ADVERTISEMENT

ಕೋಚಿಮುಲ್‌ ಚುನಾವಣೆ: ಕಾಂಗ್ರೆಸ್‌ ಮೇಲುಗೈ

ಹಾಲಿಗಳಿಗೆ ಮುಖಭಂಗ: ಹೊಸ ಮುಖಗಳಿಗೆ ಒಲಿದ ವಿಜಯಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 13 ಮೇ 2019, 20:22 IST
Last Updated 13 ಮೇ 2019, 20:22 IST
ಕೋಲಾರದಲ್ಲಿ ಸೋಮವಾರ ಕೋಚಿಮುಲ್‌ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಯು ಮತದಾರರ ಗುರುತಿನ ಚೀಟಿ ಹಾಗೂ ಡೆಲಿಗೇಟ್‌ ಫಾರಂ ಪರಿಶೀಲಿಸಿದರು.
ಕೋಲಾರದಲ್ಲಿ ಸೋಮವಾರ ಕೋಚಿಮುಲ್‌ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಯು ಮತದಾರರ ಗುರುತಿನ ಚೀಟಿ ಹಾಗೂ ಡೆಲಿಗೇಟ್‌ ಫಾರಂ ಪರಿಶೀಲಿಸಿದರು.   

ಕೋಲಾರ: ರಾಜಕೀಯ ಜಿದ್ದಾಜಿದ್ದಿಯ ಕಣವಾಗಿದ್ದ ಕೋಲಾರ– ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಾಳಯ ಮೇಲುಗೈ ಸಾಧಿಸಿದೆ.

ಕೋಚಿಮುಲ್‌ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಗಳ ಪೈಕಿ 4 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಉಳಿದ 9 ಸ್ಥಾನಗಳಿಗೆ ಸೋಮವಾರ ಇಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 6 ಮಂದಿ, ಜೆಡಿಎಸ್‌ ಬೆಂಬಲಿತ 2 ಹಾಗೂ ಮಾಜಿ ಶಾಸಕ ಎಂ.ಸಿ.ಸುಧಾಕರ್‌ರೆಡ್ಡಿ ಬಣದ ಒಬ್ಬರು ಗೆಲುವು ಸಾಧಿಸಿದರು.

ಅವಿರೋಧ ಆಯ್ಕೆಯಾಗಿರುವ 4 ನಿರ್ದೇಶಕರೂ ಕಾಂಗ್ರೆಸ್‌ ಬೆಂಬಲಿತರಾಗಿದ್ದು, ಒಟ್ಟಾರೆ ಒಕ್ಕೂಟದ ಆಡಳಿತ ಮಂಡಳಿಯಲ್ಲಿ ಕೈ ಪಾಳಯವು 10 ಸ್ಥಾನ ಗಳಿಸುವುದರೊಂದಿಗೆ ಪ್ರಾಬಲ್ಯ ಮೆರೆದಿದೆ. ಒಟ್ಟಾರೆ 9 ಕ್ಷೇತ್ರಗಳಿಗೆ 1,312 ಮತ ಚಲಾವಣೆಯಾಗಿದ್ದು, ಈ ಪೈಕಿ 7 ಮತ ತಿರಸ್ಕೃತಗೊಂಡವು.

ADVERTISEMENT

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ ಕೋಲಾರ ಕ್ಷೇತ್ರದ ಡಿ.ವಿ.ಹರೀಶ್, ಶ್ರೀನಿವಾಸಪುರ ಕ್ಷೇತ್ರದ ಎನ್‌ ಹನುಮೇಶ್, ಮಾಲೂರಿನಿಂದ ಶಾಸಕ ಕೆ.ವೈ.ನಂಜೇಗೌಡ, ಕೋಲಾರ ಮಹಿಳಾ ಕ್ಷೇತ್ರದಿಂದ ಆರ್‌.ಕಾಂತಮ್ಮ, ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಿಂದ ಆರ್‌.ಶ್ರೀನಿವಾಸ್ ಮತ್ತು ಬಾಗೇಪಲ್ಲಿ ಕ್ಷೇತ್ರದಿಂದ ಮಂಜುನಾಥರೆಡ್ಡಿ ಜಯ ಗಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನಿಂದ ಮಾಜಿ ಶಾಸಕ ಸುಧಾಕರ್‌ರೆಡ್ಡಿ ಬಣದ ವೈ.ಬಿ.ಅಶ್ವತ್ಥನಾರಾಯಣ, ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಕಾಡೇನಹಳ್ಳಿ ನಾಗರಾಜ್ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದ ವೆಂಕಟೇಶ್ ಗೆಲುವು ಸಾಧಿಸಿದರು.

