ADVERTISEMENT

ಬಂಗಾರಪೇಟೆ: ಅಂಗನವಾಡಿಗೆ ಅತಿಥಿಯಾದ ಕಾರ್ಯಕರ್ತೆ!

ವಾರಕ್ಕೊಮ್ಮೆ ಮಾತ್ರ ಕೇಂದ್ರಕ್ಕೆ ಭೇಟಿ l ಮಕ್ಕಳು ಪೌಷ್ಟಿಕ ಆಹಾರದಿಂದ ವಂಚಿತ: ಆರೋಪ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 7:27 IST
Last Updated 3 ಆಗಸ್ಟ್ 2025, 7:27 IST
ಬಂಗಾರಪೇಟೆ ತಾಲ್ಲೂಕಿನ ಡಿ.ಕೆ. ಹಳ್ಳಿ ಅಂಗನವಾಡಿ ಕೇಂದ್ರ ಮುಚ್ಚಿರುವುದು
ಬಂಗಾರಪೇಟೆ ತಾಲ್ಲೂಕಿನ ಡಿ.ಕೆ. ಹಳ್ಳಿ ಅಂಗನವಾಡಿ ಕೇಂದ್ರ ಮುಚ್ಚಿರುವುದು   

ಬಂಗಾರಪೇಟೆ: ತಾಲ್ಲೂಕಿನ ದೊಡ್ಡರುಕರಪನಹಳ್ಳಿ ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿವೆ. ಆದರೆ, ಎರಡೂ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಅಗತ್ಯವಿರುವ ಪೌಷ್ಟಿಕ ಆಹಾರ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 

ಅಂಗನವಾಡಿ ಕೇಂದ್ರಗಳಲ್ಲಿರುವ ಕಾರ್ಯಕರ್ತೆಯರು ಅರ್ಹ ಮಕ್ಕಳಿಗೆ ಪೌಷ್ಟಿಕಾಂಶ ಮತ್ತು ಇತರೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡುತ್ತಿಲ್ಲ. ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರು ವಾರಕ್ಕೊಮ್ಮೆ ಮಾತ್ರವೇ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಇದರಿಂದ ತಮ್ಮ ಮಕ್ಕಳು ಮತ್ತು ಗ್ರಾಮದಲ್ಲಿರುವ ಬಾಣಂತಿಯರು ಸರ್ಕಾರದಿಂದ ಅರ್ಹವಿರುವ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. 

ಸರ್ಕಾರವು ಅಂಗನವಾಡಿಗಳ ಮೂಲಕ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಲ್ಲಿರುವ ಜನರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೂರಕ ಪೌಷ್ಟಿಕ ಆಹಾರ, ಆರೋಗ್ಯ ತಪಾಸಣೆ, ಲಸಿಕೆ ಮತ್ತು ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣವನ್ನು ನೀಡುತ್ತದೆ. ಅಲ್ಲದೆ, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ವಿಶೇಷ ಕಾಳಜಿ ಮತ್ತು ಪೌಷ್ಟಿಕ ಆಹಾರವನ್ನೂ ಒದಗಿಸಲಾಗುವುದು. ಇದೇ ಕಾರಣಕ್ಕಾಗಿ ಪ್ರತಿಯೊಂದು ಗ್ರಾಮದಲ್ಲೂ ಅಂಗನವಾಡಿ ಕೇಂದ್ರಗಳನ್ನೂ ಸರ್ಕಾರ ಸ್ಥಾಪನೆ ಮಾಡಿದೆ. ಈ ಪ್ರಕಾರ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮದಲ್ಲಿರುವ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಬೇಕು. ಆದರೆ, ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆಯೇ ಗೈರು ಹಾಜರಾಗುತ್ತಾರೆ. ವಾರಕ್ಕೆ ಒಮ್ಮೆ ಬಂದರೆ, ಅದೇ ಹೆಚ್ಚು ಅನ್ನುತ್ತಾರೆ ಗ್ರಾಮಸ್ಥರು. 

ADVERTISEMENT

ಮತ್ತೊಂದೆ ಅಂಗನವಾಡಿ ಕೇಂದ್ರಗಳಲ್ಲಿರುವ ಫಲಾನುಭವಿಗಳಿಗಿಂತಲೂ ಹೆಚ್ಚಿನ ಫಲಾನುಭವಿಗಳನ್ನು ದಾಖಲೆಗಳಲ್ಲಿ ತೋರಿಸಲಾಗಿದೆ. ನೈಜ ಮತ್ತು ಅರ್ಹ ಫಲಾನುಭವಿಗಳಿಗೆ ಸರ್ಕಾರ ನಿಗದಿಪಡಿಸಿರುವ ಆಹಾರ ಪದಾರ್ಥ ಮತ್ತು ಮೊಟ್ಟೆಗಳನ್ನು ವಿತರಿಸದೆ, ವಂಚಿಸಲಾಗುತ್ತಿದೆ. ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ನೀಡಬೇಕು. ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಪೋಷಣ್ ಟ್ರ್ಯಾಕ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ಅಂಗನವಾಡಿ ಕಾರ್ಯಕರ್ತೆಯರು ‘ಪೋಷಣ್ ಟ್ರ್ಯಾಕ್‌’ನಲ್ಲಿ ಸುಳ್ಳು ಮಾಹಿತಿಗಳನ್ನು ಅಪ್ಲೋಡ್ ಮಾಡುವ ಮೂಲಕ ಸರ್ಕಾರದ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ವಿತರಣೆ ಮಾಡುತ್ತಿರುವ ಆಹಾರ ಪದಾರ್ಥಗಳ ಪ್ರಮಾಣ ಮತ್ತು ಫಲಾನುಭವಿಗಳನ್ನು ಪರಿಶೀಲನೆ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. 

