ಶಾಸಕ ಕೊತ್ತೂರು
ಕೋಲಾರ: ‘ನನ್ನ ಜಾತಿ ಯಾವುದೆಂದು ಅಪ್ಪ, ಅಪ್ಪ, ಕುಟುಂಬ ತೀರ್ಮಾನ ಮಾಡುತ್ತದೆ. ಕೋಲಾರ ಗೆಜೆಟಿಯರ್ ತೀರ್ಮಾನ ಮಾಡುತ್ತಾರೆ. ಸದ್ಯ ನ್ಯಾಯಾಲಯದಲ್ಲಿ ನಡೆಯುತ್ತಿದೆ. ನನ್ನ ಜಾತಿ ವಿಷಯ ತೀರ್ಮಾನ ಮಾಡಲು ಅವರಾರು ಎಂಬುದು ನನಗೆ ಗೊತ್ತಿಲ್ಲ’ ಎಂದು ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ತಿರುಗೇಟು ನೀಡಿದರು.
ಎಸ್‌ಪಿ ಕಚೇರಿ ಆವರಣದಲ್ಲಿ ಶುಕ್ರವಾರ ಪೊಲೀಸ್ ಇಲಾಖೆಗೆ ವಾಹನ ಕೊಡುಗೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಾತಿ ಪ್ರಮಾಣಪತ್ರ ಪ್ರಕರಣ ಹೊಸದೇನಲ್ಲ. 2004ರ ಚುನಾವಣೆಯಿಂದ ನಡೆಯುತ್ತಿದೆ. ಅವರು ಆಗಿನಿಂದ ಮಾತನಾಡುತ್ತಿದ್ದಾರೆ. ನಿನ್ನೆ ಮೊನ್ನೆ ಮಾತನಾಡಿದ್ದರೆ ಅಚ್ಚರಿಪಡಬಹುದಿತ್ತು. ಅವರ ಕೆಲಸ ಅವರು ಮಾಡಲಿ. ಗೊತ್ತಿಲ್ಲದೆ ಅನೇಕ ವಿಚಾರ ನಡೆದಿದೆ’ ಎಂದರು.
ನಕಲಿ ಜಾತಿ ಪ್ರಮಾಣಪತ್ರ ಪಡೆದವರ ಮೇಲೆ ಕ್ರಮ ವಹಿಸಬೇಕೆಂದು ಮುಖ್ಯಮಂತ್ರಿ ಸಭೆಯಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಮಾಡಿರುವ ಪ್ರಸ್ತಾಪ ವಿಚಾರಕ್ಕೆ ಶಾಸಕರು ಈ ರೀತಿ ಪ್ರತಿಕ್ರಿಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಬೇಕೆಂಬ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿಕೆ ಕುರಿತು, ‘ಅವರು ಈ ನಡುವೆ ಅಲ್ಲಿ ಇಲ್ಲಿ ತುಂಬಾ ಮಾತನಾಡುತ್ತಿದ್ದಾರೆ. ಅವರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನನಗೆ ಆ ಬಗ್ಗೆ ಮಾತನಾಡಲು ಸಮಯವಿಲ್ಲ. ಕೋಲಾರ ತಾಲ್ಲೂಕಿನ ಸೀತಿಯಲ್ಲಿ ಭಾನುವಾರ ₹ 20 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಸಬೇಕಿದೆ’ ಎಂದರು.
‘ಅವರು ಈ ರೀತಿ ಹೇಳಿದರು, ಇವರು ಆ ರೀತಿ ಹೇಳಿದರು ಎಂದು ಮಾಧ್ಯಮದವರು ಕೇಳಬೇಡಿ. ಬದಲಾಗಿ ಕೋಲಾರಕ್ಕೆ ತಮ್ಮ ಕೊಡುಗೆ ಏನು ಎಂದು ಕೇಳಿ. ಈಚೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಕೂಡ ಇದೇ ಪ್ರಶ್ನೆ ಕೇಳಿದ್ದರು’ ಎಂದು ಹೇಳಿದರು.
‘ವೇಮಗಲ್–ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ನಾವೇನೂ ಎಡವಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಆ ಭಾಗದಲ್ಲಿ ನಮಗೆ 3,400 ವೋಟು ಬಂದಿತ್ತು. ಲೋಕಸಭೆ ಚುನಾವಣೆಯಲ್ಲಿ 2 ಸಾವಿರ ಪ್ಲಸ್ ಆಗಿತ್ತು. ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 2,600 ಪ್ಲಸ್ ಆಗಿದೆ. ಚುನಾವಣೆಯಲ್ಲಿ ಸೋತಿರಬಹುದು. ಬಹುಮತ ಪಡೆದಿರುವ ಬಿಜೆಪಿ–ಜೆಡಿಎಸ್ ಅಧಿಕಾರ ಹಿಡಿಯುತ್ತಾರೆ. ನಮ್ಮ ವೋಟು ಇನ್ನೂ ಹೆಚ್ಚೇ ಬಂದಿದೆ’ ಎಂದರು.
‘ಯಾವ ಚುನಾವಣೆ ಯಾವುದಕ್ಕೂ ದಿಕ್ಸೂಚಿ ಅಲ್ಲ. ಪ್ರತಿ ಬಾರಿ ಇದನ್ನೇ ಹೇಳುತ್ತಾರೆ. ನಾನು ಸ್ಪರ್ಧಿಸಿದಾಗ ಸೋಲುತ್ತಾರೆ ಎಂದಿದ್ದರು. ಆದರೆ, ಗೆದ್ದು ಬಂದೆ. ಪಟ್ಟಣ ಪಂಚಾಯಿತಿ ಚುನಾವಣೆ ವ್ಯಕ್ತಿ ಮೇಲೆ ಹೋಗುತ್ತದೆ’ ಎಂದು ತಿಳಿಸಿದರು.
‘ನಾವು ಏನು ಕೆಲಸ ಮಾಡಿದ್ದೇವೆ ಎಂಬುದನ್ನು ತೋರಿಸುತ್ತೇವೆ ಬನ್ನಿ. ಬಹಳಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಪತ್ರಕರ್ತರಿಗೆ ಸುಳ್ಳು ಹೇಳಲು ಸಾಧ್ಯವೇ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.