ADVERTISEMENT

ಕೋಲಾರ | ಮತಗಳ್ಳತನದಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರ

ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಬಾನು ಚಿಬ್ ಆರೋಪ-ಕೇಂದ್ರದ ವಿರುದ್ಧ ಪಂಜಿನ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 7:12 IST
Last Updated 9 ಸೆಪ್ಟೆಂಬರ್ 2025, 7:12 IST
ಕೋಲಾರದಲ್ಲಿ ಮತಗಳ್ಳತನ ವಿರುದ್ಧ ನಡೆದ ಅಭಿಯಾನದಲ್ಲಿ ಕಾಂಗ್ರೆಸ್‌ ಮುಖಂಡರು ಕೇಂದ್ರದ ವಿರುದ್ಧ ಘೋಷಣೆ ಕೂಗಿದರು. ಉದಯ್ ಬಾನು ಚಿಬ್, ನಸೀರ್‌ ಅಹ್ಮದ್‌, ಮಂಜುನಾಥ್ ಗೌಡ, ಸೈಯದ್ ಅಫ್ರಿದ್ ಪಾಲ್ಗೊಂಡಿದ್ದರು
ಕೋಲಾರದಲ್ಲಿ ಮತಗಳ್ಳತನ ವಿರುದ್ಧ ನಡೆದ ಅಭಿಯಾನದಲ್ಲಿ ಕಾಂಗ್ರೆಸ್‌ ಮುಖಂಡರು ಕೇಂದ್ರದ ವಿರುದ್ಧ ಘೋಷಣೆ ಕೂಗಿದರು. ಉದಯ್ ಬಾನು ಚಿಬ್, ನಸೀರ್‌ ಅಹ್ಮದ್‌, ಮಂಜುನಾಥ್ ಗೌಡ, ಸೈಯದ್ ಅಫ್ರಿದ್ ಪಾಲ್ಗೊಂಡಿದ್ದರು   

ಕೋಲಾರ: ‘ಮತಗಳ್ಳತನದ ಮೂಲಕವೇ ಕೇಂದ್ರದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅಧಿಕಾರದಲ್ಲಿ ಮುಂದುವರಿಯಲು ಅವರಿಗೆ ಯಾವುದೇ ನೈತಿಕತೆ ಇಲ್ಲ’ ಎಂದು ಯೂತ್‌ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಬಾನು ಚಿಬ್ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಜಿಲ್ಲಾ ಯೂತ್‌ ಕಾಂಗ್ರೆಸ್ ನೇತೃತ್ವದಲ್ಲಿ ಭಾನುವಾರ ರಾತ್ರಿ ಮತಗಳ್ಳತನ ವಿರುದ್ಧ ಹಮ್ಮಿಕೊಂಡಿದ್ದ ಜನಜಾಗೃತಿ ಸಭೆ ಹಾಗೂ ಪಂಜಿನ ಮೆರವಣಿಗೆಯ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರವು ಮತಗಳ್ಳತನದ ಮೂಲಕ ಅಧಿಕಾರ ಹಿಡಿದಿರುವುದು ಇದೀಗ ಸಾಬೀತಾಗುತ್ತಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತಗಳ್ಳತನ ಬಹಿರಂಗಪಡಿಸಿದ ಬಳಿಕ ಒಂದೊಂದೇ ಪ್ರಕರಣ ಬಯಲಿಗೆ ಬರುತ್ತಿದೆ. ಎನ್‌ಡಿಎ ಸರ್ಕಾರದ ಮತಗಳ್ಳತನದ ವಿರುದ್ಧ ಪ್ರತಿ ತಾಲ್ಲೂಕು, ವಾರ್ಡ್‌ಗಳಲ್ಲಿ ಜನಜಾಗೃತಿ ಮೂಡಿಸಬೇಕು’ ಎಂದರು.

ADVERTISEMENT

ಚುನಾವಣಾ ಆಯೋಗದ ನಿಯಮಗಳನ್ನು ಬದಲಿಸುವ ಮೂಲಕ ಮತಗಳ್ಳತನವನ್ನು ಬಿಜೆಪಿ ಆರಂಭಿಸಿದೆ. ರಾಜ್ಯದಲ್ಲೂ ಮತ ಕಳ್ಳತನ ಮಾಡಲಾಗಿದೆ. ಇನ್ನು ಕೆಲವೆಡೆ ಬದುಕಿದ್ದವರನ್ನು ಮೃತಪಟ್ಟಿದ್ದಾರೆ ಎಂದು ಹೇಳಿ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಇದನ್ನು ನೋಡಿದರೆ ಬಿಜೆಪಿ ನಿಜವಾಗಿಯೂ ಮತಗಳ್ಳತನದಲ್ಲಿ ಭಾಗಿಯಾಗಿರುವುದು ಗೊತ್ತಾಗುತ್ತದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮಾತನಾಡಿ, ‘ದೇಶದ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಯಲಿಗೆ ತಂದಿರುವ ವೋಟ್ ಚೋರಿ ಬಗ್ಗೆ ಅರಿವು ಮೂಡಿಸಬೇಕು. ಬಿಹಾರದಲ್ಲಿ ಮತ ಕಳ್ಳತನ ವಿರುದ್ಧದ ಯಾತ್ರೆಗೆ ಜನರು ಬೆಂಬಲ ನೀಡುತ್ತಿದ್ದಾರೆ. ದೇಶದಾದ್ಯಂತ ಇದರ ಬಗ್ಗೆ ಚರ್ಚೆ ಆಗುತ್ತಿದೆ. ಅದರಂತೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ವೋಟ್ ಚೋರಿ ಅರಿವು ಮೂಡಿಸಬೇಕು’ ಎಂದರು.

