ADVERTISEMENT

ಗಡಿಗೆ ಜಿಲ್ಲೆಗೆ ಕೃಷ್ಣೆ ಹರಿಸಲು ಒತ್ತಾಯ

ಜೆಡಿಎಸ್ ರಜತ ಮಹೋತ್ಸವದಲ್ಲಿ ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 5:18 IST
Last Updated 21 ಡಿಸೆಂಬರ್ 2025, 5:18 IST
ಕೆಜಿಎಫ್‌ ರಾಬರ್ಟ್‌ಸನ್‌ಪೇಟೆಯಲ್ಲಿ ಶನಿವಾರ ಜೆಡಿಎಸ್‌ ಪಕ್ಷದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಜೆಡಿಎಸ್‌ ಕೋರ್‌ ಸಮಿತಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ, ರಮೇಶ್‌ ಬಾಬು ಇದ್ದರು
ಕೆಜಿಎಫ್‌ ರಾಬರ್ಟ್‌ಸನ್‌ಪೇಟೆಯಲ್ಲಿ ಶನಿವಾರ ಜೆಡಿಎಸ್‌ ಪಕ್ಷದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಜೆಡಿಎಸ್‌ ಕೋರ್‌ ಸಮಿತಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ, ರಮೇಶ್‌ ಬಾಬು ಇದ್ದರು   

ಕೆಜಿಎಫ್‌: ರಾಬರ್ಟ್‌ಸನ್ ಪೇಟೆಯಲ್ಲಿ ಜೆಡಿಎಸ್ ಪಕ್ಷದ ರಜತ ಮಹೋತ್ಸವ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಯಿತು. 

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ‘ಎತ್ತಿನಹೊಳೆ ಯೋಜನೆಯನ್ನು ಜೆಡಿಎಸ್ ಮೊದಲಿನಿಂದಲೂ ವಿರೋಧಿಸಿಕೊಂಡೇ ಬಂದಿದೆ. ಈ ಯೋಜನೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಬದಲಿಗೆ ಕೃಷ್ಣಾ ನದಿ ನೀರನ್ನು ಕೋಲಾರ ಜಿಲ್ಲೆಗೆ ತರುವುದು ಉತ್ತಮ’ ಎಂದು ಪ್ರತಿಪಾದಿಸಿದರು. 

ಎತ್ತಿನಹೊಳೆ ಯೋಜನೆ ಮೂಲಕ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಯ ಭಾಗಗಳಿಗೆ ಕುಡಿಯುವ ನೀರು ಹರಿಸಲಾಗುತ್ತದೆ ಎನ್ನಲಾಗಿತ್ತು. ಆದರೆ, ಇದೀಗ ಈ ಯೋಜನೆಯಡಿ ನೀರು ಬರುತ್ತದೆಯೊ ಇಲ್ಲವೊ ಎಂಬ ಭಾವನೆ ಈ ಮೂರು ಜಿಲ್ಲೆಗಳ ಜನರಲ್ಲಿ ಮೂಡಿದೆ. ₹12 ಸಾವಿರ ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನಾ ವೆಚ್ಚವು ಇದೀಗ ₹40  ಸಾವಿರ ಕೋಟಿ ವೆಚ್ಚಕ್ಕೆ ತಲುಪಿದೆ. ಇಷ್ಟಾಗಿಯೂ, ನೀರು ಹರಿಯಲಿದೆ ಎಂಬ ಖಾತ್ರಿ ಇನ್ನೂ ಇಲ್ಲ ಎಂದು ಹೇಳಿದರು. 

ADVERTISEMENT

ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಸದನದಲ್ಲಿ ಸುಳ್ಳು ಹೇಳಿದ್ದಾರೆ. ಅವರನ್ನು ಮಂತ್ರಿಮಂಡಲದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು. 

‘ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗೆ ಅಕ್ರಮವಾಗಿ ಬಳಸಲಾಗುತ್ತಿದೆ. ಹಣದ ದುರುಪಯೋಗ ಆಗಿದೆ. ಜನಸಾಮಾನ್ಯರಿಗೆ ಸರ್ಕಾರವು ಗ್ಯಾರಂಟಿ ಕೊಡಲಿ, ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಪರಿಶಿಷ್ಟರ  ಹಣ ಬಳಸುವುದು ಸರಿಯಲ್ಲ’ ಎಂದರು. 

ಬಿಜಿಎಂಎಲ್‌ ಸಮಸ್ಯೆಯನ್ನು ಬಗೆಹರಿಸಲು ಅಂದಿನ ಸಂಸದ ಕೆ.ಎಚ್‌.ಮುನಿಯಪ್ಪ ಯತ್ನಿಸಲಿಲ್ಲ. ಇಂದು ಅವರ ಕುಡಿ ಇಲ್ಲಿ ಶಾಸಕರಾಗಿದ್ದಾರೆ. ಅವರಿಗೆ ಸಮಸ್ಯೆ ಬಗೆಹರಿಸುವ ಮನಸ್ಸೇ ಇಲ್ಲ ಎಂಬಂತೆ ಕಾಣುತ್ತಿದೆ ಎಂದು ಮುಖಂಡ ರಮೇಶಬಾಬು ದೂರಿದರು. 

ಈ ಮುನ್ನ ಜೆಡಿಎಸ್‌ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.