ಮಾಲೂರು ಗಾಂಧಿ ಸರ್ಕಲ್ ಬಳಿ ಪುರಸಭೆ ವತಿಯಿಂದ ನಿರ್ಮಾಣವಾಗಿರುವ ಸಾರ್ವಜನಿಕ ಶೌಚಾಲಯ ಹಲವು ವರ್ಷಗಳಿಂದ ನಿರ್ವಹಣೆ ಇಲ್ಲದೇ ಸ್ಥಗಿತಗೊಂಡಿರುವುದು
ಮಾಲೂರು: ಪಟ್ಟಣದ ವಿವಿಧ ಭಾಗಗಳಲ್ಲಿ ಪುರಸಭೆಯಿಂದ ವಿವಿಧ ಅನುದಾನದಲ್ಲಿ ನಿರ್ಮಾಣಗೊಂಡಿರುವ ಸಾರ್ವಜನಿಕ ಶೌಚಾಲಯ ನಿರ್ವಹಣೆ ಇಲ್ಲದೇ ಮುಚ್ಚಿರುವುದರಿಂದ ಸಾರ್ವಜನಿಕರು ತೊಂದರೆ ಪಡುವಂತಾಗಿದೆ.
ಪಟ್ಟಣದಲ್ಲಿ ಜನದಟ್ಟಣೆ ಇರುವ ಮುಖ್ಯ ವೃತ್ತ ಹಾಗೂ ಮುಖ್ಯ ಕಚೇರಿ ಬಳಿ ಪುರಸಭೆ ವತಿಯಿಂದ ವಿವಿಧ ಅನುದಾನದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಎಲ್ಲ ಶೌಚಾಲಗಳು ನಿರ್ವಣೆ ಕೊರತೆಯಿಂದ ಮುಚ್ಚಿರುವುದರಿಂದ ಸಾರ್ವಜನಿಕರು ಮತ್ತು ಮಹಿಳೆಯರು ತೊಂದರೆ ಪಡುವಂತಾಗಿದೆ.
ನೈರ್ಮಲ್ಯ ಹಾಗೂ ಶೌಚಾಲಯ ಸಣ್ಣ ವಿಷಯಗಳಾಗಿ ಉಳಿದಿಲ್ಲ. ಇದರಿಂದಾಗಿಯೇ ಜಾಗತಿಕ ಮಟ್ಟದಲ್ಲಿ ಇವುಗಳಿಗೆ ಹೆಚ್ಚಿನ ಮನ್ನಣೆ ಹಾಗೂ ಮಹತ್ವ ನೀಡಲಾಗುತ್ತಿದೆ. ನೈರ್ಮಲ್ಯಕ್ಕೂ, ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ. ಉತ್ತಮ ನೈರ್ಮಲ್ಯ ವ್ಯವಸ್ಥೆ ಇದ್ದಲ್ಲಿ ಉತ್ತಮ ಆರೋಗ್ಯವೂ ಇರುತ್ತದೆ. ಆರೋಗ್ಯದ ಮೇಲೆ ಮಾಡುವ ವೆಚ್ಚ ತಂತಾನೆ ಕಡಿಮೆಯಾಗುತ್ತದೆ. ಆದ್ದರಿಂದಲೇ ಶೌಚಾಲಯ ಹಾಗೂ ಸ್ವಚ್ಛ ಪರಿಸರ ಜನರ ಜೀವನ ಗುಣಮಟ್ಟದ ಮಾಪಕವಾಗಿದೆ.
ಬೆಂಗಳೂರಿಗೆ ಬಹಳ ಹತ್ತಿರ ಇರುವ ಮಾಲೂರಿನಲ್ಲಿ ಕೆಲವು ವರ್ಷಗಳಿಂದ ದೊಡ್ಡ ಮಟ್ಟದ ನೂರಾರು ಕಾರ್ಖಾನೆಗಳು ಆರಂಭವಾಗಿವೆ. ಇತರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಬಂದು ನೆಲೆಸಿದ್ದಾರೆ. ಪಟ್ಟಣದಲ್ಲಿ 78 ಸಾವಿರ ಜನಸಂಖ್ಯೆ ಇದೆ. ಚಾಲಕರು, ಪಾದಚಾರಿಗಳು ರಸ್ತೆಬದಿ ಹಾಗೂ ಹಳೆ ಮನೆಗಳ ಬಳಿ ತಮ್ಮ ದೈಹಿಕ ಬಾಧೆ ತೀರಿಸಿಕೊಳ್ಳುತ್ತಿದ್ದಾರೆ. ಪಟ್ಟಣದ 2ನೇ ವಾರ್ಡ್‌ನ ಮಾಲೂರು-ಬೆಂಗಳೂರು, ಮಾಲೂರು -ಕೋಲಾರ ಮುಖ್ಯ ರಸ್ತೆ, ಕೆಂಪೇಗೌಡ ಸರ್ಕಲ್‌ನಲ್ಲಿ ಪುರಸಭೆ ವತಿಯಿಂದ ನಿರ್ಮಾಣ ಮಾಡಿರುವ ಸಾರ್ವಜನಿಕ ಶೌಚಾಲಯ ನಿರ್ವಹಣೆ ಇಲ್ಲದೆ ಮುಚ್ಚಿ ಸುಮಾರು ತಿಂಗಳು ಕಳೆದಿದೆ.
ಪ್ರತಿದಿನ ಸಾವಿರಾರು ಮಂದಿ ಪಟ್ಟಣದ ತಾಲೂಕು ಕಚೇರಿಗೆ ವಿವಿಧ ಕೆಲಸಗಳಿಗೆ ಭೇಟಿ ನೀಡುತ್ತಾರೆ. ಅದರೆ, ಕಚೇರಿ ಬಳಿ ಇರುವ ಸಾರ್ವಜನಿಕ ಶೌಚಾಲಯ ನಿರ್ವಹಣೆ ಇಲ್ಲದೇ ಬೀಗ ಜಡಿದಿರುವುದರಿಂದ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ.
ರಾಜೀವ್‌ನಗರ, ಇಂದಿರಾನಗರ ಮತ್ತು ಗಾಂಧಿ ಸರ್ಕ್‌ಲ್‌ನಲ್ಲಿ ನಿರ್ಮಾಣ ಮಾಡಿದ್ದ ಸಾರ್ವಜನಿಕ ಶೌಚಾಲಯಗಳನ್ನು ನಿರ್ವಹಣೆ ಇಲ್ಲದೆ ಮುಚ್ಚಲಾಗಿದೆ.
ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎರಡು ಶೌಚಾಲಯಗಳು: ಬಸ್ ನಿಲ್ದಾಣದ ಬಳಿ ಇರುವ ಸಾರ್ವಜನಿಕ ಶೌಚಾಲಯವನ್ನು ಪುರಸಭೆ ನಿರ್ವಹಣೆ ಮಾಡುತ್ತಿವೆ. ಆದರೆ, ಸ್ವಚ್ಛತೆ ಇಲ್ಲದೆ ಮೂಗು ಮುಚ್ಚಿ ಹೋಗಬೇಕಾದ ಪರಿಸ್ಥಿತಿ ಇದೆ. ಇಲ್ಲಿನ ಶೌಚಾಲಯ ಬಳಸಲು ಯೋಗ್ಯವಾಗಿಲ್ಲ.
ಪಟ್ಟಣದಲ್ಲಿ ಜನಸಾಂದ್ರತೆ ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ನಾಗರಿಕರ ಒತ್ತಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.