ಕೋಲಾರ: ನಗರದ ಹೊರವಲಯದ ಕೊಂಡರಾಜನಹಳ್ಳಿ ಗುರುವಾರ ವಿಜಯದಶಮಿ ಹಬ್ಬವನ್ನು ಗ್ರಾಮೀಣ ದಸರಾ ಮಾದರಿಯಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಕತ್ತಿಯಿಂದ ಕತ್ತರಿಸಿ ಆಚರಿಸಲಾಯಿತು.
ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ಈ ಕಾರ್ಯಕ್ರಮ ನಡೆಯಿತು. ವಿವಿಧ ಹಳ್ಳಿಗಳಿಂದ ಬಂದಿದ್ದ ಗ್ರಾಮಸ್ಥರು ಜೈಕಾರ ಹಾಕಿ ಶ್ರದ್ಧಾಭಕ್ತಿಯಿಂದ ಕಣ್ತುಂಬಿಕೊಂಡರು.
ಬನ್ನಿಮರಕ್ಕೆ ಬಾಳೆಗೊನೆ ಕಟ್ಟಿ ಬನ್ನಿಮರ ಕಡಿಯುವ ವಿಶೇಷ ಪೂಜೆ ಇಲ್ಲಿ ನಡೆಯುತ್ತದೆ. ಪ್ರತಿವರ್ಷ ತಹಶೀಲ್ದಾರ್ ಅಥವಾ ಉಪವಿಭಾಗಾಧಿಕಾರಿ ಬನ್ನಿಮರಕ್ಕೆ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ, ತಹಶೀಲ್ದಾರ್ (ಡಾ.ನಯನಾ) ಮತ್ತು ಉಪವಿಭಾಗಾಧಿಕಾರಿ (ಡಾ.ಮೈತ್ರಿ) ಇಬ್ಬರೂ ಮಹಿಳೆಯರೇ ಆಗಿರುವುದರಿಂದ ಅವಕಾಶ ಸಿಗಲಿಲ್ಲ. ಹೀಗಾಗಿ, ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಕತ್ತಿಯಿಂದ ಕತ್ತರಿಸುವ ವಿಶೇಷ ಅವಕಾಶ ಜಿಲ್ಲಾಧಿಕಾರಿ ಕಚೇರಿಯ ತಹಶೀಲ್ದಾರ್ ಹರಿಪ್ರಸಾದ್ ಅವರಿಗೆ ದೊರೆಯಿತು. ಕಳೆದ ವರ್ಷವೂ ಇದೇ ಪರಿಸ್ಥಿತಿ ಇತ್ತು.
ನಗರದ ಬಹುತೇಕ ಅಂದರೆ 20ಕ್ಕೂ ಅಧಿಕ ಶಕ್ತಿ ದೇವತೆಗಳ ಉತ್ಸವ ಮೂರ್ತಿಗಳನ್ನು ಈ ದೇವಾಲಯ ಬಳಿ ತಂದು ಪಲ್ಲಕ್ಕಿ ಉತ್ಸವ ನಡೆಸಲಾಯಿತು.
ಹರಿಪ್ರಸಾದ್ ಅವರನ್ನು ಸಂಪ್ರದಾಯದಂತೆ ಪೂರ್ಣ ಕುಂಭ ಮೇಳದೊಂದಿಗೆ ಸ್ವಾಗತಿಸಿಸಲಾಯಿತು. ಮೈಸೂರು ಪೇಟಾ ತೊಡಿಸಿ ಬನ್ನಿ ಮರ ನೆಟ್ಟ ಸ್ಥಳಕ್ಕೆ ಮೆರವಣಿಗೆಯಲ್ಲಿ ಕರೆತರಲಾಯಿತು.
ಈ ಸಂದರ್ಭದಲ್ಲಿ ಅರ್ಚಕ ಸುರೇಶ್ ನೇತೃತ್ವದಲ್ಲಿ ಹರಿಪ್ರಸಾದ್ ಬಾಳೆ ಗಿಡ ಮತ್ತು ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು. ನಂತರ ಕೈಯಲ್ಲಿ ಕತ್ತಿ ಹಿಡಿದು ಬಾಳೆ ಗಿಡವನ್ನು ಕತ್ತರಿಸಿದರು. ಆಗ ನೂರಾರು ಜನರು ಮುಗಿಬಿದ್ದು ಬನ್ನಿ ಎಲೆಗಳನ್ನು, ಬಾಳೆಗೊನೆಯ ಕಾಯಿಗಳನ್ನು ಕಿತ್ತುಕೊಳ್ಳಲು ಪೈಪೋಟಿ ನಡೆಸಿದರು.
ಇಲ್ಲಿ ಪೂಜಿಸುವ ಎಲೆಗಳು ಮತ್ತು ಬಾಳೆಕಾಯಿಗಳನ್ನು ಮನೆಯಲ್ಲಿಟ್ಟು ಪೂಜಿಸಿದರೆ ಇಡೀ ವರ್ಷವೇ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಈ ಭಾಗದ ಜನರದ್ದು.
ಬನ್ನಿಮರ ಕಡಿಯುವ ಕಾರ್ಯ ಮುಗಿಯುತ್ತಿದ್ದಂತೆ ವಿವಿಧ ದೇವಾನುದೇವತೆಗಳ 20ಕ್ಕೂ ಹೆಚ್ಚು ಪಲ್ಲಕ್ಕಿಗಳಿಗೆ ಪೂಜೆ ಸಲ್ಲಿಸಿ ಪಾನಕ ಹೆಸರುಬೇಳೆ ಹಂಚಲಾಯಿತು.
ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಬಾರಿ ಮೆರವಣಿಗೆಯಲ್ಲಿ ಗಾರುಡಿ ಗೊಂಬೆ, ತಮಟೆ ಮತ್ತಿತರ ಕಲಾತಂಡಗಳು ಗಮನ ಸೆಳೆದವು.
ಕೋಚಿಮುಲ್ ನಿರ್ದೇಶಕಿ ಮಹಾಲಕ್ಷ್ಮಿ ಪ್ರಸಾದ್‍ಬಾಬು, ಬಜರಂಗದಳ ಮುಖಂಡ ಬಾಲಾಜಿ, ಅಪ್ಪಿಆನಂದ್, ಮುಖಂಡರಾದ ಶ್ರೀನಿವಾಸ ಯಾದವ್, ಅಮ್ಮೇರಹಳ್ಳಿ ಮಂಜುನಾಥ್, ಕಿಲಾರಿಪೇಟೆ ಮುನಿವೆಂಕಟಯಾದವ್, ಕ್ಯಾಪ್ಟನ್ ಮಂಜು, ಪ್ರಶಾಂತ್, ಶ್ರೀರಾಮಸೇನೆ ರಮೇಶ್‍ರಾಜ್, ಕೆ.ಗಣೇಶ್, ಚಂದ್ರ, ತ್ಯಾಗರಾಜ್, ಹಾರೋಹಳ್ಳಿ ಶಂಕರ್, ಅರ್ಚಕರಾದ ರಘುದೀಕ್ಷಿತ್ ಹಾಗೂ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.