ADVERTISEMENT

ಕೋಲಾರ: ಕೆಪಿಸಿಸಿ ಸಾರಥಿಗೆ ಅದ್ಧೂರಿ ಸ್ವಾಗತ

ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರಾದ ಬಳಿಕ ಜಿಲ್ಲೆಗೆ ಮೊದಲ ಭೇಟಿ: ಕಾರ್ಯಕರ್ತರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 15:13 IST
Last Updated 1 ಮಾರ್ಚ್ 2021, 15:13 IST
ಕೋಲಾರ ಜಿಲ್ಲೆಗೆ ಸೋಮವಾರ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬೃಹತ್‌ ಹೂವಿನ ಹಾರ ಹಾಕಿ ಸ್ವಾಗತ ಕೋರಿದರು.
ಕೋಲಾರ ಜಿಲ್ಲೆಗೆ ಸೋಮವಾರ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬೃಹತ್‌ ಹೂವಿನ ಹಾರ ಹಾಕಿ ಸ್ವಾಗತ ಕೋರಿದರು.   

ಕೋಲಾರ: ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಡಿ.ಕೆ.ಶಿವಕುಮಾರ್‌ ಅವರಿಗೆ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ಅದ್ಧೂರಿ ಸ್ವಾಗತ ನೀಡಿದರು.

ರಸ್ತೆ ಮಾರ್ಗವಾಗಿ ಜಿಲ್ಲೆಗೆ ಬಂದ ಶಿವಕುಮಾರ್‌ ಅವರಿಗೆ ರಾಮಸಂದ್ರ ಗಡಿ ಮತ್ತು ವಡಗೂರು ಬಳಿ ಸ್ಥಳೀಯ ಕಾರ್ಯಕರ್ತರು, ಮುಖಂಡರು ಕ್ರೇನ್‌ ಮೂಲಕ ಬೃಹತ್‌ ಹೂವಿನ ಹಾರ ಹಾಕಿ ಸಂಭ್ರಮಿಸಿದರು. ಅಲ್ಲದೇ, ಬೆಳ್ಳಿ ಗದ್ದೆ, ಕತ್ತಿ ನೀಡಿ ಜೈಕಾರ ಕೂಗಿದರು.

2023ರ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್‌ ಪಾಳಯವು ರಾಜ್ಯದ ಮೂಡಣ ಬಾಗಿಲು ಎಂದೇ ಹೆಸರಾಗಿರುವ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆಯ ವಿನಾಯಕ ಮೂರ್ತಿಗೆ ಶಿವಕುಮಾರ್‌ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿತು.

ADVERTISEMENT

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಪಣ ತೊಟ್ಟಿರುವ ಶಿವಕುಮಾರ್‌ ತಮ್ಮ ರಾಜಕೀಯ ಗುರು ಎಸ್‌.ಎಂ.ಕೃಷ್ಣ ಅವರಂತೆಯೇ ರಾಜ್ಯದ ದೇವ ಮೂಲೆಯಾದ ಕುರುಡುಮಲೆಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾಂಚಜನ್ಯ ಮೊಳಗಿಸಿದರು.

ಬಹುಪಾಲು ರಾಜಕೀಯ ಪಕ್ಷಗಳು ಕುರುಡುಮಲೆ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಚುನಾವಣಾ ಪ್ರಚಾರ ಆರಂಭಿಸುವುದು ಹಿಂದಿನಿಂದ ನಡೆದುಕೊಂಡು ಬಂದಿರುವ ವಾಡಿಕೆ. ಮುಳಬಾಗಿಲು ಕ್ಷೇತ್ರದಿಂದ ಚುನಾವಣಾ ಪ್ರಚಾರ ಆರಂಭಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬ ನಂಬಿಕೆ ಪಕ್ಷಗಳು ಹಾಗೂ ರಾಜಕಾರಣಿಗಳಲ್ಲಿ ಬಲವಾಗಿ ಬೇರೂರಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮ್ಮದ್‌, ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ, ಜಿಲ್ಲೆಯಲ್ಲಿನ ಕಾಂಗ್ರೆಸ್‌ ಶಾಸಕರಾದ ಕೆ.ಆರ್‌.ರಮೇಶ್‌ಕುಮಾರ್‌, ಎಸ್‌.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಎಂ.ರೂಪಕಲಾ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಒಳಗೊಂಡಂತೆ ಪಕ್ಷದ ಮುಖಂಡರ ಪಡೆಯು ಕೆಪಿಸಿಸಿ ಸಾರಥಿಯ ಬೆನ್ನಿಗೆ ನಿಂತು ತೆರೆದ ವಾಹನದಲ್ಲಿ ಸಾಗಿದರು.

