ADVERTISEMENT

ಕೃಷ್ಣ ಜನ್ಮಾಷ್ಟಮಿ ಬಹಿಷ್ಕಾರಕ್ಕೆ ತೀರ್ಮಾನ: ಗೋಕುಲ ನಾರಾಯಣಸ್ವಾಮಿ

ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಯಾದವ ಸಂಘದ ಹೆಸರು ಕಡೆಗಣನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 13:08 IST
Last Updated 1 ಸೆಪ್ಟೆಂಬರ್ 2018, 13:08 IST

ಕೋಲಾರ: ‘ಜಿಲ್ಲಾಡಳಿತದ ವತಿಯಿಂದ ಆಚರಿಸುತ್ತಿರುವ ಕೃಷ್ಣ ಜನ್ಮಾಷ್ಟಮಿ ಕಾರ್ಯಕಮದ ಆಹ್ವಾನ ಪತ್ರಿಕೆಯಲ್ಲಿ ಯಾದವ ಸಂಘದ ಹೆಸರು ಕಡೆಗಣಿಸಿದ್ದು, ಸಮುದಾಯದ ಮುಖಂಡರು ಕಾರ್ಯಕ್ರಮ ಬಹಿಷ್ಕರಿಸಲು ತೀರ್ಮಾನಿಸಿದ್ದೆವೆ’ ಎಂದು ಯಾದವ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಗೋಕುಲ ನಾರಾಯಣಸ್ವಾಮಿ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯ ಸರ್ಕಾರವು 4 ವರ್ಷಗಳಿಂದ ಕೃಷ್ಣ ಜನ್ಮಾಷ್ಟಮಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ನಡೆಸುತ್ತಿದೆ. ಈ ಬಾರಿ ಜಿಲ್ಲಾಡಳಿತವು ಕಾರ್ಯಕ್ರಮಕ್ಕೆ ಸಮುದಾಯದ ಮುಖಂಡರನ್ನು ಆಹ್ವಾನಿಸದೆ ಸಂಪೂರ್ಣ ಕಡೆಗಣಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲಾಡಳಿತವು ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ₹ 50 ಸಾವಿರ, ತಾಲ್ಲೂಕು ಮಟ್ಟದ ಕಾರ್ಯಕ್ರಮಕ್ಕೆ ₹ 25 ಸಾವಿರ ನಿಗದಪಡಿಸಿದೆ. ಆ ಹಣವನ್ನು ಕೊಡಗು ನೆರೆ ಸಂತ್ರಸ್ತರಿಗೆ ನೀಡುವ ಉದ್ದೇಶಕ್ಕಾಗಿ ಈ ಬಾರಿ ಕೃಷ್ಣ ಜನ್ಮಾಷ್ಟಮಿಯನ್ನು ಸರಳವಾಗಿ ಆಚರಿಸಲು ಸಂಘದ ಸಭೆಯಲ್ಲಿ ನಿರ್ಧರಿಸಲಾಗಿದೆ. ಪಲ್ಲಕ್ಕಿ ಮೆರವಣಿಗೆ ರದ್ದುಪಡಿಸಿ ಹಣವನ್ನು ಸರ್ಕಾರ ನೀಡುವ ಅನುದಾನದೊಂದಿಗೆ ಕಳುಹಿಸುತ್ತೇವೆ’ ಎಂದರು.

ADVERTISEMENT

‘ಕೃಷ್ಣ ಜನ್ಮಾಷ್ಟಮಿ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಉಪ ವಿಭಾಗಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಮಾತ್ರ ಹಾಜರಿದ್ದರು. ಇತರೆ ಯಾವುದೇ ಅಧಿಕಾರಿಗಳು ಸಭೆಗೆ ಬಂದಿರಲಿಲ್ಲ. ದೇವರಾಜ ಅರಸು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಹೆಸರು ಮುದ್ರಿಸಲಾಗಿತ್ತು. ಅದೇ ರೀತಿ ಕೃಷ್ಣ ಜನ್ಮಾಷ್ಟಮಿ ಆಹ್ವಾನ ಪತ್ರಿಕೆಯಲ್ಲಿ ಯಾದವ ಸಂಘದ ಹೆಸರು ಹಾಕುವಂತೆ ಕೋರಿದ್ದರೂ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ’ ಎಂದು ದೂರಿದರು.

ನೋವಾಗಿದೆ: ‘ಬಂಗಾರಪೇಟೆ, ಕೆಜಿಎಫ್, ಮಾಲೂರು ತಾಲ್ಲೂಕಿನ ಶಾಸಕರು ಸಮುದಾಯದ ಮುಖಂಡರ ಸಭೆ ಕರೆದು ಪೂರ್ವಭಾವಿ ಸಭೆ ನಡೆಸಿದ್ದಾರೆ. ಕೋಲಾರ, ಮುಳಬಾಗಿಲು ಹಾಗೂ ಶ್ರೀನಿವಾಸಪುರ ತಾಲ್ಲೂಕು ಶಾಸಕರಿಗೆ ಮತ ನೀಡಿರುವ ಸಮುದಾಯದವರು ನೆನಪಿಗೆ ಬರಲಿಲ್ಲವೇ?’ ಎಂದು ಪ್ರಶ್ನಿಸಿದರು.

‘ಆಹ್ವಾನ ಪತ್ರಿಕೆಯಲ್ಲಿ ಸಂಘದ ಹೆಸರಿಲ್ಲದ ಬಗ್ಗೆ ಶಾಸಕರು ತುಟಿ ಬಿಚ್ಚದಿರುವುದಿರುವುದರಿಂದ ಸಮುದಾಯಕ್ಕೆ ನೋವಾಗಿದೆ. ಜನಪ್ರತಿನಿಧಿಗಳ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯ ಖಂಡಿಸಿ ಕಾರ್ಯಕ್ರಮ ಬಹಿಷ್ಕರಿಸುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಯಾದವ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಆರ್.ಗೋಪಾಲ್, ಕೆ.ಎಂ.ಗೋಪಾಲ್, ವೆಂಕಟೇಶ್, ರಾಜ್ಯ ಕಾರ್ಯಕಾರಿ ಸದಸ್ಯ ಕೆ.ವಿ.ಶ್ರೀನಿವಾಸ ಯಾದವ್, ಮಂಜುನಾಥ್, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ವೆಂಕಟರಮಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.