ಬಂಗಾರಪೇಟೆ ತಾಲ್ಲೂಕಿನ ಡಿ.ಕೆ. ಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಫಲಾನುಭವಿಗಳಿಗೆ ಮೂರು ತಿಂಗಳಿಗಾಗಿ ನೀಡಿರುವ ಪೌಷ್ಟಿಕಾಂಶ ಆಹಾರ ಪದಾರ್ಥಗಳು ಮತ್ತು ಮೊಟ್ಟೆ
ಹರೀಶ್ ರೈತ
ಕೆ.ಎಂ. ರವೀಂದ್ರಕುಮಾರ್
ಮುನಿರಾಜು ಶಿಶು ಅಭಿವೃದ್ದಿ ಯೋಜನಾಧಿಕಾರಿ ಬಂಗಾರಪೇಟೆ
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಗರ್ಭಿಣಿಯರು ಮತ್ತು ಬಾಣಂತಿಯರಿಗೆ ನೀಡಬೇಕಾದ ಆಹಾರ ಪದಾರ್ಥಗಳನ್ನು ನೀಡದ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಆದರೆ ಏನೂ ಪ್ರಯೋಜನವಾಗಿಲ್ಲ 
ರವೀಂದ್ರ ಕುಮಾರ್ ಕೆ.ಎಂ ಗ್ರಾಮಸ್ಥ
ಅಂಗನವಾಡಿ ಕೇಂದ್ರವು ಬೆಳಗ್ಗೆ 9.30ಕ್ಕೆ ಆರಂಭವಾಗಿ ಮಧ್ಯಾಹ್ನ 3.30ರವರೆಗೆ ತೆರೆಯಬೇಕು. ಆದರೆ ಈ ನಿಯಮವನ್ನು ಗಾಳಿಗೆ ತೂರಲಾಗಿದ್ದು ವಾರಕ್ಕೆ ಒಮ್ಮೆ ಮಾತ್ರ ಅಂಗನವಾಡಿ ಕಾರ್ಯಕರ್ತೆಯರು ಬರುತ್ತಾರೆ
ಹರೀಶ್, ರೈತ
3 ತಿಂಗಳಿಗೊಮ್ಮೆ ಆಹಾರ ಪದಾರ್ಥ
ಅಂಗನವಾಡಿ ಕೇಂದ್ರದ ವ್ಯಾಪ್ತಿಯಲ್ಲಿರುವ ಮಕ್ಕಳು ಸೇರಿದಂತೆ ಫಲಾನುಭವಿಗಳಿಗೆ ವಾರಕ್ಕೊಮ್ಮೆ ಆಹಾರ ಪದಾರ್ಥ ವಿತರಿಸಬೇಕು ಎಂಬ ನಿಯಮವಿದೆ. ಆದರೆ ಮೂರು ತಿಂಗಳಿಗೊಮ್ಮೆ ಆಹಾರ ಪದಾರ್ಥ ವಿತರಿಸಲಾಗುತ್ತಿದೆ. ಅಲ್ಲದೆ ಇಲಾಖೆ ನಿಗದಿ ಮಾಡಿದ ಪ್ರಮಾಣಕ್ಕಿಂತಲೂ ಕಡಿಮೆ ಆಹಾರ ಪದಾರ್ಥ ವಿತರಿಸಲಾಗುತ್ತಿದೆ ಎಂದು ಕೂಲಿ ಕಾರ್ಮಿಕ ಚಲಪತಿ ಎಂಬುವರು ಅಳಲು ತೋಡಿಕೊಂಡರು.  ತಪ್ಪಿತಸ್ಥರ ವಿರುದ್ಧ ಕ್ರಮ ಖಚಿತ ಡಿ.ಕೆ. ಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಅಂಗನವಾಡಿ ಕಾರ್ಯಕರ್ತೆ ವಿರುದ್ಧದ ಆರೋಪಗಳು ನನ್ನ ಗಮನಕ್ಕೆ ಬಂದಿದೆ. ಅಂಗನವಾಡಿ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಲಾಗುವುದು. ಫಲಾನುಭವಿಗಳು ಮತ್ತು ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ ವಿತರಣೆಯ ದಾಖಲೆಗಳನ್ನು ಪರಿಶೀಲಿಸುತ್ತೇವೆ. ವ್ಯತ್ಯಾಸಗಳಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮುನಿರಾಜು ಶಿಶು ಅಭಿವೃದ್ದಿ ಯೋಜನಾಧಿಕಾರಿ ಬಂಗಾರಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.