ADVERTISEMENT

ಬೇಡಿಕೆ ಈಡೇರಿಕೆಗೆ ಹಕ್ಕೊತ್ತಾಯ ಮಂಡನೆ

ಬಹುಜನ ವಿಚಾರ ವೇದಿಕೆಯಿಂದ 28ಕ್ಕೆ ಸಮಾವೇಶ, ಬೃಹತ್ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 5:58 IST
Last Updated 26 ನವೆಂಬರ್ 2025, 5:58 IST
ಕೋಲಾರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಬಹುಜನ ವಿಚಾರ ವೇದಿಕೆ ಜಿಲ್ಲಾಧ್ಯಕ್ಷ ಎಸ್.ಚಿನ್ನಾ ಹಾಗೂ ಪದಾಧಿಕಾರಿಗಳು ಆಹ್ವಾನ ಪತ್ರ ಬಿಡುಗಡೆ ಮಾಡಿದರು
ಕೋಲಾರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಬಹುಜನ ವಿಚಾರ ವೇದಿಕೆ ಜಿಲ್ಲಾಧ್ಯಕ್ಷ ಎಸ್.ಚಿನ್ನಾ ಹಾಗೂ ಪದಾಧಿಕಾರಿಗಳು ಆಹ್ವಾನ ಪತ್ರ ಬಿಡುಗಡೆ ಮಾಡಿದರು   

ಕೋಲಾರ: ಬಹುಜನ ವಿಚಾರ ವೇದಿಕೆಯಿಂದ ನ.28 ರಂದು ಬೆಳಿಗ್ಗೆ 11 ಗಂಟೆಗೆ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬಿಸಿಎಂ/ಆರ್‌ಎಂ/ಎಸ್‌ಸಿ, ಎಸ್‌ಟಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಎಸ್.ಚಿನ್ನಾ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವೇದಿಕೆಯ ಅಂಗಸಂಸ್ಥೆ ಬಹುಜನ ವಿದ್ಯಾರ್ಥಿ ವೇದಿಕೆಯ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಲಿದ್ದು, ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬಂಗಾರಪೇಟೆ ವೃತ್ತದಿಂದ ರಂಗಮಂದಿರವರೆಗೆ ಬೃಹತ್‌ ಮೆರವಣಿಗೆ ನಡೆಸಲಾಗುವುದು ಎಂದರು.

ಉದ್ಘಾಟನೆಯನ್ನು ಬೆಂಗಳೂರಿನ ಅಕ್ಕ ಐಎಎಸ್‌ ಅಕಾಡೆಮಿ ತರಬೇತುದಾರ ಶಿವಕುಮಾರ್ ನೆರವೇರಿಸಿ ಮಾರ್ಗದರ್ಶಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಬೆಂಗಳೂರು ಸಮಾಜ ಕಲ್ಯಾಣ ಇಲಾಖೆ ಹೆಚ್ಚುವರಿ ನಿರ್ದೇಶಕ ದೇವರಾಜ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎ.ಅಜಯ್ ಕುಮಾರ್‌, ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್‌ ಸೇರಿದಂತೆ ಹಲವು ಭಾಗವಹಿಸಲಿದ್ದಾರೆ ಎಂದು ಹೇಳಿದರು.‌

ADVERTISEMENT

ಬೆಂಗಳೂರಿನ ಭೂಮ್ತಾಯಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಬಂಧ ಸ್ಪರ್ಧೆ, ವಿಜೇತರಿಗೆ ಸನ್ಮಾನ ಹಾಗೂ ಅತ್ಯುತ್ತಮ ಹಾಸ್ಟೆಲ್ ನಿರ್ವಹಣೆಗಾಗಿ ಬಂಗಾರಪೇಟೆಯ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯದ ಮೇಲ್ವಿಚಾರಕಿ ಶಿವಲೀಲಾ ಪಡಸಲಗಿ ಅವರನ್ನು ಅಭಿನಂದಿಸಲಾಗುವುದು, ಪ್ರತಿಭಾ ಪುರಸ್ಕಾರ ವಿತರಿಸಲಾಗುವುದು ಎಂದರು.

