ADVERTISEMENT

ಕೋಚಿಮುಲ್‌ ಅಧ್ಯಕ್ಷಗಾದಿಗೆ ಜಿದ್ದಾಜಿದ್ದಿ; ಗೆಲುವಿಗಾಗಿ ತಂತ್ರ– ಪ್ರತಿತಂತ್ರ

ಇಂದು ಚುನಾವಣೆ

ಜೆ.ಆರ್.ಗಿರೀಶ್
Published 24 ಮೇ 2019, 19:56 IST
Last Updated 24 ಮೇ 2019, 19:56 IST
ಕೋಲಾರ ಹೊರವಲಯದಲ್ಲಿರುವ ಕೋಚಿಮುಲ್‌ ಆಡಳಿತ ಕಚೇರಿ.
ಕೋಲಾರ ಹೊರವಲಯದಲ್ಲಿರುವ ಕೋಚಿಮುಲ್‌ ಆಡಳಿತ ಕಚೇರಿ.   

ಕೋಲಾರ: ಕೋಲಾರ– ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಅಧ್ಯಕ್ಷ ಸ್ಥಾನಕ್ಕೆ ಶನಿವಾರ (ಮೇ 25) ಚುನಾವಣೆ ನಡೆಯಲಿದ್ದು, ಅಧ್ಯಕ್ಷಗಾದಿಗೆ ಜಿದ್ದಾಜಿದ್ದಿ ನಡೆದಿದೆ.

ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲೇ 2ನೇ ಸ್ಥಾನದಲ್ಲಿರುವ ಒಕ್ಕೂಟದಲ್ಲಿ ದಿನಕ್ಕೆ 10 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಪ್ರತಿನಿತ್ಯ ಕೋಟಿಗಟ್ಟಲೆ ವಹಿವಾಟು ನಡೆಯುವ ಒಕ್ಕೂಟದಲ್ಲಿ ಅಧ್ಯಕ್ಷರಾಗುವ ಹಟಕ್ಕೆ ಬಿದ್ದಿರುವ ನಿರ್ದೇಶಕರು ಗೆಲುವಿಗಾಗಿ ತಂತ್ರ– ಪ್ರತಿತಂತ್ರ ಎಣೆಯುತ್ತಿದ್ದಾರೆ.

ಒಕ್ಕೂಟದ ಆಡಳಿತ ಮಂಡಳಿಯಲ್ಲಿ ಕಾಂಗ್ರೆಸ್‌ ಪಾಳಯಕ್ಕೆ 10 ನಿರ್ದೇಶಕರ ಸಂಖ್ಯಾಬಲ ಹಾಗೂ ಜೆಡಿಎಸ್‌ಗೆ ಇಬ್ಬರು ನಿರ್ದೇಶಕರ ಸಂಖ್ಯಾಬಲವಿದೆ. ಚಿಂತಾಮಣಿ ಮಾಜಿ ಶಾಸಕ ಎಂ.ಸಿ.ಸುಧಾಕರ್‌ ಬೆಂಬಲಿಗರೊಬ್ಬರು ನಿರ್ದೇಶಕರಾಗಿದ್ದಾರೆ.

ADVERTISEMENT

ಅವಳಿ ಜಿಲ್ಲೆಯಿಂದ ಒಕ್ಕೂಟದ ಆಡಳಿತ ಮಂಡಳಿಗೆ ಆಯ್ಕೆಯಾಗಿರುವ 13 ಮಂದಿ ನಿರ್ದೇಶಕರು, ಒಬ್ಬರು ನಾಮ ನಿರ್ದೇಶಿತ ನಿರ್ದೇಶಕರು, ಕರ್ನಾಟಕ ಹಾಲು ಮಹಾಮಂಡಲದ (ಕೆಎಂಎಫ್‌) ಪ್ರತಿನಿಧಿ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕರು, ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ಪ್ರತಿನಿಧಿ ಹಾಗೂ ಸಹಕಾರ ಇಲಾಖೆ ಜಂಟಿ ನಿಬಂಧಕರು ಸೇರಿದಂತೆ ಒಟ್ಟಾರೆ 18 ಮಂದಿಗೆ ಅಧ್ಯಕ್ಷಗಾದಿಯ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕಿದೆ.

