಬಳಿಕ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಸೊಲ್ಲೆತ್ತದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮನಸ್ಥಿತಿ ಎಲ್ಲರಿಗೂ ಗೊತ್ತೇ ಇದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸ್ವಯಂ ಪ್ರೇರಿತ ಬಂದ್‌ಗೆ ಎಲ್ಲಾ ದೇಶಪ್ರೇಮಿ ಸಂಘಟನೆಗಳು ಬೆಂಬಲಿಸಬೇಕು. ಬಂದ್ ಅನ್ನು ಶಾಂತಿಯುತವಾಗಿ ನಡೆಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.

ದಲಿತ ಮುಖಂಡ ಟಿ.ವಿಜಯಕುಮಾರ್ ಮಾತನಾಡಿ, 'ವಕೀಲನದ್ದು ಮನುವಾದಿ ಮನಸ್ಥಿತಿ ಎಂಬುದು ಈ ಪ್ರಕರಣದಲ್ಲಿ ಗೊತ್ತಾಗಿದೆ. ಈ ಕೃತ್ಯ ನಡೆಯಲು ಸರಿಯಾಗಿ ‌ಸಂಸ್ಕೃತಿ ಕಲಿಸದೆ ಇರುವುದೇ ಕಾರಣ. ಈ ದೇಶದಲ್ಲಿ ದಲಿತರನ್ನು ಇನ್ನೂ ಹಲವು ದೇಗುಲಗಳ ಒಳಗೆ ಬಿಡುತ್ತಿಲ್ಲ. ಈ ಸಮುದಾಯ ಕಂಡರೆ ಹಲವರಿಗೆ ಅಸೂಯೆ, ಹೊಟ್ಟೆ ಉರಿ. ಅಂಬೇಡ್ಕರ್ ಸಂವಿಧಾನ ಇಲ್ಲದಿದ್ದರೆ ನಮಗೆ ಉಳಿಗಾಲವಿರುತ್ತಿರಲಿಲ್ಲ. ಈ ಬಂದ್‌ಗೆ ಎಲ್ಲರೂ ಬೆಂಬಲ ನೀಡಿ ವಕೀಲನ ಕ್ರಮ ಖಂಡಿಸಬೇಕು’ ಎಂದು ಮನವಿ ಮಾಡಿದರು.

ಅಲ್ಪಸ‌ಂಖ್ಯಾತ ಸಮುದಾಯದ ಮುಖಂಡ ಅನ್ವರ್ ಪಾಷಾ ಮಾತನಾಡಿ, ‘ವಕೀಲ ರಾಕೇಶ್ ಕಿಶೋರ್ ತನ್ನ ದೇಹದಲ್ಲಿ ವಿಷ ತುಂಬಿಕೊಂಡಿದ್ದಾನೆ. ಈ ಪ್ರಕರಣ ವಿಚಾರದಲ್ಲಿ ಬಿಜೆಪಿ ಮುಖಂಡರು ಧ್ವನಿ ಎತ್ತುತ್ತಿಲ್ಲ. ಕಳೆದ 10 ವರ್ಷಗಳಿಂದ ದೇಶದಲ್ಲಿನ ವಾತಾವರಣ ಕೆಡಿಸಿದ್ದಾರೆ, ಧರ್ಮಗಳ ನಡುವೆ ತಂದಿಡುತ್ತಿದ್ದಾರೆ‌. ಅವರ ಆಡಳಿತದಲ್ಲಿ ಸಂವಿಧಾನ ಎಂಬುದು ಹೆಸರಿಗಷ್ಟೇ ಇದೆ. ಈ ಬಂದ್ ಯಶಸ್ಸುಗೊಳಿಸಿ ದೇಶದ ನ್ಯಾಯಾಲಯ ವ್ಯವಸ್ಥೆ ಬಲಪಡಿಸೋಣ’ ಎಂದು ಹೇಳಿದರು.

ಮುಖಂಡ ಎಂ.ಚಂದ್ರಶೇಖರ್ ಮಾತನಾಡಿ, ‘ಹೋರಾಟದ ಕೆಚ್ಚೆದೆ ನಮಗೆ ಇದೆ. ಹೆಚ್ಚು ಜನರು ಬರಬೇಕೆಂದೇನೂ ಇಲ್ಲ. ಸಂವಿಧಾನ ‌ರಕ್ಷಣೆಗಾಗಿ ಈ ಹೋರಾಟ ನಡೆಯುತ್ತಿದೆ. ಪಕ್ಷಭೇದವಿಲ್ಲದ ಹೋರಾಟ ಮಾಡೋಣ’ ಎಂದರು.

ದಲಿತರ‌ ಮೇಲಾಗಲಿ, ನ್ಯಾಯಾಲಯದ ಮೇಲಾಗಲಿ ಇಂಥ ದೌರ್ಜನ್ಯ ಯಾವತ್ತೂ ನಡೆಯಬಾರದು ಎಂದು ನುಡಿದರು.

