ಚುನಾವಣೆ
(ಸಾಂದರ್ಭಿಕ ಚಿತ್ರ)
ಕೋಲಾರ: ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಮುಲ್) ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಕೇವಲ ನಾಲ್ಕು ದಿನ ಬಾಕಿ ಇದ್ದು, ಮತದಾರರನ್ನು ಸೆಳೆದಿಟ್ಟುಕೊಳ್ಳಲು ನಾನಾ ಕಸರತ್ತು ನಡೆಯುತ್ತಿವೆ.
ಕಾಂಗ್ರೆಸ್ ಹಾಗೂ ಜೆಡಿಎಸ್–ಬಿಜೆಪಿ ಎನ್‌ಡಿಎ ಮೈತ್ರಿಕೂಟ ಬೆಂಬಲಿತ ಕೆಲ ಅಭ್ಯರ್ಥಿಗಳು ತಮ್ಮ ಪಕ್ಷದ ಮುಖಂಡರ ಸಹಕಾರದಿಂದ ಮತದಾರರನ್ನು ಗೋವಾ, ಕೇರಳ–ತಮಿಳುನಾಡು, ಅಂಡಮಾನ್ ಸೇರಿದಂತೆ ವಿವಿಧ ಸ್ಥಳಗಳಿಗೆ ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಕೆಲ ಪಕ್ಷೇತರ ಅಭ್ಯರ್ಥಿಗಳೂ ಅದಕ್ಕೆ ಹೊರತಲ್ಲ. ಜೊತೆಗೆ ಹಣಕಾಸಿನ ಆಮಿಷದ ಹೊಳೆಯೂ ಹರಿಯುತ್ತಿದೆ.
ಜೂನ್ 25ರಂದು ನಗರದ ಬಾಲಕಿಯರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಮತದಾನ ನಡೆಯಲಿದ್ದು, 12 ನಿರ್ದೇಶಕರ ಸ್ಥಾನಗಳಿಗೆ 29 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತ್ತೊಂದು ನಿರ್ದೇಶಕ ಸ್ಥಾನಕ್ಕೆ ಟೇಕಲ್ ಕ್ಷೇತ್ರದಿಂದ ಶಾಸಕ ಕೆ.ವೈ.ನಂಜೇಗೌಡ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ ಕ್ಷೇತ್ರ ಹೊರತುಪಡಿಸಿ ಉಳಿದ 12 ಕ್ಷೇತ್ರ ಸೇರಿ ಒಟ್ಟು 855 ಮತದಾರರು (ಡೆಲಿಗೇಟ್) ಮತದಾನದ ಅರ್ಹತೆ ಹೊಂದಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ 55ರಿಂದ ಹಿಡಿದು 90 ಮಂದಿಯವರೆಗೆ ಮತದಾರರಿದ್ದಾರೆ.
ಮತದಾರರು ಈಗಾಗಲೇ ಒಂದಿಷ್ಟು ಮಂದಿ ಕಾಂಗ್ರೆಸ್ ಕಡೆಯೂ, ಇನ್ನೊಂದಿಷ್ಟು ಮಂದಿ ಎನ್‌ಎಡಿ ಮೈತ್ರಿಕೂಟದ ಕಡೆಯೂ ಹಂಚಿಹೋಗಿದ್ದಾರೆ. ಗೆಲುವಿಗೆ ಬೇಕಾದ ಸಂಖ್ಯೆಯ ಮತದಾರರನ್ನು ಸೆಳೆಯಲು ಎರಡೂ ಕಡೆಯಿಂದಲೂ ಭಾರಿ ತಂತ್ರಗಾರಿಕೆ ನಡೆಯುತ್ತಿದೆ.