ಆಕಾಂಕ್ಷಿಗಳು: ಕೋಚಿಮುಲ್‌ನ ಮಾಜಿ ಅಧ್ಯಕ್ಷರಾದ ಕೆ.ವೈ.ನಂಜೇಗೌಡ, ಕಾಂತರಾಜ್‌, ಜಯಸಿಂಹ ಕೃಷ್ಣಪ್ಪ, ಕಾಡೇನಹಳ್ಳಿ ನಾಗರಾಜ್‌ ಅಧ್ಯಕ್ಷಗಾದಿ ಮೇಲೆ ಕಣ್ಣಿಟ್ಟಿದ್ದು, ನಿರ್ದೇಶಕರ ಮನವೊಲಿಕೆಗೆ ತೀವ್ರ ಕಸರತ್ತು ನಡೆಸಿದ್ದಾರೆ. ಮತ್ತೊಂದೆಡೆ ಮೊದಲ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿರುವ ಡಿ.ವಿ.ಹರೀಶ್‌, ಚಿಂತಾಮಣಿ ಮಾಜಿ ಶಾಸಕ ಎಂ.ಸಿ.ಸುಧಾಕರ್‌ರ ಕಟ್ಟಾ ಬೆಂಬಲಿಗ ವೈ.ಬಿ.ಅಶ್ವತ್ಥನಾರಾಯಣರೆಡ್ಡಿ ಸಹ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಆಕಾಂಕ್ಷಿಗಳು ಅಧ್ಯಕ್ಷ ಸ್ಥಾನಕ್ಕಾಗಿ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಒತ್ತಡ ಹೇರಿದ್ದು, ಅಭ್ಯರ್ಥಿ ಆಯ್ಕೆಯು ಕುತೂಹಲ ಕೆರಳಿಸಿದೆ. ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದಿರುವ ಅವಳಿ ಜಿಲ್ಲೆಗಳ ಶಾಸಕರು ತಮ್ಮ ಬೆಂಬಲಿಗ ನಿರ್ದೇಶಕರ ಪರ ಲಾಬಿ ನಡೆಸಿದ್ದಾರೆ.

ರಾಜಧಾನಿಯಲ್ಲಿ ಸಭೆ: ಅಧ್ಯಕ್ಷಗಾದಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರಿಗೆ ದೊಡ್ಡ ತಲೆ ನೋವಾಗಿದೆ. ಅಭ್ಯರ್ಥಿ ಆಯ್ಕೆ ವಿಚಾರವಾಗಿ ಸಹಮತ ಮೂಡದ ಕಾರಣಕ್ಕೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಶಿವಶಂಕರರೆಡ್ಡಿ, ಅವಳಿ ಜಿಲ್ಲೆಗಳ ಶಾಸಕರು ಬೆಂಗಳೂರಿನಲ್ಲಿ ಶುಕ್ರವಾರ ಒಕ್ಕೂಟದ ನಿರ್ದೇಶಕರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಸಭೆಯಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತವಾಗಿದ್ದು, ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಕಾದು ನೋಡುವ ತಂತ್ರ ಅನುಸರಿಸುತ್ತಿರುವ ಉಸ್ತುವಾರಿ ಸಚಿವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಸಚಿವ ಎಚ್‌.ಡಿ.ರೇವಣ್ಣ ಅವರೊಂದಿಗೆ ಸಮಾಲೋಚನೆ ನಡೆಸಿ ಅಭ್ಯರ್ಥಿ ಹೆಸರು ಅಂತಿಮಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಶನಿವಾರ ನಾಮಪತ್ರ ಸಲ್ಲಿಕೆಗೂ ಅರ್ಧ ತಾಸು ಮುನ್ನ ಅಭ್ಯರ್ಥಿ ಹೆಸರು ಪ್ರಕಟಿಸಲಾಗುತ್ತದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಬಣ ರಾಜಕೀಯ: ಕಾಂಗ್ರೆಸ್‌ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಬಣದ ನಡುವೆ ಅಧ್ಯಕ್ಷಗಾದಿಗೆ ತೀವ್ರ ಪೈಪೋಟಿ ನಡೆದಿದೆ. ಮುನಿಯಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಮಾಲೂರು ಶಾಸಕ ಹಾಗೂ ಕೋಚಿಮುಲ್‌ನ ನಿಕಟಪೂರ್ವ ಅಧ್ಯಕ್ಷ ನಂಜೇಗೌಡ ಅವರು ಮರು ಆಯ್ಕೆ ಬಯಸಿದ್ದಾರೆ. ಕೈ ಪಾಳಯದಲ್ಲಿ ಬಣ ರಾಜಕೀಯ ಜೋರಾಗಿದ್ದು, ಕದನ ಕುತೂಹಲ ರೋಚಕ ಘಟ್ಟ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.