ADVERTISEMENT

ಕೋಲಾರ | ದೇವರಿಗೂ ಮುನ್ನ ಪೌರಕಾರ್ಮಿಕರಿಗೆ ನಮಿಸಬೇಕು: ಶಾಸಕ ಕೊತ್ತೂರು ಮಂಜುನಾಥ್‌

ಪೌರಕಾರ್ಮಿಕರ ದಿನಾಚರಣೆ; ಎಲ್ಲೆಂದರೆ ಕಸ ಎಸೆಯುವವರ ಮೇಲೆ ನಿಗಾಕ್ಕೆ ತಂಡ ರಚನೆ: ಶಾಸಕ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 7:16 IST
Last Updated 24 ಸೆಪ್ಟೆಂಬರ್ 2025, 7:16 IST
ಕೋಲಾರದಲ್ಲಿ ಮಂಗಳವಾರ ಪೌರಕಾರ್ಮಿಕರ ದಿನಾಚರಣೆಯನ್ನು ಶಾಸಕ ಕೊತ್ತೂರು ಮಂಜುನಾಥ್‌, ಸಂಸದ ಎಂ.ಮಲ್ಲೇಶ್‌ ಬಾಬು ಉದ್ಘಾಟಿಸಿದರು. ಲಕ್ಷ್ಮಿದೇವಿ, ಸಂಗೀತಾ, ಹನೀಫ್‌, ನವೀನ್‌ಚಂದ್ರ, ಶಿವಕುಮಾರ್‌, ನಗರಸಭೆ ಸದಸ್ಯರು ಪಾಲ್ಗೊಂಡಿದ್ದರು
ಕೋಲಾರದಲ್ಲಿ ಮಂಗಳವಾರ ಪೌರಕಾರ್ಮಿಕರ ದಿನಾಚರಣೆಯನ್ನು ಶಾಸಕ ಕೊತ್ತೂರು ಮಂಜುನಾಥ್‌, ಸಂಸದ ಎಂ.ಮಲ್ಲೇಶ್‌ ಬಾಬು ಉದ್ಘಾಟಿಸಿದರು. ಲಕ್ಷ್ಮಿದೇವಿ, ಸಂಗೀತಾ, ಹನೀಫ್‌, ನವೀನ್‌ಚಂದ್ರ, ಶಿವಕುಮಾರ್‌, ನಗರಸಭೆ ಸದಸ್ಯರು ಪಾಲ್ಗೊಂಡಿದ್ದರು   

ಕೋಲಾರ: ದೇವರಿಗೆ ನಮಸ್ಕಾರ ಹಾಕುವ ಮೊದಲು ಪೌರಕಾರ್ಮಿಕರಿಗೆ ನಮಿಸಬೇಕು. ಏಕೆಂದರೆ ಅವರು ನಿತ್ಯ ಕಸ ವಿಲೇವಾರಿ ಮಾಡಿ ನಮ್ಮ ಸುತ್ತಲಿನ ಜಾಗ ಸ್ವಚ್ಛಗೊಳಿಸುತ್ತಾರೆ, ನಮ್ಮನ್ನು ಆರೋಗ್ಯವಾಗಿಡುತ್ತಾರೆ. ಅವರಿಲ್ಲದೇ ಹೋದರೆ ರೋಗರುಜಿನ ಹರಡಿ ಆಸ್ಪತ್ರೆಗಳು ಭರ್ತಿಯಾಗುತ್ತವೆ ಎಂದು ಶಾಸಕ ಕೊತ್ತೂರು ಮಂಜುನಾಥ್‌ ಎಚ್ಚರಿಸಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಗರಸಭೆಯಿಂದ ಮಂಗಳವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪೌರಕಾರ್ಮಿಕರು ನಿತ್ಯ ನಮ್ಮ ಮನೆ ಕಸ‌ ಸಂಗ್ರಹಿಸುತ್ತಾರೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶ ಶುದ್ಧ ಮಾಡುತ್ತಾರೆ. ಅವರು ಮಾಡುವಷ್ಟು ಶುದ್ಧವಾದ ಕೆಲಸ ಬೇರೆ ಯಾರೂ ಮಾಡಲ್ಲ ಎಂದರು.

ADVERTISEMENT

ಯಾರೂ ಕಸವನ್ನು ರಸ್ತೆಯಲ್ಲಿ ಎಸೆಯಬಾರದು. ಮನೆಯ ಬಳಿ ಬರುವ ಗಾಡಿಗೆ‌ ನೀಡಬೇಕು. ಎಲ್ಲೆಂದರಲ್ಲಿ ‌ಕಸ‌ ಹಾಕುವವರ ಮೇಲೆ ಕಣ್ಣಿಡಲು ಒಂದು ವಿಶೇಷ ತಂಡ ರಚಿಸಲಾಗುವುದು ಎಂದು ತಿಳಿಸಿದರು.

