ADVERTISEMENT

ಬೇತಮಂಗಲ | ಸಣ್ಣ ವ್ಯಾಪಾರಿಗಳಿಗೆ ಸೌಲಭ್ಯಗಳ ಕೊರತೆ: ಮಳೆ ಗಾಳಿ ಬಿಸಿಲಿಗೆ ಹೈರಾಣು

​ಪ್ರಜಾವಾಣಿ ವಾರ್ತೆ
Published 15 ಮೇ 2025, 7:08 IST
Last Updated 15 ಮೇ 2025, 7:08 IST
ಬೇತಮಂಗಲ ಗ್ರಾಮದ ಸಂತೆ ಮೈದಾನದಲ್ಲಿ ಸಣ್ಣ ಸಣ್ಣ ವ್ಯಾಪಾರಿಗಳು ತಾತ್ಕಾಲಿಕ ಶೆಡ್ ಗಳಲ್ಲಿ ದಿನ ನಿತ್ಯದ ವ್ಯಾಪಾರ ನಡೆಸುತ್ತಿದ್ದಾರೆ
ಬೇತಮಂಗಲ ಗ್ರಾಮದ ಸಂತೆ ಮೈದಾನದಲ್ಲಿ ಸಣ್ಣ ಸಣ್ಣ ವ್ಯಾಪಾರಿಗಳು ತಾತ್ಕಾಲಿಕ ಶೆಡ್ ಗಳಲ್ಲಿ ದಿನ ನಿತ್ಯದ ವ್ಯಾಪಾರ ನಡೆಸುತ್ತಿದ್ದಾರೆ   

ಬೇತಮಂಗಲ: ಸಣ್ಣ ವ್ಯಾಪಾರ ವಹಿವಾಟಿನ ಮೂಲಕ ಜೀವನ ಕಟ್ಟಿಕೊಂಡಿರುವ ಬಡ ಕುಟುಂಬಗಳ, ಬೀದಿಬದಿಯ ಸಣ್ಣ ವ್ಯಾಪಾರಸ್ಥರ ಗೋಳು ಕೇಳುವವರಿಲ್ಲ. ಸೂಕ್ತ ನೆರಳು, ಕನಿಷ್ಠ ಸೌಕರ್ಯಗಳಿಲ್ಲದೇ ಮಳೆ ಗಾಳಿ ಬಿಸಿಲಿಗೆ ಹೈರಾಣಾಗಿದ್ದಾರೆ.

ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲೇ ದೊಡ್ಡ ಗ್ರಾಮ ಪಂಚಾಯಿತಿ ಹಾಗೂ ಹೋಬಳಿ ಕೇಂದ್ರ ಮತ್ತು ಒಂದು ಕಾಲದಲ್ಲಿ ವಿಧಾನಸಭಾ ಕ್ಷೇತ್ರವಾದ ಬೇತಮಂಗಲದಲ್ಲಿ ಸಣ್ಣ ವ್ಯಾಪಾರಿಗಳ ಸಂಖ್ಯೆ ದೊಡ್ಡದಿದೆ. ಆದರೆ ಸೂಕ್ತ ಸೌಕರ್ಯಗಳು ಇಲ್ಲದೆ ಪ್ರತಿನಿತ್ಯ ಪರದಾಡುತ್ತಿದ್ದಾರೆ. 

ಸಂತೆ ಮೈದಾನದಲ್ಲಿ ಸಣ್ಣ ವ್ಯಾಪಾರಿಗಳಾದ ತರಕಾರಿ, ಹೂವು, ಹಣ್ಣು ಅಂಗಡಿ ವ್ಯಾಪಾರಿಗಳು ತಾತ್ಕಾಲಿಕವಾಗಿ ಶೆಡ್ಡುಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ ಸಣ್ಣ ಗಾಳಿ ಮಳೆಗೂ ಶೆಡ್‌ ಹಾರಿ ಹೋಗುವ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

ADVERTISEMENT

ಬೇತಮಂಗಲದಲ್ಲಿ ಸಂತೆ ಮೈದಾನಕ್ಕೆಂದೇ ಸರ್ಕಾರದ ಜಾಗವನ್ನು ಗುರುತಿಸಿ ಕೊಟ್ಟಿದೆ. ಸಂಬಂಧಿಸಿದ ಇಲಾಖೆಯವರು ವ್ಯಾಪಾರಿಗಳಿಗೆ ಸೂಕ್ತ ನೆರಳಿನ ವ್ಯವಸ್ಥೆ ಮಾಡಿಕೊಟ್ಟಿಲ್ಲ. 

ಸಂತೆ ವ್ಯಾಪಾರಿಗಳಿಗಾಗಿ ಈಗಾಗಲೇ ಗ್ರಾಮ ಪಂಚಾಯಿತಿಯ ನರೇಗಾ ಯೋಜನೆಯಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಇದರಿಂದ ವ್ಯಾಪಾರಸ್ಥರು, ಅದರಲ್ಲೂ ಮಹಿಳೆಯರು ಹೇಳಿಕೊಳ್ಳಲಾಗದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಬೇತಮಂಗಲ ಗ್ರಾಮ ಪಂಚಾಯಿತಿಯಿಂದ ಪ್ರತಿ ವರ್ಷವೂ ಸಂತೆ ಹರಾಜು ಪ್ರಕ್ರಿಯೆ ಮೂಲಕ ಗ್ರಾಮ ಪಂಚಾಯಿತಿಗೆ ಅಂಗಡಿ ವ್ಯಾಪಾರಸ್ಥರಿಂದ ಆದಾಯ ಮಾತ್ರ ಸಂಗ್ರಹವಾಗುತ್ತದೆ. ಆದರೆ ಸಣ್ಣ ವ್ಯಾಪಾರಸ್ಥರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. 

ಕೆಜಿಎಫ್ ವಿಧಾನ ಸಭಾ ಕ್ಷೇತ್ರದ ಶಾಸಕಿ ರೂಪಕಲಾ ಶಶಿಧರ್ ಅವರು ಬೇತಮಂಗಲ ಗ್ರಾಮಕ್ಕೆ ಭೇಟಿ ನೀಡಿದಾಗ ಪ್ರತಿ ಬಾರಿಯೂ ಸಣ್ಣ ಅಂಗಡಿ ವ್ಯಾಪಾರಿಗಳು ಶಾಸಕರ ಬಳಿ ತಮ್ಮ ನೋವು ತೋಡಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ವ್ಯಾಪಾರಿಗಳು ಬೇಸರ ತೋಡಿಕೊಳ್ಳುತ್ತಾರೆ.

ಬೇತಮಂಗಲ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಬೇಕು ಎನ್ನುವ ಕೂಗು ಇದೆ. ಆದರೆ ಗ್ರಾಮ ಪಂಚಾಯಿತಿಗೆ ಆದಾಯ ತರುವ ವ್ಯಾಪಾರಸ್ಥರಿಗೆ ಮೂಲ ಸೌಕರ್ಯಗಳು ಇಲ್ಲದಿರುವುದು ದುರದೃಷ್ಟ ಎನ್ನುವುದು ವ್ಯಾಪಾರಿಗಳ ದೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.