ಈಗಾಗಲೇ ಬಂಗಾರಪೇಟೆ ಕ್ಷೇತ್ರದಿಂದ ಕಾಂಗ್ರೆಸ್‌ ಬೆಂಬಲಿತ ಜಯಸಿಂಹ ಕೃಷ್ಣಪ್ಪ, ಗೌರಿಬಿದನೂರಿನಿಂದ ಕಾಂತರಾಜು, ಗುಡಿಬಂಡೆ ಕ್ಷೇತ್ರದಿಂದ ಅಶ್ವತ್ಥರೆಡ್ಡಿ, ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರದಿಂದ ಸುನಂದಮ್ಮ ಅವಿರೋಧ ಆಯ್ಕೆಯಾಗಿದ್ದಾರೆ.

ಶತಾಯಗತಾಯ ಗೆಲ್ಲುವ ಹಟದೊಂದಿಗೆ ಮುಳಬಾಗಿಲು ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಬಣದ ರಾಜೇಂದ್ರಗೌಡ ಹಾಗೂ ಮಾಲೂರಿನಿಂದ ಸ್ಪರ್ಧಿಸಿದ್ದ ಜೆಡಿಎಸ್‌ ಮಾಜಿ ಶಾಸಕ ಕೆ.ಎಸ್‌.ಮಂಜುನಾಥಗೌಡ ಬಣದ ಎ.ವಿ.ಪ್ರಸನ್ನ ಪರಾಭವಗೊಂಡಿದ್ದಾರೆ.

ಮತದಾನ ಸುಸೂತ್ರ: ಸಣ್ಣಪುಟ್ಟ ಗೊಂದಲ ಹೊರತುಪಡಿಸಿದರೆ ಜಿಲ್ಲಾ ಕೇಂದ್ರದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4ರವರೆಗೆ ಮತದಾನ ಸುಸೂತ್ರವಾಗಿ ನಡೆಯಿತು. ಬಳಿಕ ಸಂಜೆ ಮತ ಎಣಿಕೆ ಮಾಡಿ ಫಲಿತಾಂಶ ಘೋಷಿಸುತ್ತಿದ್ದಂತೆ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ವಿಜೇತ ಅಭ್ಯರ್ಥಿಗಳನ್ನು ಹೆಗಲ ಮೇಲೆ ಹೊತ್ತು ಜೈಕಾರ ಕೂಗಿದರು. ಅಲ್ಲದೇ, ಸಿಹಿ ಹಂಚಿ ಸಂಭ್ರಮಿಸಿದರು.

ಒಕ್ಕೂಟದ ಹಾಲಿ ನಿರ್ದೇಶಕರಾಗಿದ್ದ ಕೆ.ವಿ.ನಾಗರಾಜ್‌, ಆರ್‌.ರಾಮಕೃಷ್ಣೇಗೌಡ, ಮುನಿಯಪ್ಪ, ಎಂ.ಬೈರಾರೆಡ್ಡಿ, ಆರ್‌.ಆರ್‌.ರಾಜೇಂದ್ರಗೌಡ ಸೋತು ಮುಖಭಂಗ ಅನುಭವಿಸಿದರು.

ಪೈಪೋಟಿ ಕ್ಷೇತ್ರಗಳು: ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು ಹಾಗೂ ಮಾಲೂರು ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಇತ್ತು. ಮಾಲೂರು ಕ್ಷೇತ್ರದಲ್ಲಿ ನಂಜೇಗೌಡರು 102 ಮತ ಪಡೆದು ಗೆಲುವು ಸಾಧಿಸಿದರು. ಅವರ ಎದುರಾಳಿ ಜೆಡಿಎಸ್‌ ಬೆಂಬಲಿತ ಪ್ರಸನ್ನ 44 ಮತ ಗಳಿಸಿದರು.

