ADVERTISEMENT

ಕೋಲಾರ: ಬ್ಯಾಸ್ಕೆಟ್‌ಬಾಲ್‌ ಅಂಕಣಕ್ಕೆ ಸಿಂಥೆಟಿಕ್‌ ಸ್ಪರ್ಶ!

ಕೆ.ಓಂಕಾರ ಮೂರ್ತಿ
Published 19 ಸೆಪ್ಟೆಂಬರ್ 2025, 4:31 IST
Last Updated 19 ಸೆಪ್ಟೆಂಬರ್ 2025, 4:31 IST
ಕೋಲಾರದ ಮಿನಿ ಕ್ರೀಡಾಂಗಣದಲ್ಲಿರುವ ಬ್ಯಾಸ್ಕೆಟ್‌ಬಾಲ್‌ ಅಂಕಣದಲ್ಲಿ ನಡೆದ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯೊಂದರ ಸಂದರ್ಭ
ಕೋಲಾರದ ಮಿನಿ ಕ್ರೀಡಾಂಗಣದಲ್ಲಿರುವ ಬ್ಯಾಸ್ಕೆಟ್‌ಬಾಲ್‌ ಅಂಕಣದಲ್ಲಿ ನಡೆದ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯೊಂದರ ಸಂದರ್ಭ   

ಕೋಲಾರ: ಪ್ರತಿಭಾವಂತ ಬ್ಯಾಸ್ಕೆಟ್‌ಬಾಲ್‌ ಆಟಗಾರರನ್ನು ಒಳಗೊಂಡಿರುವ ಕೋಲಾರ ಜಿಲ್ಲೆಗೆ ಸದ್ಯದಲ್ಲೇ ಸಿಂಥೆಟಿಕ್‌ ಸೌಲಭ್ಯದ ಬ್ಯಾಸ್ಕೆಟ್‌ಬಾಲ್‌ ಅಂಕಣ ಲಭ್ಯವಾಗಲಿದೆ.

ನಗರದ ಮಿನಿ ಕ್ರೀಡಾಂಗಣದ ಹಿಂಭಾಗದಲ್ಲಿರುವ ಬ್ಯಾಸ್ಕೆಟ್‌ಬಾಲ್ ಅಂಕಣಕ್ಕೆ ಸಿಂಥೆಟಿಕ್‌ ಸ್ಪರ್ಶ ಸಿಗಲಿದೆ. ರಾಜ್ಯದ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಸುಮಾರು ₹ 45 ಲಕ್ಷ ವೆಚ್ಚದಲ್ಲಿ ಸಿಂಥೆಟಿಕ್‌ ಕೋರ್ಟ್‌ ನಿರ್ಮಿಸಲಾಗುತ್ತಿದೆ. ಇದಕ್ಕೆ ಶುಕ್ರವಾರ ಶಾಸಕ ಕೊತ್ತೂರು ಮಂಜುನಾಥ್‌ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

‘ಸಿಂಥೆಟಿಕ್‌ ಅಂಕಣ ನಿರ್ಮಿಸಲು ಈಗಾಗಲೇ ಟೆಂಡರ್‌ ಆಗಿ ಕಾರ್ಯಾದೇಶ ನೀಡಲಾಗಿದೆ. ಶಾಸಕರು ಶಂಕುಸ್ಥಾಪನೆ ನೆರವೇರಿಸಲಿದ್ದು, ಕೆಲಸ ಶುರುವಾಗಲಿದೆ. ಸದ್ಯದಲ್ಲೇ ಅಂಕಣ ಸಿದ್ಧವಾಗಲಿದ್ದು, ಆಟಗಾರರಿಗೆ ಉತ್ತಮ ವ್ಯವಸ್ಥೆ ಸಿಗಲಿದೆ’ ಎಂದು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್‌.ಗೀತಾ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸಿಂಥೆಟಿಕ್‌ ವ್ಯವಸ್ಥೆ ಅಲ್ಲದೇ, ಮುಂದಿನ ದಿನಗಳಲ್ಲಿ ರೂಫ್‌ ವ್ಯವಸ್ಥೆಯನ್ನೂ ಕಲ್ಪಿಸುವ ಉದ್ದೇಶವನ್ನು ಕ್ರೀಡಾ ಇಲಾಖೆ ಹೊಂದಿದೆ. ಇದರಿಂದ ಬಿಸಿಲು ಅಥವಾ ಮಳೆಯಿಂದ ರಕ್ಷಿಸಿಕೊಂಡು ಆಡಲು ಸಾಧ್ಯವಾಗುತ್ತದೆ. ಕಳೆದ ವರ್ಷವಷ್ಟೇ; ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸಲಾಗಿತ್ತು. ಇದರಿಂದ ಕ್ರೀಡಾಪಟುಗಳಿಗೆ ಬಹಳ ಅನುಕೂಲವಾಗಿದೆ.

