ADVERTISEMENT

ರಾಜಕೀಯ ಉದ್ದೇಶಕ್ಕೆ ಕೋಮುಲ್‌ ಮೇಲೆ‌ ಆರೋಪ: ಡಿ.ವಿ.ಹರೀಶ್

ಸೌರ ಘಟಕ ನಿರ್ಮಾಣದ ತನಿಖೆ ‌ನಡೆಸಲಿ, ತಪ್ಪಿದ್ದರೆ ನಾನೂ ಜವಾಬ್ದಾರ: ಕೋಮುಲ್‌ ನಿರ್ದೇಶಕ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 8:26 IST
Last Updated 20 ಫೆಬ್ರುವರಿ 2026, 8:26 IST
ಕೋಲಾರದಲ್ಲಿ ತಾಲ್ಲೂಕು ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ‌ ಸಂಘಗಳ ನೌಕರರ ಸಂಘದ ವಾರ್ಷಿಕ ‌ಸಾಮಾನ್ಯ ಸಭೆಯನ್ನು ಕೋಮುಲ್‌ ನಿರ್ದೇಶಕರಾದ ವಡಗೂರು ಡಿ.ವಿ.ಹರೀಶ್‌, ಹನುಮೇಶ್‌ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ರಾಮಣ್ಣ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ರಘುಪತಿ ರೆಡ್ಡಿ ಪಾಲ್ಗೊಂಡಿದ್ದರು
ಕೋಲಾರದಲ್ಲಿ ತಾಲ್ಲೂಕು ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ‌ ಸಂಘಗಳ ನೌಕರರ ಸಂಘದ ವಾರ್ಷಿಕ ‌ಸಾಮಾನ್ಯ ಸಭೆಯನ್ನು ಕೋಮುಲ್‌ ನಿರ್ದೇಶಕರಾದ ವಡಗೂರು ಡಿ.ವಿ.ಹರೀಶ್‌, ಹನುಮೇಶ್‌ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ರಾಮಣ್ಣ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ರಘುಪತಿ ರೆಡ್ಡಿ ಪಾಲ್ಗೊಂಡಿದ್ದರು    

ಕೋಲಾರ: ಜಿಲ್ಲಾ‌ ಹಾಲು ಒಕ್ಕೂಟದ‌ ಅಭಿವೃದ್ಧಿಯ ದೃಷ್ಟಿಯಿಂದ ಸೋಲಾರ್ ಘಟಕ ನಿರ್ಮಿಸಲಾಗಿದ್ದು, ರಾಜಕೀಯ ಕಾರಣಕ್ಕೆ ಏನೇನೋ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಬೇಕಾದರೆ ತನಿಖೆ ‌ನಡೆಸಲಿ. ಏನಾದರೂ ತಪ್ಪಿದ್ದರೆ ನಾವೂ ಜವಾಬ್ದಾರರಾಗುತ್ತೇವೆ. ಏಕೆಂದರೆ ಸೌರ ಘಟಕ ಸ್ಥಾಪನೆ ನಿರ್ಧಾರ ಕೈಗೊಂಡಾಗ ಆಡಳಿತ ಮಂಡಳಿ ಸಭೆಯಲ್ಲಿ ನಾನೂ ಇದ್ದೆ‌ ಎಂದು ಕೋಮುಲ್ ನಿರ್ದೇಶಕ ವಡಗೂರು ಡಿ.ವಿ.ಹರೀಶ್ ಹೇಳಿದರು.

ನಗರದ ಜಿಲ್ಲಾ ಸಹಕಾರ‌ ಒಕ್ಕೂಟದ ಸಭಾಂಗಣದಲ್ಲಿ‌ ಕೋಲಾರ ತಾಲ್ಲೂಕು ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ‌ ಸಂಘಗಳ ನೌಕರರ ಸಂಘದ 2025ನೇ ಸಾಲಿನ ವಾರ್ಷಿಕ ‌ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿನ ಆಡಳಿತ ಮಂಡಳಿ ಸಮಯದಲ್ಲಿ ಹಲವು ಸಮಸ್ಯೆ‌ ಎದುರಾದವು. ರಾಜಕೀಯ ಉದ್ದೇಶದಿಂದ ಒಕ್ಕೂಟದ ಮೇಲೆ‌ ಕೆಲ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ನಾನು ಈ ವೇದಿಕೆಯಲ್ಲಿ ಹೆಚ್ಚು ಮಾತನಾಡಲ್ಲ ಎಂದರು.

