ADVERTISEMENT

ಮುನಿದ ವರುಣ ದೇವ: ಬಿತ್ತನೆ ಕುಂಠಿತ

ಜಿಲ್ಲೆಯ ಅನ್ನದಾತರಲ್ಲಿ ನಿರಾಸೆಯ ಕಾರ್ಮೋಡ

ಜೆ.ಆರ್.ಗಿರೀಶ್
Published 24 ಜುಲೈ 2019, 13:51 IST
Last Updated 24 ಜುಲೈ 2019, 13:51 IST
ಕೋಲಾರ ತಾಲ್ಲೂಕಿನ ಅಮ್ಮೇರಹಳ್ಳಿಯಲ್ಲಿ ಜಮೀನು ಉಳುಮೆ ಮಾಡಿರುವ ರೈತರು ಅನಾವೃಷ್ಟಿ ಕಾರಣಕ್ಕೆ ಬಿತ್ತನೆ ಮಾಡದೆ ಬಿಟ್ಟಿರುವುದು.
ಕೋಲಾರ ತಾಲ್ಲೂಕಿನ ಅಮ್ಮೇರಹಳ್ಳಿಯಲ್ಲಿ ಜಮೀನು ಉಳುಮೆ ಮಾಡಿರುವ ರೈತರು ಅನಾವೃಷ್ಟಿ ಕಾರಣಕ್ಕೆ ಬಿತ್ತನೆ ಮಾಡದೆ ಬಿಟ್ಟಿರುವುದು.   

ಕೋಲಾರ: ವರುಣ ದೇವನ ಅವಕೃಪೆಗೆ ತುತ್ತಾಗಿರುವ ಜಿಲ್ಲೆಯಲ್ಲಿ ಈ ವರ್ಷವೂ ಮುಂಗಾರು ಮಳೆ ಕೈಕೊಟ್ಟಿದ್ದು, ಬಿತ್ತನೆ ಕಾರ್ಯ ಕುಂಠಿತಗೊಂಡಿದೆ.

ಸತತ ಬರದಿಂದ ತತ್ತರಿಸಿರುವ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆರಾಯ ಆಗೊಮ್ಮೆ ಈಗೊಮ್ಮೆ ಮುಖ ತೋರಿಸಿ ಮರೆಯಾಗಿದ್ದನ್ನು ಬಿಟ್ಟರೆ ಎಲ್ಲಿಯೂ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಮಳೆ ನಂಬಿ ಬಿತ್ತನೆ ಮಾಡಿದ ರೈತರಲ್ಲಿ ನಿರಾಸೆಯ ಕಾರ್ಮೋಡ ಕವಿದಿದೆ.

ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ ಪ್ರಮಾಣ 724 ಮಿ.ಮೀ ಇದ್ದು, ನಾಲ್ಕೈದು ವರ್ಷಗಳಿಂದ ವಾಡಿಕೆಗಿಂತಲೂ ಕಡಿಮೆ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಜೂನ್‌ ತಿಂಗಳಿನಿಂದ ಆಗಸ್ಟ್‌ ಅಂತ್ಯದವರೆಗಿನ ಅವಧಿಯನ್ನು ಮುಂಗಾರು ಹಂಗಾಮು ಎಂದು ಪರಿಗಣಿಸಲಾಗಿದ್ದು, ಸಾಮಾನ್ಯವಾಗಿ ಈ ಅವಧಿಯಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಹೀಗಾಗಿ ಈ ಮೂರು ತಿಂಗಳಲ್ಲಿ ಬಿತ್ತನೆ ಕಾರ್ಯ ಚುರುಕಾಗಿರುತ್ತದೆ.

ADVERTISEMENT

ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ರಾಗಿ, ಮುಸುಕಿನ ಜೋಳ, ಮೇವಿನ ಜೋಳ, ತೊಗರಿ, ಹುರಳಿ, ಹೆಸರುಕಾಳು, ಅಲಸಂದೆ, ಅವರೆ, ಉದ್ದು, ನೆಲಗಡಲೆ, ಸೂರ್ಯಕಾಂತಿ, ಎಳ್ಳು, ಸಾಸಿವೆ, ಹರಳು, ಸೋಯಾ ಅವರೆ ಹಾಗೂ ಹುಚ್ಚೆಳ್ಳು ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಅಲ್ಲದೇ, ವಾಣಿಜ್ಯ ಬೆಳೆಗಳಾದ ಭತ್ತ, ಕಬ್ಬು ಹಾಗೂ ಹತ್ತಿಯನ್ನು ಬೆಳೆಯಲಾಗುತ್ತದೆ.