ಪೌರಕಾರ್ಮಿಕರು ಪ್ರತಿ ಎರಡು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ‌ಮಾಡಿಸಿಕೊಳ್ಳಬೇಕು. ನಗರಸಭೆಯಿಂದ ಆರೋಗ್ಯ ‌ಶಿಬಿರ ಹಮ್ಮಿಕೊಳ್ಳಬೇಕು‌. ಸರ್ಕಾರ ಹಾಗೂ ಜನಪ್ರತಿನಿಧಿಗಳು ಸದಾ ಪೌರಕಾರ್ಮಿಕರ ಪರ ಇರುತ್ತೇವೆ ಎಂದರು.

ಕಸ ಹಾಗೂ ನೀರಿನ ವಿಚಾರವಾಗಿ ನಗರಸಭೆ ಸದಸ್ಯರಿಗೆ ಜನರಿಂದ ಬೆಳ್ಳಂಬೆಳಿಗ್ಗೆ ಫೋನ್ ಕರೆಗಳು ಬರುತ್ತವೆ. ಅವುಗಳನ್ನು ಟಾರ್ಚರ್ ಎಂದುಕೊಳ್ಳಬೇಡಿ, ಜವಾಬ್ದಾರಿ ಅಂದುಕೊಂಡು ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ‘ಪೌರಕಾರ್ಮಿಕರು ಇಲ್ಲದೆ, ಯಾವುದೇ ನಗರ ಸ್ವಚ್ಛವಾಗಿರಲು ಸಾಧ್ಯವಿಲ್ಲ. ಹೀಗಾಗಿ. ಪೌರಕಾರ್ಮಿಕರ ಆರೋಗ್ಯ ಕಾಪಾಡುವ ಜವಾಬ್ದಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳದ್ದಾಗಿದೆ’ ಎಂದರು.

ಇಂದು ಪೌರಕಾರ್ಮಿಕರ ಹಬ್ಬ, ಅವರನ್ನು ಗೌರವವಾಗಿ ಕಾಣಬೇಕು. ವರ್ಷವಿಡೀ ಕೆಲಸ‌ ಮಾಡುವ ಅವರಿಗೆ‌ ಸಿಗುವುದೇ ಇಂಥ ಒಂದು ದಿನ. ನಾವೆಲ್ಲಾ ಹಬ್ಬ‌ ಮಾಡುವಾಗ ಅವರು ಕಸ ಎತ್ತುವುದರಲ್ಲಿ ನಿರತರಾಗಿರುತ್ತಾರೆ ಎಂದು ನುಡಿದರು.

ಕೋಲಾರ ನಗರವನ್ನು ಸ್ವಚ್ಛ ನಗರ ಮಾಡಬೇಕು. ಈ ಸಂಬಂಧ ನಗರಸಭೆಯಿಂದ ಪ್ರಸ್ತಾಪ‌ವಿಟ್ಟರೆ ಕೇಂದ್ರ ‌ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯಿಂದ ನಾನು ಅಗತ್ಯ ಸೌಲಭ್ಯ ತಂದು ಕೊಡುತ್ತೇನೆ. ಪೌರಕಾರ್ಮಿಕರ ಏಳಿಗೆಗೆ ಸಾಕಷ್ಟು ಸವಲತ್ತುಗಳು ಇವೆ. ಅವುಗಳನ್ನು ಬಳಸಿಕೊಳ್ಳುವ ಜವಾಬ್ದಾರಿ ತಮ್ಮದು ಎಂದರು.

ಪೌರಾಯುಕ್ತ ನವೀನ್ ಚಂದ್ರ ಮಾತನಾಡಿ, ‘ಕೋಲಾರ ನಗರದಲ್ಲಿ 2 ಲಕ್ಷ ಜನರಿಗೆ ಕೇವಲ 250 ಕಾರ್ಮಿಕರು ಇದ್ದಾರೆ. ಕಡಿಮೆ ಸಂಖ್ಯೆಯಿದ್ದರೂ ಕಸದ ಕೋಲಾರ ಬದಲಿಗೆ ಸ್ವಚ್ಛ ಕೋಲಾರವನ್ನಾಗಿಸಲು ಪಣ ತೊಟ್ಟಿದ್ದಾರೆ. ಅವರಿಗೆ ಪ್ರೋತ್ಸಾಹ ಅಗತ್ಯ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಮಾತನಾಡಿ, ‘ಪೌರಕಾರ್ಮಿಕರಲ್ಲ; ಬದಲಾಗಿ ಪೌರ ಬಂಧುಗಳು. ಕಾಯಿಲೆ ಬರುವುದನ್ನು ತಡೆಯುವವರು, ಅವರನ್ನು ಕೀಳರಿಮೆಯಿಂದ ಕಾಣಬಾರದು. ಪೌರಕಾರ್ಮಿಕರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದು, ಇನ್ನಷ್ಟು ಸಹಾಯ ಮಾಡಲಾಗುವುದು ಎಂದರು.