ಯೂತ್‌ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಮಂಜುನಾಥ್ ಗೌಡ ಮಾತನಾಡಿ, ‘ಕೇಂದ್ರದ ಮೋದಿ ನೇತೃತ್ವದಲ್ಲಿ ಸರ್ಕಾರ ಮೋಸದಿಂದ ಅಧಿಕಾರಕ್ಕೆ ಬಂದಿದೆ. ದೇಶದಲ್ಲೇ ಮೊದಲ ಬಾರಿ ಯುವ ಕಾಂಗ್ರೆಸ್ ಸಮಿತಿಯಿಂದ ವೋಟ್ ಚೋರಿ ಕಾರ್ಯಕ್ರಮ ಕೋಲಾರದಿಂದಲೇ ಪ್ರಾರಂಭ ಮಾಡಿದ್ದೇವೆ. ಮುಂದೆ ರಾಜ್ಯದಾದ್ಯಂತ ನಡೆಸಲಾಗುತ್ತದೆ’ ಎಂದು ಹೇಳಿದರು.

ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸೈಯದ್ ಅಫ್ರಿದ್ ಮಾತನಾಡಿ, ‘ಪ್ರಜಾಪ್ರಭುತ್ವಕ್ಕೆ ಆತಂಕ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಡೆಯುತ್ತಿದೆ. ಸಂವಿಧಾನವನ್ನು ಉಳಿಸಿ ಎಂದು ಹೋರಾಟ ನಡೆಸಬೇಕಾದ ಅನಿವಾರ್ಯ ಎದುರಾಗಿರುವುದು ದುರಂತದ ಸಂಗತಿ. ಹಿಂಬಾಗಿಲಿನಿಂದ ಅಧಿಕಾರ ಪಡೆಯುವುದು ಬಿಜೆಪಿ ಉದ್ದೇಶವಾಗಿದೆ’ ಎಂದು ದೂರಿದರು.

ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ನಿಗಮ್ ಭಂಡಾರಿ, ಉಪಾಧ್ಯಕ್ಷ ಅಬ್ದುಲ್ ದೇಸಾಯಿ, ಭವ್ಯಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಭರತ್ ರಾಯ್, ಯುವ ಮುಖಂಡ ನವೀನ್, ಅಬ್ದುಲ್ ಖಯ್ಯುಂ, ಅನ್ವರ್, ನೂರ್, ಜಿಲ್ಲಾ ಉಪಾಧ್ಯಕ್ಷ ವಾಸುರೆಡ್ಡಿ, ಪ್ರಧಾನ ಕಾರ್ಯದರ್ಶಿ ರಿಯಾಜ್ ಗೋರು, ಆಸೀಫ್, ಸುಹೈಲ್, ಅರ್ಬಾಜ್, ನಗರಸಭೆ ಸದಸ್ಯರು, ಕೋಲಾರ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ಜಟಾಪಟಿ: ಕಾರ್ಯಕ್ರಮಕ್ಕೂ ಮೊದಲು ಪಂಜಿನ ಮೆರವಣಿಗೆ ವೇಳೆ ಯೂತ್‌ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್‌ ನಂಜೇಗೌಡ ಹಾಗೂ ಯೂತ್‌ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಸೈಯದ್‌ ಅಫ್ರಿದ್‌ ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು. ಉಭಯ ಬಣದವರು ಕಿತ್ತಾಡಿಕೊಂಡು ಪರಸ್ಪರ ಆರೋಪದಲ್ಲಿ ತೊಡಗಿದ್ದರು. ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ಮೆರವಣಿಗೆಯ ಶ್ರೇಯಸ್ಸು ಪಡೆಯಲು ಉಭಯ ಬಣದವರು ಮುಂದಾಗಿದ್ದು ಇದಕ್ಕೆ ಕಾರಣ ಎಂಬುದು ಗೊತ್ತಾಗಿದೆ.

ಮತಗಳ್ಳತನ ಸಂಬಂಧ ರಾಹುಲ್ ಗಾಂಧಿ ಆರೋಪ ಮಾಡಿದರೆ ಚುನಾವಣಾ ಆಯೋಗ ಅದಕ್ಕೆ ಉತ್ತರ ನೀಡಬೇಕಾಗಿತ್ತು. ಆದರೆ ಬಿಜೆಪಿ ನಾಯಕರು ಉತ್ತರ ನೀಡುತ್ತಿದ್ದಾರೆ
ಉದಯ್ ಬಾನು ಚಿಬ್ ಅಧ್ಯಕ್ಷ ರಾಷ್ಟ್ರೀಯ ಯೂತ್ ಕಾಂಗ್ರೆಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.