ಗಮನ ಸಂಘಟನೆ ಶಾಂತಮ್ಮ ಮಾತನಾಡಿ, ‘ಪೀಠಕ್ಕೆ ಗೌರವ ಕೊಡಬೇಕು. ಅದನ್ನೂ ಆ ವಕೀಲ ಕಲಿಯದಿದ್ದರೆ ಹೇಗೆ? ಪೀಠಕ್ಕೆ ಅವಮಾನ ಮಾಡಿದ್ದಾರೆ. ಸಂವಿಧಾನದ ಬಗ್ಗೆ ದ್ವೇಷ ಏಕೆ, ಹೆಣ್ಣು ಮಕ್ಕಳನ್ನು ತುಳಿಯುವ ಮನು ಸಂಸ್ಕೃತಿ ಏಕೆ’ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವರದೇನಹಳ್ಳಿ ವೆಂಕಟೇಶ್, ಸಲಾಲುದ್ದೀನ್ ಬಾಬು, ಕೃಷ್ಣಪ್ಪ, ವಿ.ಅಂಬರೀಷ್, ಹಾರೋಹಳ್ಳಿ ರವಿ, ಶ್ರೀರಂಗ, ಸಂಗಸಂದ್ರ ವಿಜಯ ಕುಮಾರ್, ಸುಬ್ರಮಣಿ, ಈನೆಲ ಈಜಲ ವೆಂಕಟಚಲಪತಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಇದ್ದರು.

ಶೂ ಎಸೆತವನ್ನು ನಿವೃತ್ತ ಐಪಿಎಸ್ ಅಧಿಕಾರಿ ಬಿಜೆಪಿ ಮುಖಂಡ ಭಾಸ್ಕರ್ ರಾವ್‌ ಬೆಂಬಲಿಸಿರುವುದು ನಾಚಿಕೆಗೇಡಿನ ವಿಷಯ. ದಲಿತರೊಬ್ಬರು ಮೇಲಿನ ಸ್ಥಾನಕ್ಕೆ ಏರಿದ್ದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ
ಗಾಂಧಿನಗರ ನಾರಾಯಣಸ್ವಾಮಿ ಸಿಪಿಎಂ ಮುಖಂಡ
ಶೂ ಎಸೆಯುವ ಮಟ್ಟಕ್ಕೆ ಇಳಿದ ‌ಆ ವಕೀಲನಿಗೆ ಕರುಣೆ ಇಲ್ಲವೇ? ಆತನ ಓದಿಗೆ ಅರ್ಥವೇನು? ಏಕೆ ಆತ ವಕೀಲನಾಗಿರಬೇಕು? ಇದೊಂದು ನಾಚಿಕೆಗೇಡಿನ ಕೃತ್ಯ
ಟಿ.ವಿಜಯಕುಮಾರ್‌ ದಲಿತ ಮುಖಂಡ

ಬಂದ್‌ ಬೆಂಬಲಿಸಲು ಮುಖಂಡರ ಮನವಿ

ಶ್ರೀನಿವಾಸಪುರ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರತ್ತ ಶೂ ಎಸೆದಿರುವುದು ದೇಶ ಹಾಗೂ ಜನರಿಗೆ ಆಗಿರುವ ಅವಮಾನ. ಈ ಘಟನೆ ಖಂಡಿಸಿ ಅ.17 ರಂದು ಕೋಲಾರ ಜಿಲ್ಲಾ ಬಂದ್‍ಗೆ ಕರೆಕೊಟ್ಟಿದ್ದು, ಎಲ್ಲಾ ಸಮಾನಮನಸ್ಕರು ಕೈಜೋಡಿಸಬೇಕು ಎಂದು ದಲಿತ ಸಂಘಟನೆ ಹಿರಿಯ ಮುಖಂಡ ಎನ್.ಮುನಿಸ್ವಾಮಿ ಮನವಿ ಮಾಡಿದರು.

ಪಟ್ಟಣದ ನೌಕರರ ಭವನದಲ್ಲಿ ಮಂಗಳವಾರ ವಿವಿಧ ಸಂಘಟನೆಗಳಿಂದ ಜಿಲ್ಲಾ ಬಂದ್ ವಿಚಾರವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕೆಪಿಆರ್‌ಎಸ್ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಸೂರ್ಯನಾರಾಯಣ ಮಾತನಾಡಿ, ‘ಶೂ ಎಸೆದಿರುವ ಪ್ರಕರಣ ಖಂಡನೀಯ. ದೇಶದಲ್ಲಿ ಸಂವಿಧಾನ ಹಕ್ಕು ದಮನ ಮಾಡಲಾಗುತ್ತಿದೆ. ನಾವೆಲ್ಲೂರು ಸೇರಿ ಸಂವಿಧಾನ ರಕ್ಷಣೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಬಂದ್‍ಗೆ ಎಲ್ಲಾ ಪ್ರಗತಿಪರ ಸಂಘಟನೆಗಳು ಕೈಜೋಡಿಸಬೇಕು’ ಎಂದು ಕೋರಿದರು.

ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಮುಖ್ಯ ನ್ಯಾಯಮೂರ್ತಿ ಮೇಲೆ ವಕೀಲರೊಬ್ಬರು ಶೂ ಎಸೆದಿರುವುದು ಖಂಡನೀಯ. ಈ ಘಟನೆಯು ಇಡಿ ದೇಶಕ್ಕೆ ಅಪಮಾನವಾಗಿದೆ. ಕೋಲಾರ ಬಂದ್‍ಗೆ ನಮ್ಮ ಬೆಂಬಲವಿದೆ ಎಂದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ನಂಬಿಹಳ್ಳಿ ಶ್ರೀರಾಮರೆಡ್ಡಿ ಮಾತನಾಡಿದರು. ಮುಖಂಡರಾದ ಡಾ.ಚಂದ್ರಕಳಾ ಶ್ರೀನಿವಾಸನ್, ರಾಮಾಂಜಮ್ಮ, ಚಲ್ದಿಗಾನಹಳ್ಳಿ ಈರಪ್ಪ, ಪ್ರಭಾಕರಗೌಡ, ಚಲಪತಿ, ಬೈರಾರೆಡ್ಡಿ, ನಾಗ್ದೇನಹಳ್ಳಿ ಶ್ರೀನಿವಾಸ್, ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ಮುಳಬಾಗಲಪ್ಪ, ಖದ್ರಿನರಸಿಂಹ, ಕಲ್ಲೂರು ವೆಂಕಟೇಶ್, ಕೂಸ್ಸಂದ್ರ ರೆಡ್ಡಪ್ಪ, ನರಸಿಂಹಮೂರ್ತಿ, ಪಾತಕೋಟೆ ನವೀನ್‍ಕುಮಾರ್, ರಾಧಮ್ಮ, ಮಂಜುಳ, ಕೆ.ಮೋಹನಾಚಾರಿ, ಕೆ.ಎಲ್.ಕಾರ್ತಿಕ್, ಸಾದಿಕ್‍ ಅಹಮ್ಮದ್ ಇದ್ದರು.

ಬಂದ್‌ಗೆ ಕೆಜಿಎಫ್‌ನಲ್ಲಿ ಬೆಂಬಲ

ಕೆಜಿಎಫ್‌: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಘಟನೆ ಖಂಡಿಸಿ ಇದೇ 17ರಂದು ನಡೆಯಲಿರುವ ಜಿಲ್ಲಾ ಬಂದ್‌ಗೆ ಕೆಜಿಎಫ್ ತಾಲ್ಲೂಕಿನ ದಲಿತ ಸಂಘಟನೆಗಳು ಬೆಂಬಲ ನೀಡಿವೆ. ಅಂದು ಜನಸಾಮಾನ್ಯರು ಸ್ವಯಂಪ್ರೇರಿತವಾಗಿ ಬಂದ್‌ನಲ್ಲಿ ಭಾಗವಹಿಸಬೇಕು ಎಂದು ಸಂಘಟನೆಗಳ ಮುಖಂಡರು ಕೋರಿದರು. 

ರಾಬರ್ಟ್‌ಸನ್‌ಪೇಟೆಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಗಳ ಪದಾಧಿಕಾರಿಗಳು, ಸಿಜೆಐ ಅವರ ಮೇಲಿನ ಶೂ ಎಸೆತ ಪ್ರಕರಣವು ಹಲ್ಲೆ ಮಾಡುವ ಉದ್ದೇಶವಷ್ಟೇ ಅಲ್ಲದೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರ ಎಂದು ದೂರಿದರು. 

ಶೂ ಎಸೆತದ ಪ್ರಕರಣವು ದೇಶದ ಸಂವಿಧಾನಕ್ಕೆ ಮಾಡಿದ ಅಪಚಾರ. ದೇಶದ ಜನತೆಯ ಸ್ವಾಭಿಮಾನ, ಸಾರ್ವಭೌಮತೆ ಎತ್ತಿ ಹಿಡಿಯಲು ಮತ್ತು ಸಂವಿಧಾನ ರಕ್ಷಣೆಗಾಗಿ ಘಟನೆಯನ್ನು ಒಗ್ಗಟ್ಟಿನಿಂದ ಖಂಡಿಸಬೇಕು. ಆದ್ದರಿಂದ ಶುಕ್ರವಾರ ನಡೆಯುವ ಬಂದ್‌ನಲ್ಲಿ ಸ್ವಯಂಪ್ರೇರಿತರಾಗಿ ಎಲ್ಲ ಸಂಘಟನೆಗಳು, ವರ್ತಕರು ಸಹಕಾರ ನೀಡಬೇಕು ಎಂದು ಮುಖಂಡರು ಕೋರಿದ್ದಾರೆ.

ಎಪಿಎಲ್‌ ರಂಗನಾಥ್‌, ಶ್ರೀನಾಥ್‌, ಅಮುಲ್‌ ದಾಸ್‌ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.