ಇದೇ ವೇಳೆ ಪೌರಕಾರ್ಮಿಕರು, ನಿವೃತ್ತ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ನಗರಸಭೆ ಉಪಾಧ್ಯಕ್ಷೆ ಸಂಗೀತಾ, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಖಾನ್, ಕುಡಾ ಅಧ್ಯಕ್ಷ ಮೊಹಮ್ಮದ್ ಹನೀಫ್, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್, ನಗರಸಭೆ ಸದಸ್ಯರಾದ ಪ್ರಸಾದ್ ಬಾಬು, ಪ್ರವೀಣಗೌಡ, ರಾಕೇಶ್, ಮಂಜುನಾಥ್, ಇದಾಯತ್ ಉಲ್ಲಾ, ಗುಣಶೇಖರ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ನಾರಾಯಣಸ್ವಾಮಿ ಇದ್ದರು.

2 ತಿಂಗಳಿಗೊಮ್ಮೆ ಪೌರಕಾರ್ಮಿಕರ ಆರೋಗ್ಯ ತಪಾಸಣೆ ಕೋಲಾರ ನಗರದ 2 ಲಕ್ಷ ಜನರಿಗೆ ಕೇವಲ 250 ಕಾರ್ಮಿಕರು: ಪೌರಾಯುಕ್ತ ಪೌರಕಾರ್ಮಿಕರಲ್ಲ; ಪೌರ ಬಂಧುಗಳು ಎನ್ನಿ: ನಗರಸಭೆ ಅಧ್ಯಕ್ಷೆ

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕರನ್ನು ಕಾಯಂ ಮಾಡಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ. ನಾನೂ ಪೌರಕಾರ್ಮಿಕರ ಯಾವುದೇ ಕೆಲಸ‌ ಮಾಡಿಕೊಡಲು ಬದ್ಧ
ಕೊತ್ತೂರು ಮಂಜುನಾಥ್‌ ಶಾಸಕ
ಪೌರಕಾರ್ಮಿಕರ ದಿನಾಚರಣೆಗೆ ಎಲ್ಲಾ ಪೌರಕಾರ್ಮಿಕರನ್ನು ಕರೆಯಬೇಕಿತ್ತು. ಇವತ್ತಾದರೂ ಅವರಿಗೆ ಯಾವುದೇ ಕೆಲಸ‌ ಕೊಡಬಾರದಿತ್ತು. ಆದರೆ ಅವರೇ ಇಲ್ಲಿ ಕೆಲಸ ಮಾಡುತ್ತಿರುವಂತಿದೆ
ಎಂ.ಮಲ್ಲೇಶ್‌ ಬಾಬು ಸಂಸದ

ನಗರದಲ್ಲಿ 2 ಹೊಸ ವೃತ್ತ ನಿರ್ಮಾಣ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ನೂರು ಜನ ನೂರು ರೀತಿ ಮಾತನಾಡುತ್ತಾರೆ. ಟೀಕೆಗಳಿಗೆ ನಾನು ಕೇರ್ ಮಾಡುವುದಿಲ್ಲ. ಕೋಲಾರ ನಗರ ಅಭಿವೃದ್ಧಿ ಆಗುತ್ತಿದೆ. ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಕುಡಾ) ಶ್ರೀನಿವಾಸಪುರ ರಸ್ತೆಯ ಬಂಬೂಬಜಾರ್‌ ಬಳಿ ಹಾಗೂ ಮಾಲೂರು ರಸ್ತೆಯ ಎಪಿಎಂಸಿ ಬಳಿ ಹೊಸ ವೃತ್ತ ನಿರ್ಮಿಸಲಾಗುವುದು. ₹ 4 ಕೋಟಿ ವೆಚ್ಚದಲ್ಲಿ ಕೋಡಿ ಕಣ್ಣೂರು ಕೆರೆ ಅಭಿವೃದ್ಧಿ ಮಾಡಲಾಗುವುದು. ಕೋಲಾರಮ್ಮ ದೇಗುಲ ‌ಬಳಿ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಪಾದಚಾರಿ ಮಾರ್ಗ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಕೊತ್ತೂರು ಮಂಜುನಾಥ್‌ ಹೇಳಿದರು.

ಪೌರಕಾರ್ಮಿಕರ ಚಿಕಿತ್ಸೆಗೆ ವ್ಯವಸ್ಥೆ ನಿತ್ಯ ಸ್ವಚ್ಛತೆ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರಿಗೆ ಅನಾರೋಗ್ಯ ಕಾಡುತ್ತದೆ. ಆರೋಗ್ಯ ತಪಾಸಣೆ ಜೊತೆಗೆ ಚಿಕಿತ್ಸೆ ಕೊಡಿಸುವುದು ನಮ್ಮ ಜವಾಬ್ದಾರಿ. ದೇವರಾಜು ಅರಸು ವೈದ್ಯಕೀಯ ಕಾಲೇಜಿನಲ್ಲಿ ವಿಶೇಷ ಚಿಕಿತ್ಸೆ ಬೇಕಿದ್ದರೆ ನಾನು ಮಾತನಾಡಿ ವ್ಯವಸ್ಥೆ ಮಾಡಿಸಿಕೊಡುತ್ತೇನೆ ಎಂದು ಸಂಸದ ಮಲ್ಲೇಶ್‌ ಬಾಬು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.