ಮಾಲೂರು: ‘ನೀನು ಮಾಡುತ್ತಿರುವ ಭ್ರಷ್ಟಾಚಾರಕ್ಕೆ ಬೇಸತ್ತು ನಿನ್ನ ಜೊತೆಯಲ್ಲಿರುವವರು ದೂರ ಸರಿಯುತ್ತಿದ್ದಾರೆ. ಇನ್ನೂ ತಾಲ್ಲೂಕಿನ ಜನ ನಿನ್ನ ವಿರುದ್ಧ ಸಿಡಿದೇಳುವ ಸಮಯ ಹತ್ತಿರದಲ್ಲಿದೆ’ ಎಂದು ಶಾಸಕ ಕೆ.ವೈ.ನಂಜೇಗೌಡ ವಿರುದ್ಧ ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ಗುಡುಗಿದರು.
ಶುಕ್ರವಾರ ನಗರದಲ್ಲಿ ಬಿಜೆಪಿ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದರು.
‘2001ರಲ್ಲಿ ಹೊಸಕೋಟೆಯಲ್ಲಿ ರೈಸ್ ಪುಲ್ಲಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ಐವರು ನಾವು ಆಟವಾಡುವ ಸ್ಥಳದಲ್ಲಿ ಇದ್ದ ಕಾರಣ ಅಲ್ಲಿರುವವರ ಮೇಲೆ ದೂರು ದಾಖಲಿಸಿದರು. ಅದರಲ್ಲಿ ನನ್ನ ಮೇಲೂ ಕೇಸ್ ದಾಖಲಾಗಿತ್ತು. ಅದು ಕುಲಾಸೆಯಾಗಿ ನಿರ್ದೋಶಿಯಾಗಿ ಹೊರ ಬಂದೆ. ಇನ್ನೂ ನಮ್ಮ ಗ್ರಾಮದಲ್ಲಿ ಗೋಮಾಳ ಅಕ್ರಮಿಸಿದ್ದೀರಿ ಎಂದಿದ್ದೀರಾ. ಅದು ಗೋಮಾಳ ಅಲ್ಲ ಗ್ರಾಮಠಾಣೆ. ಅಲ್ಲಿ ನಮ್ಮದೂ ಐದು ಗುಂಟೆ ಜಾಗವಿದೆ’ ಎಂದು ಸ್ಪಷ್ಟನೆ ನೀಡಿದರು.
‘ಶಾಸಕ ನಂಜೇಗೌಡ ಅವರೇ ಸುಖಾ ಸುಮ್ಮನೆ ನನ್ನ ಮೇಲೆ ಆರೋಪ ಮಾಡಬೇಡಿ. ಮಾಲೂರು ತಾಲ್ಲೂಕಿನಲ್ಲಿ ನನ್ನ ಅವಧಿಯಲ್ಲಿ ಏನಾದರೂ ಭ್ರಷ್ಟಾಚಾರ ನಡೆದಿದೆಯಾ? ತೋರಿಸಿ’ ಎಂದು ಸವಾಲು ಹಾಕಿದರು.
‘ಇನ್ನೂ ತಾಲ್ಲೂಕಿನಲ್ಲಿ ಏಳು ವರ್ಷದಿಂದ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಗ್ರಾಮ ಪಂಚಾಯಿತಿಯಿಂದ ತಾಲ್ಲೂಕು ಕಚೇರಿವರೆಗೆ ಜನಸಾಮಾನ್ಯರ ಕೆಲಸ ಆಗುತ್ತಿಲ್ಲ. ಎಲ್ಲಕ್ಕೂ ಲಂಚ ನೀಡಬೇಕು. ನಿಮಗೆ ಧೈರ್ಯವಿದ್ದರೆ ಈ ಬಗ್ಗೆ ವಿವರಣೆ ನೀಡಿ’ ಎಂದು ಸವಾಲು ಹಾಕಿದರು.
ಜಿಲ್ಲಾ ಅಧ್ಯಕ್ಷ ಓಂ ಶಕ್ತಿ ಚಲಪತಿ, ಪದ್ಮಾವತಿ, ಡಾ.ವೇಣುಗೋಪಾಲ್, ಟಿ.ಬಿ.ಕೃಷ್ಣಪ್ಪ, ಚಿನ್ನಸ್ವಾಮಿಗೌಡ, ಅಜ್ಗರ್, ಪುರ ನಾರಾಯಣ ಸ್ವಾಮಿ, ಕೂರಂಡಹಳ್ಳಿ ರಾಜಪ್ಪ, ಬೆಳ್ಳಾವಿ ಸೋಮಣ್ಣ, ವೇಮನ, ತಬಲ ಅಪ್ಪಿ, ಅನಿತಾ ನಾಗರಾಜ್, ವೆಂಕಟೇಶ್, ಮಡಿವಾಳ ಚಂದ್ರಶೇಖರ್, ಮಂಜುನಾಥಗೌಡ, ಮೂರ್ತಿ, ಮನೋಹರ್, ಅಂಬರೀಶ್, ಬೆಳ್ಳಾವಿ ಸೋಮಣ್ಣ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.