ADVERTISEMENT

ಶ್ರೀನಿವಾಸಪುರ: ಶತಮಾನದ ಶಾಲೆಗೆ ಬೇಕು ಮೂಲಸೌಕರ್ಯ

ಆರ್.ಚೌಡರೆಡ್ಡಿ
Published 11 ಡಿಸೆಂಬರ್ 2023, 7:22 IST
Last Updated 11 ಡಿಸೆಂಬರ್ 2023, 7:22 IST
ಹಾನಿಗೊಂಡಿರುವ ಶಾಲಾ ಗೋಡೆ
ಹಾನಿಗೊಂಡಿರುವ ಶಾಲಾ ಗೋಡೆ   

ಶ್ರೀನಿವಾಸಪುರ: ಪಟ್ಟಣದ ಶತಮಾನದಷ್ಟು ಹಳೆಯದಾದ ಕರ್ನಾಟಕ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಸಮಸ್ಯೆಗಳ ಸುಳಿಯಲ್ಲಿ ಸೊರಗುತ್ತಿದೆ.

ಈ ಸರ್ಕಾರಿ ಶಾಲೆ ಉತ್ತಮ ಗುಣಮಟ್ಟದ ಶಿಕ್ಷಣ ನಿಡುವಲ್ಲಿ ತಾಲ್ಲೂಕಿನಲ್ಲೇ ಮುಂಚೂಣಿಯಲ್ಲಿದೆ. ಸರ್ಕಾರಿ ಶಾಲೆಗಳು ಮಕ್ಕಳ ಕೊರತೆಯಿಂದ ಬಣಗುಡುತ್ತಿರುವಾಗ, ಈ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ 438 ಮಕ್ಕಳು ಕಲಿಯುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ.

ಮೂಲಸೌಕರ್ಯದ ಕೊರತೆ ನಡುವೆಯೂ ಈ ಶಾಲೆ, ರಾಜ್ಯಮಟ್ಟದ ಸ್ವಚ್ಛ ವಿದ್ಯಾಲಯ ಪುರಸ್ಕಾರ ಹಾಗೂ ಸ್ವಾಭಿಮಾನಿ ಸಾರ್ವಜನಿಕ ಶಾಲಾ ಪ್ರಶಸ್ತಿ ಪಡೆದುಕೊಂಡಿದೆ. ಶಾಲಾವರಣದಲ್ಲಿ ಗಿಡ ಮರ ಬೆಳೆಸಲಾಗಿದ್ದು ಹಸಿರು ಪರಿಸರ ಕಂಗೊಳಿಸುತ್ತಿದೆ.

ADVERTISEMENT
ಸಿಮೆಂಟ್ ಕಳಚಿದ ತರಗತಿ ಕೊಠಡಿ ಚಾವಣಿ

ಮೂಲಸೌಕರ್ಯದ ಕೊರತೆಯಿಂದಾಗಿ ಜನಪ್ರತಿನಿಧಿಗಳು ಶಿಫಾರಸು ಮಾಡಿದ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪ್ರತಿ ವರ್ಷ ಶಾಲೆಯಲ್ಲಿ ದಾಖಲಾತಿ ಬಯಸಿ ಬರುವ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ವಾಪಸ್ ಕಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಶಾಲೆಯ ಮುಖ್ಯ ಶಿಕ್ಷಕ ಎಂ.ಬೈರೇಗೌಡ ಅವರ ಅಳಲು.

