ADVERTISEMENT

ಕೆಆರ್‌ಐಡಿಎಲ್‌: ಮಿತಿ ಮೀರಿದ ಕಮಿಷನ್‌ ದಂಧೆ

ಕಳಪೆ ಕಾಮಗಾರಿ: ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಕೆಂಡಾಮಂಡಲ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 15:24 IST
Last Updated 6 ಜುಲೈ 2021, 15:24 IST
ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಕೋಲಾರದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು
ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಕೋಲಾರದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು   

ಕೋಲಾರ: ‘ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದಲ್ಲಿ (ಕೆಆರ್‌ಐಡಿಎಲ್‌) ಕಮಿಷನ್‌ ದಂಧೆ ಮಿತಿ ಮೀರಿದೆ. ನಿಗಮದ ಅಧಿಕಾರಿಗಳಿಗೆ ಕಾಮಗಾರಿಯ ಗುಣಮಟ್ಟಕ್ಕಿಂತ ಹಣ ಸಂಪಾದನೆಯೇ ಮುಖ್ಯವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಕೆಂಡಾಮಂಡಲರಾದರು.

ಇಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಕೆಆರ್‌ಐಡಿಎಲ್‌ನ ಬಹುತೇಕ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವುದಿಲ್ಲ. ಕಾಮಗಾರಿಗಳಲ್ಲಿ ಶೇ 30ರಷ್ಟು ಕಮಿಷನ್‌ ಪಡೆದರೆ ಗುಣಮಟ್ಟ ಕಾಯ್ದುಕೊಳ್ಳಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದರು.

‘ನಿಗಮದ ಅಧಿಕಾರಿಗಳು ಅಧಿಕೃತವಾಗಿ ಶೇ 16ರಷ್ಟು ಕಮಿಷನ್ ಪಡೆದರೆ ಶಾಸಕರು, ಸಂಸದರು ಸೇರಿದಂತೆ ಇತರರಿಗೆ ಅನಧಿಕೃತವಾಗಿ ಕಮಿಷನ್ ಕೊಡಬೇಕಾಗುತ್ತದೆ. ಕೆಆರ್‌ಐಡಿಎಲ್‌ ಕಾಮಗಾರಿಗಳ ಗುಣಮಟ್ಟ ಕಳಪೆ ಆಗಿರುತ್ತದೆ ಎಂಬ ಕಾರಣಕ್ಕಾಗಿಯೇ ನನ್ನ ಕ್ಷೇತ್ರದಲ್ಲಿ ನಿಗಮಕ್ಕೆ ಕಾಮಗಾರಿಗಳನ್ನು ಕೊಡುತ್ತಿಲ್ಲ’ ಎಂದರು.