ಈಗಿನ ಬ್ಯಾಸ್ಕೆಟ್‌ಬಾಲ್‌ ಅಂಗಳವನ್ನು 90ರ ದಶಕದಲ್ಲಿ ನಿರ್ಮಿಸಲಾಗಿತ್ತು. ಆದರೆ, ಸಿಂಥೆಟಿಕ್‌ ಅಳವಡಿಸಿರಲಿಲ್ಲ. ಇದೇ ಅಂಗಳದಲ್ಲಿ ಅಖಿಲ ಭಾರತ, ದಕ್ಷಿಣ ವಲಯ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅನೇಕ ಟೂರ್ನಿಗಳು ನಡೆದಿವೆ. ಕನಕ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ನಿಂದ ಹತ್ತಾರು ಟೂರ್ನಿಗಳು ನಡೆಸಲಾಗಿದೆ. 90ರ ದಶಕದಲ್ಲಿ ನೆಹರೂ ಸೆಂಟಿನರಿ ಅಖಿಲ ಭಾರತ ಬ್ಯಾಸ್ಕೆಟ್‌ಬಾಲ್‌ ಟೂರ್ನಿ ಆಯೋಜಿಸಲಾಗಿತ್ತು. ಯಂಗ್‌ ಫ್ರೆಂಡ್ಸ್‌ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ನಿಂದ ಗೋಲ್ಡ್‌ ಕಪ್‌ ಟೂರ್ನಿ ನಡೆದಿತ್ತು. ಕೊನೆಯದಾಗಿ 2023ರಲ್ಲಿ ಕನಕ ಕ್ಲಬ್‌ನಿಂದ ರಾಜ್ಯ ಮಟ್ಟದ ಟೂರ್ನಿ ಆಯೋಜಿಸಲಾಗಿತ್ತು.

ಜಿಲ್ಲೆಯಿಂದ ಹಲವು ಆಟಗಾರರು ವಿವಿಧ ಹಂತಗಳಲ್ಲಿ ಆಡಿದ್ದಾರೆ. ರಾಮಕೃಷ್ಣ, ಬಸಪ್ಪ, ಶಿವರಾಜ್‌, ವೆಂಕಟೇಶ್‌, ಅರುಣ್‌ ಕುಮಾರ್‌, ಅಶ್ವಥ್‌, ರಘುವೀರ್‌, ಗುರುಪ್ರಸಾದ್‌ ಸೇರಿದಂತೆ ಹಲವಾರು ಮಂದಿ ಆಡಿದ್ದಾರೆ. ಅಖಿಲ ಭಾರತ ನಾಗರಿಕ ಸೇವೆಗಳ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಕಂದಾಯ ನಿರೀಕ್ಷಕ ರಾಜೇಂದ್ರ ಪ್ರಸಾದ್‌ ಕೂಡ ಆಡಿದ್ದಾರೆ. ಈಗಲೂ ಜಿಲ್ಲೆಯ ಹಲವು ಆಟಗಾರರು ರಾಜ್ಯ ಹಾಗೂ ವಿಶ್ವವಿದ್ಯಾಲಯ ಪ್ರತಿನಿಧಿಸುತ್ತಿದ್ದಾರೆ.

ಆರ್‌.ಗೀತಾ
ರಾಜ್ಯ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜಿಲ್ಲೆಯ ಬ್ಯಾಸ್ಕೆಟ್‌ಬಾಲ್‌ ಆಟಗಾರರಿಗೆ ಅಭ್ಯಾಸಕ್ಕೆ ಅನುಕೂಲವಾಗಲಿದೆ
ಆರ್‌.ಗೀತಾ ಸಹಾಯಕ ನಿರ್ದೇಶಕಿ ಕ್ರೀಡಾ ಇಲಾಖೆ
ಗುಣಮಟ್ಟದ ಆಟ ಮೂಡಿಬರಲಿದೆ
ಸಿಂಥೆಟಿಕ್‌ ಬ್ಯಾಸ್ಕೆಟ್‌ಬಾಲ್‌ ಅಂಕಣ ನಿರ್ಮಾಣ ಮಾಡುವುದರಿಂದ ಆಟಗಾರರಿಗೆ ತುಂಬಾ ಅನುಕೂಲವಾಗಲಿದೆ. ಬಿದ್ದರೂ ಗಾಯ ಆಗಲ್ಲ. ಇಲ್ಲಿ ಅಭ್ಯಾಸ ಮಾಡುವುದರಿಂದ ದೊಡ್ಡ ಮಟ್ಟದ ಟೂರ್ನಿಗಳಿಗೆ ಅನುಕೂಲವಾಗಲಿದೆ. ಗುಣಮಟ್ಟದ ಆಟ ಮೂಡಿಬರುತ್ತದೆ. ತರಬೇತಿ ಶಿಬಿರ ಕೂಡ ಆಯೋಜಿಸಬಹುದು ಎಂದು ಕನಕ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ನ ಅಂಚೆ ಅಶ್ವಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.