ಕೆಜಿಎಫ್: ಬೆಮಲ್‌ನಲ್ಲಿ ಗುತ್ತಿಗೆ ಕಾರ್ಮಿಕರಿಗೆ ಸಿಗಬೇಕಾದ ಸವಲತ್ತು ಪಡೆಯಲು ನಡೆಸಿದ ಹೋರಾಟದಲ್ಲಿ ಯಾವುದೇ ರೀತಿಯ ಪ್ರಯೋಜನ ಪಡೆಯಲು ಸಾಧ್ಯವಾಗಲಿಲ್ಲ. ಈ ನಿಟ್ಟಿನಲ್ಲಿ ಹೋರಾಟದ ನೇತೃತ್ವ ವಹಿಸಿದ್ದ ಸಿಐಟಿಯು ಮುಖಂಡರು ಕಾರ್ಮಿಕರನ್ನು ವಂಚಿಸಿದ್ದಾರೆ ಎಂದು ಸಿಪಿಐ ಮುಖಂಡ ಜ್ಯೋತಿಬಸು ಆರೋಪಿಸಿದರು.
ನಗರದ ಫೈಲೈಟ್ಸ್ ವೃತ್ತದಲ್ಲಿ ಗುರುವಾರ ಮೇ ದಿನಾಚರಣೆ ಅಂಗವಾಗಿ ಸಿಪಿಐ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರ ಸರ್ಕಾರಿ ಉದ್ಯಮವಾದ ಬೆಮಲ್‌ನಲ್ಲಿ ಗುತ್ತಿಗೆ ಕಾರ್ಮಿಕರಿಗೆ ಸವಲತ್ತು ನಿರಾಕರಿಸಲಾಗುತ್ತಿದೆ. ನವೆಂಬರ್ ತಿಂಗಳಲ್ಲಿ ದೊಡ್ಡ ಪ್ರಮಾಣದ ಹೋರಾಟ ನಡೆಯಿತು. 26 ದಿನಗಳ ಕಾಲ ನಡೆದ ಹೋರಾಟದಲ್ಲಿ ಭಾಗವಹಿಸಿದ್ದ ಸುಮಾರು 3,500 ಕಾರ್ಮಿಕರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ಹಲವು ಶಾಸಕರು, ಸಂಸದರು ಕೋರಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅವರಿಂದ ಏನೂ ಮಾಡಲಾಗಲಿಲ್ಲ ಎಂದು ದೂರಿದರು.
ಕೆಜಿಎಫ್ ಹೋರಾಟಕ್ಕೆ ಹೆಸರುವಾಸಿಯಾದ ಸ್ಥಳ. ದೊಡ್ಡ ಇತಿಹಾಸ ಇದೆ. ಇಂತಹ ಹೋರಾಟಗಳು ನಿರಂತರವಾಗಿ ನಡೆಯಬೇಕು. ರಾಜಕಾರಣಿಗಳನ್ನು ನಂಬಿದರೆ ಉಪಯೋಗವಿಲ್ಲ. 26 ದಿನಗಳ ಹೋರಾಟವನ್ನು ವ್ಯರ್ಥ ಮಾಡಲಾಯಿತು. ಹೋರಾಟ ಮುಗಿದು ಆರು ತಿಂಗಳಾದರೂ ಇದುವರೆಗೂ ಗೇಟ್ ಮೀಟಿಂಗ್ ಇಟ್ಟು ಏನು ಪ್ರಗತಿಯಾಗಿದೆ ಎಂಬ ಮಾಹಿತಿಯನ್ನು ಕಾರ್ಮಿಕರಿಗೆ ನೀಡಿಲ್ಲ ಎಂದು ಜ್ಯೋತಿಬಸು ಆರೋಪಿಸಿದರು.
ಮುಖಂಡರಾದ ಶ್ರೀಕುಮಾರ್, ಮುರಳಿ, ರಂಜಿತ್ ಕುಮಾರ್, ಪುಷ್ಪರಾಜ್,. ಸುಂದರಿ, ಶಿವಕುಮಾರ್, ವಿಜಯ್ ಪ್ರಭಾಗರನ್,, ವಿಕ್ರಂ, ಜಗನ್ನಾಥನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.