ADVERTISEMENT

ನಾವು ಹಾಲು ಒಕ್ಕೂಟದಿಂದ ಹಲವಾರು ಸೌಲಭ್ಯ ‌ಕಲ್ಪಿಸುವ ಕೆಲಸ ‌ಮಾಡುತ್ತಿದ್ದೇವೆ. ಇಡೀ ರಾಜ್ಯದಲ್ಲಿ ‌ನಮಲ್ಲಿ ಹಾಲಿನ ಗುಣಮಟ್ಟದ ಮೇಲೆ ಇನ್ಸೆಂಟೀವ್‌ ಕೊಡಲಾಗುತ್ತಿದೆ‌,‌ ವಿಮೆ ಕೊಡಿಸಲಾಗುತ್ತಿದೆ‌. ರೈತರಿಗೆ ಸೌಲಭ್ಯ ಕೊಡಬೇಕು,‌ ಗುಣಮಟ್ಟ ಹೆಚ್ಚಿಸಬೇಕು‌. ಜೊತೆಗೆ ನೌಕರರಿಗೂ ಸೌಲಭ್ಯ ಕೊಡಬೇಕು. ನೌಕರರಿಗೂ ಸೌಲಭ್ಯ‌ ಕಲ್ಪಿಸಲು, ಬೇಡಿಕೆ ಈಡೇರಿಸಲು ಪ್ರಾಮಾಣಿಕ ‌ಪ್ರಯತ್ನ ಮಾಡುತ್ತೇನೆ ಎಂದು‌ ಭರವಸೆ ‌ನೀಡಿದರು.

ನಾವು ಒಕ್ಕೂಟದಲ್ಲಿ ಐದು ವರ್ಷ ಕೆಲಸ‌ ಮಾಡಲು ಅವಕಾಶ ಸಿಗಲು ಡೇರಿ ಕಾರ್ಯದರ್ಶಿಗಳು ಪ್ರಧಾನ ಪಾತ್ರ ವಹಿಸಿದ್ದಾರೆ‌ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಒಕ್ಕೂಟ ವಿಭಜನೆ ಆದ ಮೇಲೆ ಹಲವು ಸವಾಲು ಎದುರಿಸಿ ಹೊಸಹೊಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಂವಿಕೆ ಡೇರಿ, ಸೋಲಾರ್ ಘಟಕ ‌ಸಿದ್ಧಗೊಂಡಿವೆ.‌ ಹಾಲು ಉತ್ಪಾದಕರ ಹೆಣ್ಣು ಮಕ್ಕಳಿಗೆ ‌ಬೆಂಗಳೂರಿನಲ್ಲಿ ಹಾಸ್ಟೆಲ್ ನಿರ್ಮಿಸಲಾಗಿದೆ. ಶ್ರೀನಿವಾಸಪುರದಲ್ಲಿ ಪಶು ಆಹಾರ ಘಟಕ ನಿರ್ಮಾಣಕ್ಕೆ ಡಿಪಿಆರ್ ಆಗಿದೆ ಎಂದರು.

ಕೋಮುಲ್ ನಿರ್ದೇಶ ಎನ್.ಹನುಮೇಶ್ ಮಾತನಾಡಿ, ‘ಕಷ್ಟ ಸುಖಗಳಿಗೆ ಸ್ಪಂದಿಸಲು ಸಂಘ ಬೇಕು. ಜೊತೆಗೆ ‌ಬೇಡಿಕೆ ಈಡೇರಿಕೆ ಅಗತ್ಯವಿರುತ್ತದೆ. ಸಂಘದಿಂದ ಗ್ರಾಮಸ್ಥರಿಗೂ ಅನುಕೂಲ. ಇದೊಂದು ‌ಸಮಾಜ ಸೇವೆ‌ ಇದ್ದಂತೆ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕು. ಸಂಘದ ಕಾರ್ಯದರ್ಶಿಗಳು ಆಧಾರಸ್ತಂಭ ಇದ್ದಂತೆ. ಅವರು ಚೆನ್ನಾಗಿ ಕಾರ್ಯನಿರ್ವಹಿಸಬೇಕು‌’ ಎಂದು ಸಲಹೆ‌ ನೀಡಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ರಘುಪತಿ ರೆಡ್ಡಿ ಮಾತನಾಡಿ, ‘ರಾಜಕಾರಣದಲ್ಲಿ ಯಾರೇ ಉನ್ನತ ಸ್ಥಾನಕ್ಕೆ ಏರಿದ್ದರೂ ಅದಕ್ಕೆ ‌ಕಾರಣ ಸಹಕಾರ‌ ಕ್ಷೇತ್ರ. ಡಿಸಿಸಿ ಬ್ಯಾಂಕ್‌ ಈಗ ಕೆಟ್ಟ ಪರಿಸ್ಥಿತಿಯಲ್ಲಿದೆ. ಹತ್ತು ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್ ಹೇಗಿತ್ತು? ಈಗ ‌ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ‌. ಇದಕ್ಕೆ ರಾಜಕಾರಣವೇ ‌ಕಾರಣ‌‌. ಸಹಕಾರ ಸಂಘದಲ್ಲಿ ರಾಜಕಾರಣ ‌ಬೆರೆಯಬಾರದು’ ಎಂದರು.