ಸಮಾವೇಶದಲ್ಲಿ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೆ ತರಬೇಕು, ಹಿಂದುಳಿದ-ಅಲ್ಪಸಂಖ್ಯಾತ, ಸಮಾಜ ತ್ರಿವಳಿ ಇಲಾಖೆಗಳ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳ ಭೋಜನ ವೆಚ್ಚ ಮಾಸಿಕ ₹ 3000. ಪ್ರೀ ಮೆಟ್ರಿಕ್ ವಿದ್ಯಾರ್ಥಿಗಳ ಭೋಜನ ವೆಚ್ಚ ₹ 2500 ಹೆಚ್ಚಳ ಮಾಡಬೇಕು, ಖಾಸಗಿ ಕ್ಷೇತ್ರದಲ್ಲಿ ಒಬಿಸಿ, ಆರ್‌ಎಂ., ಎಸ್‌ಸಿ, ಎಸ್‌ಟಿ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗ ಮೀಸಲಾತಿ ಜಾರಿ ಮಾಡಬೇಕು. ಸರ್ಕಾರಿ ಹಾಸ್ಟೆಲ್‌ನಲ್ಲಿ 10 ವರ್ಷಕ್ಕೂ ಸಮಯದಿಂದ ಇರುವ ಹೊರಗುತ್ತಿಗೆ ಸಿಬ್ಬಂದಿಯನ್ನು ಕಾಯಂಗೊಳಿಸಿ, ಉಳಿದ ಸಿಬ್ಬಂದಿಗೆ ಸೇವಾ ಭದ್ರತೆ ನಿಯಮ ಒದಗಿಸಬೇಕು.

ಕನಿಷ್ಟ 30 ವಿದ್ಯಾರ್ಥಿಗಳಗಿಂತ ಕಡಿಮೆ ದಾಖಲಾತಿ ಇರುವ ವಿದ್ಯಾರ್ಥಿ ನಿಲಯಗಳನ್ನು ಮುಚ್ಚಿ, ಸನಿಹದಲ್ಲಿರುವ ವಿದ್ಯಾರ್ಥಿ ನಿಲಯಗಳಿಗೆ ನಿಲಯಾರ್ಥಿಗಳನ್ನು ಸೇರ್ಪಡೆ ಮಾಡಬೇಕು. ವಸತಿ ನಿಲಯಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಕೇಂದ್ರ ಕಚೇರಿಗಳಿಂದ ಖರೀದಿಸುವ ಬದಲು ತಾಲೂಕುವಾರು ಬೇಡಿಕೆಗೆ ಅನುಗುಣವಾಗಿ ಸ್ಥಳೀಯವಾಗಿ ಖರೀದಿಸಲು ಆದೇಶಿಸಬೇಕು. ವಾರ್ಡನ್ ಜತೆ ವಿದ್ಯಾರ್ಥಿ ನಿಲಯ ನಿರ್ವಹಣೆಗೆ ಪ್ರತ್ಯೇಕ ಸಹಾಯಕನನ್ನು ನೇಮಿಸಿ. ಕನಿಷ್ಠ 25 ಸಾವಿರ ರು ಗೌರವ ಧನ ನೀಡಬೇಕು.

ಹಾಸ್ಟೆಲ್ ಮತ್ತು ಶೌಚಾಲಯ ಶುಚಿತ್ವ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ನೇಮಿಸಿ ಕನಿಷ್ಠ ಮಾಹೆಯಾನ 15.000 ಸಾವಿರ ಸಂಬಳ ನೀಡಬೇಕು. ಹಾಸ್ಟೆಲ್ ವಿದ್ಯಾರ್ಥಿನಿಯ ಸ್ಯಾನಿಟರಿ ನ್ಯಾಪ್ತಿನ್ ಬಳಕೆ ನಂತರ ತ್ಯಾಜ್ಯವನ್ನು ಅತ್ಯಂತ ವೈಜ್ಞಾನಿಕ ಪದ್ಧತಿಯಲ್ಲಿ ವಿಲೇವಾರಿ ಮಾಡಲು ಜಿಲ್ಲಾ ಮಟ್ಟದ ಟೆಂಡರ್ ನೀಡಬೇಕು. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಭೋದಿಸುತ್ತಿರುವ ಶಿಕ್ಷಕರಿಗೆ ಕನಿಷ್ಠ 5 ಸಾವಿರ ರುಗಳು ನೀಡಬೇಕು ಎನ್ನುವ ಹಕ್ಕೊತ್ತಾಯಗಳನ್ನು ಮಂಡಿಸುವುದಾಗಿ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಪ್ರಕಾಶ್, ಸಂಚಾಲಕ ಅನಿಲ್, ಪದಾಧಿಕಾರಿ ವರುಣ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.