ಶಾಲೆಯಲ್ಲಿ ಒಟ್ಟು 17 ತರಗತಿ ಕೊಠಡಿಗಳಿವೆ. ಆಪೈಕಿ 6 ಕೊಠಡಿಗಳು ಶಿಥಿಲಗೊಂಡು ಹಾಳಾಗಿವೆ. ಈ ಕೊಠಡಿಗಳ ಗೋಡೆ ಕುಸಿಯುವ ಹಂತ ತಲುಪಿದೆ. ಶಾಲೆಯ ಬಹುತೇಕ ಕೊಠಡಿಗಳ ಮೇಲ್ಚಾವಣಿ ಸಿಮೆಂಟ್ ಉದುರಿ ನೆಲಕಚ್ಚಿದೆ. 1ರಿಂದ 8ನೇ ತರಗತಿ ವರೆಗೆ 8 ಇಂಗ್ಲೀಷ್ ಮಾಧ್ಯಮ ಹಾಗೂ 8 ಕನ್ನಡ ಮಾಧ್ಯಮ ಸೇರಿದಂತೆ ಒಟ್ಟು 16 ತರಗತಿಗಳಿವೆ. ಶಾಲೆಗೆ 14 ಶಿಕ್ಷಕ ಹುದ್ದೆಗಳು ಮಂಜೂರಾಗಿದ್ದರೂ, 11 ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಪೈಕಿ 4 ಮಂದಿ ಅತಿಥಿ ಶಿಕ್ಷಕರು. ಇರುವ ಶಿಕ್ಷಕರಿಗೆ ಬಿಡುವಿಲ್ಲದ ಕೆಲಸ. ಶಿಕ್ಷಕರು ರಜೆ ಪಡೆದರೆ ಅವರ ತರಗತಿಗಳು ಖಾಲಿ ಬಿಡಬೇಕಾದ ಪರಿಸ್ಥಿತಿ ಸಾಮಾನ್ಯವಾಗಿದೆ.

ಶಾಲೆಯ ಬಟ್ಟೆ ಕಾಂಪೌಂಡ್

ಶಾಲೆಯಲ್ಲಿ 438 ವಿದ್ಯಾರ್ಥಿಗಳಿದ್ದರೂ ಆಟದ ಮೈದಾನವಿಲ್ಲ. ಶಾಲೆಯ ಪಕ್ಕದಲ್ಲಿ ಶಾಲೆಗೆ ಸೇರಿದ ಜಮೀನು ಇದ್ದರೂ, ಪ್ರಭಾವಿಗಳ ಕೈವಾಡದಿಂದ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶಾಲೆಗೆ ಪೂರ್ಣ ಪ್ರಮಾಣದ ಕಾಂಪೌಂಡ್ ಇಲ್ಲದ ಪರಿಣಾಮವಾಗಿ ಶಾಲಾವರಣ ರಾತ್ರಿ ಹೊತ್ತು ಕುಡುಕರ ಅಡ್ಡೆಯಾಗಿ ಮಾರ್ಪಡುತ್ತದೆ. ಶಾಲೆ ಪ್ರಾರಂಭಕ್ಕೆ ಮುನ್ನ ಖಾಲಿ ಮದ್ಯದ ಬಾಟಲಿ ಹಾಗೂ ತಿಂದೆಸೆದ ಪ್ಲಾಸ್ಟಿಕ್ ಪೇಪರ್ ತೆರವುಗೊಳಿಸುವುದು ಶಿಕ್ಷಕರಿಗೆ ಹೆಚ್ಚುವರಿ ಕೆಲಸವಾಗಿ ಪರಿಣಮಿಸಿದೆ.

ಶಾಲೆ ಪಕ್ಕದ ಚರಂಡಿ

ವಿದ್ಯಾರ್ಥಿಗಳು ಪಟ್ಟಣದ ಎಂ.ಜಿ. ರಸ್ತೆಯಿಂದ ಶಾಲೆಗೆ ಬರಲು ಅಗತ್ಯವಾದ ರಸ್ತೆ ಇಲ್ಲ. ಶಾಲೆ ಹಿಂದೆ ರಸ್ತೆಗಾಗಿ ಮೀಸಲಾದ ಜಾಗದಲ್ಲಿ ಖಾಸಗಿಯವರು ಪೆಟ್ಟಿಗೆ ಅಂಗಡಿ ಇಟ್ಟಿದ್ದಾರೆ. ಹಿಂಭಾಗದ ರಸ್ತೆಯನ್ನೂ ಬಿಡದೆ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಚರಂಡಿಗಳು ಕೊಳೆತು ನಾರುತ್ತಿವೆ. ದುರ್ನಾತ ಬೀರುತ್ತಿರುವ ಚರಂಡಿಗಳಿಂದಾಗಿ ಅನಾರೋಗ್ಯಕರ ಪರಿಸರ ನಿರ್ಮಾಣವಾಗಿದೆ. ಸೊಳ್ಳೆ ಕಾಟ ಹೆಚ್ಚಿದೆ. ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಪಾಠ ಕೇಳಬೇಕಾಗಿ ಬಂದಿದೆ.