ಕೋಲಾರ ಕ್ಷೇತ್ರದಲ್ಲಿ ಡಿ.ವಿ.ಹರೀಶ್ 128 ಮತ ಪಡೆದರೆ ಅವರ ಪ್ರತಿಸ್ಪರ್ಧಿ ಜೆಡಿಎಸ್‌ನ ರಾಮಕೃಷ್ಣೇಗೌಡ 90 ಮತ ಗಳಿಸಿ ಪರಾಭವಗೊಂಡರು. ಮುಳಬಾಗಿಲು ಕ್ಷೇತ್ರದಲ್ಲಿ ಜೆಡಿಎಸ್‌ ಬೆಂಬಲಿತ ಕಾಡೇನಹಳ್ಳಿ ನಾಗರಾಜ್ 83 ಮತ ಗಳಿಸಿ ಜಯಶಾಲಿಯಾದರು. ಅವರ ಎದುರಾಳಿ ರಾಜೇಂದ್ರಗೌಡ 72 ಮತ ಪಡೆದು ಸೋಲು ಅನುಭವಿಸಿದರು.

ಶ್ರೀನಿವಾಸಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹನುಮೇಶ್‌ 82 ಮತ ಪಡೆದು ಗೆಲುವಿನ ನಗೆ ಬೀರಿದರು. ಪ್ರತಿಸ್ಪರ್ಧಿ ಬೈರಾರೆಡ್ಡಿ 70 ಮತ ಗಳಿಸಿ ಸೋತರು. ಶಿಢ್ಲಘಟ್ಟ ತಾಲ್ಲೂಕಿನಲ್ಲಿ ಕಾಂಗ್ರೆಸ್‌ನ ಆರ್.ಶ್ರೀನಿವಾಸ 87 ಮತ ಪಡೆದು ಜಯ ಗಳಿಸಿದರು. ಪ್ರತಿಸ್ಪರ್ಧಿ ಮುನಿಯಪ್ಪ 86 ಮತ ಪಡೆದು ಸೋಲು ಅನುಭವಿಸಿದರು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್‌ ಬೆಂಬಲಿತ ವೆಂಕಟೇಶ್ 80 ಮತ ಪಡೆದು ಗೆಲುವು ಸಾಧಿಸಿದರು.  ಅವರ ಪ್ರತಿಸ್ಪರ್ಧಿ ಕೆ.ವಿ.ನಾಗರಾಜ್ 77 ಮತ ಪಡೆದರು.

ಚಿಂತಾಮಣಿ ಕ್ಷೇತ್ರದಲ್ಲಿ ಅಶ್ವತ್ಥ್‌ ನಾರಾಯಣ 113 ಮತ ಪಡೆದು ಜಯ ಸಾಧಿಸಿದರು. ಅವರ ಪ್ರತಿಸ್ಪರ್ಧಿ ಟಿ.ಎನ್.ರಾಜಗೋಪಾಲ್ 84 ಮತ ಪಡೆದು ಪರಾಭವಗೊಂಡರು. ಬಾಗೇಪಲ್ಲಿ ಕ್ಷೇತ್ರದಲ್ಲಿ ಮಂಜುನಾಥರೆಡ್ಡಿ 40 ಮತ ಗಳಿಸಿ ಗೆಲುವು ಸಾಧಿಸಿದರು. ಎದುರಾಳಿ ಜಿ.ಎಸ್.ಚೌಡರೆಡ್ಡಿ 17 ಮತ ಪಡೆದು ಮುಖಭಂಗ ಅನುಭವಿಸಿದರು.

ಕೋಲಾರ ಮಹಿಳಾ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಆರ್.ಕಾಂತಮ್ಮ 23 ಮತ ಪಡೆದು ಗೆಲುವಿನ ನಗೆ ಬೀರಿದರು. ಪ್ರತಿಸ್ಪರ್ಧಿಗಳಾದ ಎಸ್.ಪ್ರಭಾವತಿ 22 ಮತ, ರತ್ನಮ್ಮ 5 ಹಾಗೂ ಶಾಂತಮ್ಮ ಶೂನ್ಯ ಮತ ಪಡೆದು ಸೋಲು ಅನುಭವಿಸಿದರು.

ನಿಷೇಧಾಜ್ಞೆ ಜಾರಿ: ಮತಗಟ್ಟೆ ಸುತ್ತಮುತ್ತ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಅಲ್ಲದೇ, ಮತಗಟ್ಟೆ ಮುಂಭಾಗದ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.