ಡಿಸಿಸಿ ಬ್ಯಾಂಕ್‌ಗೆ ಚುನಾವಣೆ‌ ನಡೆದು ಹಲವು ತಿಂಗಳು ಕಳೆದಿದ್ದರೂ ಅಧ್ಯಕ್ಷರ ಆಯ್ಕೆ ನಡೆದಿಲ್ಲ. ಸಾಲ ವಸೂಲಾತಿ ಬಗ್ಗೆ ಅಧಿಕಾರಿಗಳು ಕಾಳಜಿ‌ ವಹಿಸುತ್ತಿಲ್ಲ ಎಂದು ದೂರಿದರು.

ನೌಕರರ ಸಂಘದ ಅಧ್ಯಕ್ಷ ಜಿ.ಎಂ.ಮುನಿಯಪ್ಪ (ರಾಮಣ್ಣ) ಅಧ್ಯಕ್ಷತೆ ವಹಿಸಿದ್ದರು. ನೌಕರರು ಕೆಲ ಬೇಡಿಕೆ‌ ಇಟ್ಟರು. ಭವಿಷ್ಯ ‌ನಿಧಿ ಬೇಕು, ತರಬೇತಿ ನೀಡಬೇಕು, ಕಾಮನ್ ‌ಸಾಫ್ಟ್‌ವೇರ್ ಅಳವಡಿಸಲು ತರಬೇತಿ ನೀಡಬೇಕು ಎಂದು ಮನವಿ‌ ಮಾಡಿದರು. ಈ ಬಗ್ಗೆ ಗಮನಹರಿಸಲಾಗುವುದು‌ ಎಂದು ಕೋಮುಲ್ ನಿರ್ದೇಶಕರು ಭರವಸೆ ನೀಡಿದರು.

2024-25ನೇ ಸಾಲಿನ ವಾರ್ಷಿಕ ವರದಿ ಮಂಡಿಸಲಾಯಿತು ಗೌರವಾಧ್ಯಕ್ಷ‌ ಲೋಕೇಶ್,‌ ಪ್ರಧಾನ ಕಾರ್ಯದರ್ಶಿ ಶಿವರುದ್ರಯ್ಯ, ಪದಾಧಿಕಾರಿಗಳು ಸದಸ್ಯರು ಇದ್ದರು.

ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೇಡ

ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೆರೆಯಬಾರದು. ಆದರೆ ಚುನಾವಣೆಯ ಕಾರಣಕ್ಕೆ ರಾಜಕಾರಣ ‌ಬಂದಿದೆ ಜಾತಿಯೂ ಬೆರೆತಿದೆ. ಇದರಿಂದ ಬಹಳ ‌ಬೇಸರವಾಗುತ್ತದೆ ಎಂದು ಡಿ.ವಿ.ಹರೀಶ್‌ ಹೇಳಿದರು. ಚುನಾವಣೆಯಲ್ಲಿ ಕೋಲಾರ ‌ತಾಲ್ಲೂಕಿನಲ್ಲಿ ಮೂರು ಕ್ಷೇತ್ರ ಮಾಡಿ ನನ್ನ ಬಲ ಕುಗ್ಗಿಸಲು ಪ್ರಯತ್ನ ನಡೆಯಿತು. ಆದರೆ ನಾನು ಬಗ್ಗಲಿಲ್ಲ. ಯಾವುದೇ ಸಮಸ್ಯೆ ಸವಾಲು ‌ಎದುರಿಸಲು ಸಿದ್ಧ. ಯಾವುದೇ ಕ್ಷೇತ್ರ ಎಂದು ನೋಡದೆ ಕೆಲಸ‌ ಮಾಡಿಕೊಂಡು‌ ಹೋಗುತ್ತಿದ್ದೇನೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.