ಶಾಲೆ ಹಿಂಭಾಗದ ರಸ್ತೆ ಬದಿಯಲ್ಲಿ ಕೊಳೆತು ನಾರುತ್ತಿರುವ ಚರಂಡಿ

ಕ್ಷೇತ್ರದ ಶಾಸಕರೇ ಪೋಷಕರಾಗಿರುವ ಕರ್ನಾಟಕ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪರಿಸ್ಥಿತಿಯೇ ಹೀಗಾದರೆ, ಉಳಿದ ಶಾಲೆಗಳ ಗತಿಯೇನು? ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲದಂಥ ವ್ಯವಸ್ಥೆ ರೂಪಿಸಲು ಶಕ್ತಿಮೀರಿ ಶ್ರಮಿಸುತ್ತಿರುವ ಶಾಲೆಯ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರಿಗೆ ಯಾರೊಬ್ಬರೂ ಬೆಂಬಲವಾಗಿ ನಿಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂಬುದು ಪೋಷಕರ ಅಭಿಪ್ರಾಯ.

ಎಂ. ಬೈರೇಗೌಡ
ಶಾಲಾಭಿವೃದ್ಧಿ ಬಗ್ಗೆ ನಿಲಕ್ಷ್ಯ ಧೋರಣೆ
ಶಾಲಾ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿರುವ ಪೆಟ್ಟಿಗೆ ಅಂಗಡಿ ತೆರವುಗೊಳಿಸಿ ಶಾಲಾ ಜಮೀನು ಹದ್ದುಬಸ್ತು ಮಾಡಿಕೊಡುವಂತೆ ತಹಶೀಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಮಾಡಲಾಗಿದೆ. ಆದರೆ ಅವರು ಕ್ರಮ ಕೈಗೊಳ್ಳುತ್ತಿಲ್ಲ. ಶಾಲಾಭಿವೃದ್ಧಿಗೆ ಶಾಸಕರ ನಿಧಿಯಿಂದ ₹ 4 ಲಕ್ಷ ಮಂಜೂರಾಗಿದ್ದರೂ ಕಾಮಗಾರಿ ಪ್ರಾರಂಭಿಸುತ್ತಿಲ್ಲ. ತಮಗೆ ಬೇಕಾದ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಿಕೊಳ್ಳುವಂತೆ ಶಿಫಾರಸು ಪತ್ರ ನೀಡುವ ಜನಪ್ರತಿನಿಧಿಗಳು ಶಾಲಾಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಎಂ.ಬೈರೇಗೌಡ ಮುಖ್ಯ ಶಿಕ್ಷಕ
ಬಿ.ಸಿ. ಮುನಿಲಕ್ಷ್ಮಯ್ಯ
ಶಾಲೆಗೆ ಶಕ್ತಿ ತುಂಬಲಾಗುವುದು
ಶಾಲೆಗೆ ಭೇಟಿ ನೀಡಿ ಕುಂದು ಕೊರತೆ ವಿಚಾರಿಸಿದ್ದೇನೆ. ಶಿಕ್ಷಕರ ಕೊರತೆ ನೀಗಲು ಪ್ರಯತ್ನಿಸುತ್ತೇನೆ. ಕಟ್ಟಡ ನಿರ್ಮಾಣ ಮತ್ತಿತರ ಸಮಸ್ಯೆಗಳ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಉತ್ತಮ ಗುಣಮಟ್ಟದ ಬೋಧನೆಯಿಂದಾಗಿ ಪೋಷಕರು ಹಾಗೂ ವಿದ್ಯಾರ್ಥಿಗಳ ಗಮನ ಸೆಳೆದಿರುವ ಈ ಶಾಲೆಯ ಅಭಿವೃದ್ಧಿಗೆ ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಶತಮಾನ ಕಂಡ ಶಾಲೆಗೆ ಶಕ್ತಿ ತುಂಬಲಾಗುವುದು. ಬಿ.ಸಿ.ಮುನಿಲಕ್ಷ್ಮಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.