ಬಿತ್ತನೆ ಗುರಿ: ಜಿಲ್ಲೆಯಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ ವಾಡಿಕೆ ಮಳೆ ಪ್ರಮಾಣ 220 ಮಿ.ಮೀ ಇದೆ. ಈ ಬಾರಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 1.02 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯಿತ್ತು. ಆದರೆ, ಈವರೆಗೆ 2,169 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿ ಕೇವಲ ಶೇ 2.13ರಷ್ಟು ಬಿತ್ತನೆ ಗುರಿ ಸಾಧನೆಯಾಗಿದೆ.

ಮೇ ಅಂತ್ಯದಲ್ಲಿ, ಜೂನ್‌ ಮತ್ತು ಜುಲೈನಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರಿಂದ ರೈತರು ರಾಗಿ, ಅವರೆ, ತೊಗರಿ ಬಿತ್ತನೆ ಮಾಡಿದರು. ನಂತರ ಮಳೆ ಕೈಕೊಟ್ಟಿದ್ದರಿಂದ ಬಹುತೇಕ ಕಡೆ ಬೀಜಗಳು ಮೊಳಕೆಯೊಡೆದಿಲ್ಲ.

ಜಿಲ್ಲೆಯ 87 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಹಾಗೂ 2,082 ಹೆಕ್ಟೇರ್‌ ಖುಷ್ಕಿ ಭೂಮಿಯಲ್ಲಿ ಬಿತ್ತನೆ ಮಾಡಲಾಗಿದೆ. ಈವರೆಗೆ ಬಂಗಾರಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ 4.02ರಷ್ಟು ಬಿತ್ತನೆಯಾಗಿದೆ. ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅತಿ ಕಡಿಮೆ 0.64ರಷ್ಟು ಬಿತ್ತನೆಯಾಗಿದೆ. ಉಳಿದಂತೆ ಕೋಲಾರ ತಾಲ್ಲೂಕಿನಲ್ಲಿ ಶೇ 2.73, ಮಾಲೂರು ತಾಲ್ಲೂಕಿನಲ್ಲಿ ಶೇ 1.11 ಹಾಗೂ ಮುಳಬಾಗಿಲು ತಾಲ್ಲೂಕಿನಲ್ಲಿ ಶೇ 1.57ರಷ್ಟು ಬಿತ್ತನೆಯಾಗಿದೆ.

ರಸಗೊಬ್ಬರ ದಾಸ್ತಾನು: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರಿನಲ್ಲಿ ರಸಗೊಬ್ಬರದ ಬೇಡಿಕೆ 13,505 ಮೆಟ್ರಿಕ್‌ ಟನ್‌ ಇತ್ತು. ಈ ಪೈಕಿ 7,487 ಮೆಟ್ರಿಕ್‌ ಟನ್‌ ಪೂರೈಕೆಯಾಗಿದ್ದು, ರೈತರಿಗೆ 5,374 ಮೆಟ್ರಿಕ್‌ ಟನ್‌ ಗೊಬ್ಬರ ಮಾರಾಟ ಮಾಡಲಾಗಿದೆ. ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಒಕ್ಕೂಟದಲ್ಲಿ (ಕೆಎಸ್‌ಸಿಎಂಎಫ್‌) 2,703 ಮೆಟ್ರಿಕ್‌ ಟನ್‌ ಮತ್ತು ಖಾಸಗಿಯವರ ಬಳಿ 6,096 ಮೆಟ್ರಿಕ್‌ ಟನ್‌ ಸೇರಿದಂತೆ 8,799 ಮೆಟ್ರಿಕ್‌ ಟನ್‌ ರಸಗೊಬ್ಬರ ದಾಸ್ತಾನು ಇದೆ.

ಜಿಲ್ಲೆಯಿಂದ 4,039 ಕ್ವಿಂಟಾಲ್‌ ಬಿತ್ತನೆ ಬೀಜಕ್ಕೆ ಪ್ರಸ್ತಾವ ಕಳುಹಿಸಲಾಗಿತ್ತು. ಈ ಪೈಕಿ 2,089 ಕ್ವಿಂಟಾಲ್‌ ಪೂರೈಕೆಯಾಗಿದ್ದು, 1,282 ಕ್ವಿಂಟಾಲ್‌ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಮಳೆ ಕೊರತೆಯ ಕಾರಣಕ್ಕೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೇಳುವವರಿಲ್ಲ. ಆಗಸ್ಟ್‌ ತಿಂಗಳಲ್ಲೂ ಮಳೆ ಬಾರದಿದ್ದರೆ ಬಿತ್ತನೆ ಸ್ಥಿತಿ ಮತ್ತಷ್ಟು ಡೋಲಾಯಮಾನವಾಗಲಿದೆ.

ಅಂಕಿ ಅಂಶ.....

* 724 ಮಿ.ಮೀ ವಾರ್ಷಿಕ ವಾಡಿಕೆ ಮಳೆ
* 1.02 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ
* 2,169 ಹೆಕ್ಟೇರ್‌ ಬಿತ್ತನೆ
* ಶೇ 2.13ರಷ್ಟು ಸಾಧನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.