ADVERTISEMENT

‘ಕಾಮಗಾರಿಗಳಲ್ಲಿ ಅಧಿಕೃತವಾಗಿ ಮತ್ತು ಅನಧಿಕೃತವಾಗಿ ಎಷ್ಟು ಕಮಿಷನ್ ಪಡೆಯುತ್ತೀರಾ?’ ಎಂದು ಸಚಿವರು ಕೆಆರ್‌ಐಡಿಎಲ್‌ ಕಾರ್ಯನಿರ್ವಾಹಕ ಎಂಜಿನಿಯರ್ ರವಿಶಂಕರ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ರವಿಶಂಕರ್‌, ‘ಜಿಲ್ಲೆಯಲ್ಲಿ ನಿಗಮದಿಂದ ವತಿಯಿಂದ ಕೈಗೊಂಡಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿವೆ’ ಎಂದು ಸಮರ್ಥಿಸಿಕೊಂಡರು. ಇದರಿಂದ ಸಿಡಿಮಿಡಿಗೊಂಡ ಸಚಿವರು, ‘ನಾನು ಸಿವಿಲ್ ಎಂಜಿನಿಯರ್ ಆಗಿದ್ದು, ಖುದ್ದು ಕಾಮಗಾರಿಗಳ ಸ್ಥಳಕ್ಕೆ ಬಂದು ಗುಣಮಟ್ಟ ಪರಿಶೀಲಿಸುತ್ತೇನೆ. ಕಾಮಗಾರಿ ಕಳಪೆ ಆಗಿದ್ದರೆ ನಿಮಗೆ ತಕ್ಕ ಶಾಸ್ತಿ ಮಾಡುತ್ತೇನೆ. ವಸ್ತುಸ್ಥಿತಿ ಹೇಳಿ’ ಎಂದು ಗುಡುಗಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕವಾದರೂ ಜನರಿಗೆ ಕುಡಿಯುವ ನೀರು ಹಾಗೂ ರಸ್ತೆ ಸೌಕರ್ಯ ಕಲ್ಪಿಸದಿದ್ದರೆ ಹೇಗೆ? ಹಲವು ಕಾಮಗಾರಿಗಳಿಗೆ ಅನುದಾನ ಬಾರದಿದ್ದರೂ ಅಧಿಕಾರಿಗಳು ಆ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಚಿವರ ಬಳಿ ಚರ್ಚಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿಗಾ ವಹಿಸಿ: ‘ಬೆಂಗಳೂರಿನಲ್ಲಿ ಕೈಗಾರಿಕೆಗಳ ತ್ಯಾಜ್ಯ ಬೆಳ್ಳಂದೂರು ಕೆರೆಗೆ ಸೇರಿದ್ದರಿಂದ ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಹೀಗಾಗಿ ಜಿಲ್ಲೆಯಲ್ಲಿ ಕೈಗಾರಿಕೆಗಳ ತ್ಯಾಜ್ಯ ಹಾಗೂ ಆಸ್ಪತ್ರೆಗಳ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಬಗ್ಗೆ ಅಧಿಕಾರಿಗಳು ಹೆಚ್ಚು ನಿಗಾ ವಹಿಸಬೇಕು’ ಎಂದು ಸೂಚನೆ ನೀಡಿದರು.

‘ನರೇಗಾ ಕಾಮಗಾರಿಗಳಲ್ಲಿ ಯಂತ್ರೋಪಕರಣ ಬಳಸುತ್ತಿದ್ದೀರಾ?’ ಎಂದು ಸಚಿವರ ಪ್ರಶ್ನಿಸಿದಾಗ ಉತ್ತರಿಸಿದ ಜಿ.ಪಂ ಸಿಇಒ ಎನ್‌.ಎಂ.ನಾಗರಾಜ್‌, ‘ಯಂತ್ರೋಪಕರಣ ಬಳಸಿ ಕಾಮಗಾರಿ ನಡೆಸುತ್ತಿರುವ ಬಗ್ಗೆ ಸಾಕಷ್ಟು ದೂರು ಬರುತ್ತಿವೆ. ಈ ಕಾರಣಕ್ಕೆ ವೈಯಕ್ತಿಕ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ’ ಎಂದರು.

ಮಳೆ ನೀರು ಕೊಯ್ಲು: ‘ಜಿಲ್ಲೆಯ 18 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ನೀರಿನ ಸಮಸ್ಯೆ ಪರಿಹರಿಸಲು ಪ್ರತಿ ಮನೆಯಲ್ಲೂ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕು. ಬಿಬಿಎಂಪಿ ಮಾದರಿಯಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ನೀಡುವ ಸಂದರ್ಭದಲ್ಲೇ ಕಡ್ಡಾಯವಾಗಿ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳುವಂತೆ ಷರತ್ತು ವಿಧಿಸಿ’ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್‌ಬಾಬು, ಕೆಜಿಎಫ್‌ ಪೊಲೀಸ್‌ ಜಿಲ್ಲಾ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ, ಉಪ ವಿಭಾಗಾಧಿಕಾರಿ ವಿ.ಸೋಮಶೇಖರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.