ADVERTISEMENT

ಕೋಲಾರ ಎಸ್‌.ಪಿ ವಿರುದ್ಧ ಹಕ್ಕುಚ್ಯುತಿ ಮಂಡನೆ: ಸಂಸದ ಎಸ್‌. ಮುನಿಸ್ವಾಮಿ

ಶೀಘ್ರ ಲೋಕಸಭಾ ಸ್ಪೀಕರ್‌ಗೆ ಅರ್ಜಿ, ರಾಜ್ಯಪಾಲರಿಗೆ ದೂರು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2023, 15:50 IST
Last Updated 26 ಸೆಪ್ಟೆಂಬರ್ 2023, 15:50 IST
ಸಂಸದ ಮುನಿಸ್ವಾಮಿ
ಸಂಸದ ಮುನಿಸ್ವಾಮಿ    

ಕೋಲಾರ: ‘ಕೋಲಾರದಲ್ಲಿ ಮಂಗಳವಾರ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನನ್ನನ್ನು ಹೊರಗೆ ತಳ್ಳಿ ಶಿಷ್ಟಾಚಾರ ಉಲ್ಲಂಘಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಲೋಕಸಭೆ ಸ್ಪೀಕರ್‌ಗೆ ಅರ್ಜಿ ಸಲ್ಲಿಸುತ್ತೇನೆ. ರಾಜ್ಯಪಾಲ್ಯರಿಗೂ ದೂರು ನೀಡುತ್ತೇನೆ’ ಎಂದು ಬಿಜೆಪಿ ಸಂಸದ ಎಸ್‌.ಮುನಿಸ್ವಾಮಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋಲಾರ ಪೊಲೀಸ್‌ ವರಿಷ್ಠಾಧಿಕಾರಿ ನಾರಾಯಣ ಅವರು ಕಾಂಗ್ರೆಸ್‌ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ. ‌ಅವಾಚ್ಯ ಶಬ್ದಗಳಿಂದ ನಿಂದಿಸಿದ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅವರಿಗೆ ಏನೂ ಮಾಡದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯು ಬಿಜೆಪಿ ಸಂಸದನಾದ ನನ್ನನ್ನು ಉದ್ದೇಶಪೂರ್ವಕವಾಗಿ ಬಲವಂತದಿಂದ ಹೊರಗೆ ಕಳುಹಿಸಿದ್ದಾರೆ. ಅವರ ವಿರುದ್ಧ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಬೇಕು. ಶಾಸಕ ನಾರಾಯಣಸ್ವಾಮಿ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಕಾಂಗ್ರೆಸ್‌ ಪಕ್ಷ ಈ ಹಿಂದೆ ಅಂಬೇಡ್ಕರ್‌ ಅವರನ್ನು ಸೋಲಿಸಬೇಕು, ಸಂಸತ್‌ಗೆ ಬರಲು ಬಿಡಬಾರದು ಎಂಬ ಲೆಕ್ಕಾಚಾರ ಹೊಂದಿತ್ತು. ಈಗ ಕೋಲಾರದ ದಲಿತ ಸಂಸದನಾಗಿರುವ ನನಗೆ ಕಾಂಗ್ರೆಸ್‌ ಅಪಮಾನ ಮಾಡುವ ಉದ್ದೇಶ ಹೊಂದಿದೆ’ ಎಂದು ಆರೋಪಿಸಿದರು.

ADVERTISEMENT

‘ಶ್ರೀನಿವಾಸಪುರದಲ್ಲಿ ರೈತರ ಮೇಲೆ‌ ದಾಖಲಿಸಿರುವ ದೂರುಗಳನ್ನು ರದ್ದುಗೊಳಿಸಬೇಕು. ಭೂಗಳ್ಳರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ವಿಧಾನಸೌಧ ಚಲೊ ಹಮ್ಮಿಕೊಳ್ಳಲಾಗುವುದು’ ಎಂದು ಮುನಿಸ್ವಾಮಿ ತಿಳಿಸಿದರು.

ಶಾಸಕ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ ಅವರಿಗೆ ದೂರು ಸಲ್ಲಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.