ಕುರುಡುಮಲೆ ದೇವಸ್ಥಾನದ ನಂತರ ಮುಳಬಾಗಿಲು ನಗರಕ್ಕೆ ತೆರಳಿದ ಕಾಂಗ್ರೆಸ್‌ ಪಡೆಯು ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿತು. ಬಳಿಕ ಹೈದರವಲ್ಲಿ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿತು. ಮುಖಂಡರು ಹೋದ ಕಡೆಯಲೆಲ್ಲಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಕಾಂಗ್ರೆಸ್‌ ಪರ ಘೋಷಣೆ ಕೂಗಿದರು.

ಪಕ್ಷದಲ್ಲಿ ಗೊಂದಲವಿಲ್ಲ: ಸುದ್ದಿಗಾರರ ಜತೆ ಮಾತನಾಡಿದ ಶಿವಕುಮಾರ್, ‘ದೇವರ ಪೂಜೆಗಾಗಿ ಜಿಲ್ಲೆಗೆ ಬಂದಿದ್ದೇನೆ. ರಾಜ್ಯಕ್ಕೆ ಆಗುತ್ತಿರುವ ವಿಘ್ನಗಳನ್ನು ನಿವಾರಿಸುವಂತೆ ದೇವರ ಬಳಿ ಕೋರಿದ್ದೇನೆ. ರಾಜ್ಯದಲ್ಲಿ ಉತ್ತಮ ಮಳೆ ಬೆಳೆ ಆಗಲಿ. ರಾಜ್ಯಕ್ಕೆ ಎದುರಾಗಿರುವ ಎಲ್ಲಾ ವಿಘ್ನಗಳನ್ನು ವಿನಾಯಕ ನಿವಾರಣೆ ಮಾಡುವ ನಂಬಿಕೆಯಿದೆ’ ಎಂದರು.

‘ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಮತ್ತು ಗುಂಪುಗಾರಿಕೆಯೂ ಇಲ್ಲ. ನಮ್ಮಲ್ಲಿ ಇರೋದು ಒಂದೇ ಗುಂಪು. ಅದು ಕಾಂಗ್ರೆಸ್ ಗುಂಪು. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮೊದಲ ಗುರಿ. ಬೆಂಗಳೂರಿನ ದೇವನಹಳ್ಳಿಯಿಂದ ಮಾರ್ಚ್‌ ೩ರಂದು ನಮ್ಮ ಪಾದಯಾತ್ರೆ ಆರಂಭವಾಗುತ್ತದೆ. ಈ ವರ್ಷ 100 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ಕೊಟ್ಟು ಪಕ್ಷ ಸಂಘಟನೆ ಮಾಡುತ್ತೇವೆ’ ಎಂದು ವಿವರಿಸಿದರು.

‘3 ಉಪ ಚುನಾವಣೆ ಬರಲಿದ್ದು, ತಯಾರಿ ಮಾಡುತ್ತೇವೆ. ರಾಜ್ಯ ಕಾಂಗ್ರೆಸ್‌ ಮುಖಂಡರಲ್ಲಿ ಬೇರೆ ಬೇರೆ ದಾರಿಗಳಿಲ್ಲ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ನಮ್ಮ ದಾರಿ ಕಾಂಗ್ರೆಸ್ ದಾರಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.