ಪ್ರಮುಖವಾಗಿ ಮುಳಬಾಗಿಲು ಪೂರ್ವ ಹಾಗೂ ಪಶ್ಚಿಮದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದ್ದು, ಮತದಾರರನ್ನು ಓಲೈಸಲು ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಭಾರಿ ಕಸರತ್ತು ನಡೆದಿದೆ. ಇಲ್ಲಿನ ಪಕ್ಷೇತರ ಅಭ್ಯರ್ಥಿಗಳೂ ಹಿಂದೆ ಬಿದ್ದಿಲ್ಲ. ಕೆಲ ಮತದಾರರನ್ನು ತಮಿಳುನಾಡು, ಕೇರಳ ಕಡೆ ಕರೆದುಕೊಂಡು ಹೋಗಿರುವುದು ಗೊತ್ತಾಗಿದೆ. ಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ ಅಂಡಮಾನ್‌ಗೆ ಕರೆದೊಯ್ಯಲಾಗಿತ್ತು.
ಮಾಲೂರು ಕಸಬಾ ಕ್ಷೇತ್ರದಲ್ಲಿ ಕೆಲ ಮತದಾರರನ್ನು ಗೋವಾಕ್ಕೆ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶ್ರೀನಿವಾಸಪುರದ ಅಡ್ಡಗಲ್, ಯಲ್ದೂರು ಕ್ಷೇತ್ರ, ಬಂಗಾರಪೇಟೆ ಹಾಗೂ ಕೆಜಿಎಫ್ ಕ್ಷೇತ್ರದಲ್ಲೂ ನಾನಾ ಕಸರತ್ತುಗಳು ನಡೆಯುತ್ತಿವೆ.
‘ತಾವು ಪ್ರವಾಸಕ್ಕೆ ಕರೆದೊಯ್ದಿರುವ ಮತದಾರರನ್ನು ಎದುರಾಳಿ ಸ್ಪರ್ಧಿಗಳು ಸಂಪರ್ಕಿಸಬಹುದೆಂದು ಮೊಬೈಲ್ ಫೋನ್ ಕಸಿದುಕೊಂಡಿದ್ದಾರೆ. ಕುಟುಂಬದವರ ಜೊತೆ ಮಾತನಾಡಲು ಬಯಸಿದರೆ ಅಭ್ಯರ್ಥಿ ಕಡೆಯ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕೊಟ್ಟು ಮಾತನಾಡಿಸುತ್ತಾರೆ’ ಎಂದು ಪ್ರವಾಸಕ್ಕೆ ಹೋಗಿರುವ ಡೇರಿಯ ಡೆಲಿಗೇಟ್‌ವೊಬ್ಬರ ಕುಟುಂಬದವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಕೋಲಾರದ ಮೂರು ಕ್ಷೇತ್ರಗಳಲ್ಲಿ ಮತದಾರರನ್ನು ಓಲೈಸಲು ಎರಡೂ ಪಕ್ಷಗಳ ಪ್ರಮುಖ ಮುಖಂಡ ಹಾಗೂ ಜನಪ್ರತಿನಿಧಿಗಳು ಅಂಗಳಕ್ಕೆ ಇಳಿದಿದ್ದಾರೆ. ಮತದಾರರನ್ನು ಸೋಮವಾರ ಪಕ್ಕದ ಜಿಲ್ಲೆಗಳಲ್ಲಿನ ರೆಸಾರ್ಟ್‌ಗೆ ಕರೆದೊಯ್ದು ಮತದಾನ ದಿನ ನೇರವಾಗಿ ಮತಗಟ್ಟೆಗೆ ಕರೆತರಲು ಯೋಜನೆ ರೂಪಿಸಿರುವುದು ಗೊತ್ತಾಗಿದೆ.
ಮತದಾರರಿಗೆ ಕೆಲ ಅಭ್ಯರ್ಥಿಗಳು ಈಗಾಗಲೇ ₹ 1 ಲಕ್ಷ ಮುಂಗಡ ನೀಡಿದ್ದು, ಮತದಾನ ದಿನಾಂಕ ಹತ್ತಿರುವ ಬರುವಾಗ ಮತ್ತೆ ₹ 1 ಅಥವಾ ₹ 2 ಲಕ್ಷ ನೀಡುವ ಆಮಿಷಯೊಡ್ಡಲಾಗುತ್ತಿದೆ ಎಂಬ ಮಾತುಕತೆ ಕೇಳಿಬರುತ್ತಿದೆ. ಎಂದಿನಂತೆ ಆಣೆ ಪ್ರಮಾಣ ಕೂಡ ಮಾಡಿಸಿಕೊಳ್ಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.