ADVERTISEMENT

ನಿವೇಶನ ಅಕ್ರಮ: ಪ್ರಕರಣ ದಾಖಲು

ವೇಮಗಲ್‌ ಗ್ರಾ.ಪಂ ಅಧ್ಯಕ್ಷರು– ಉಪಾಧ್ಯಕ್ಷರು ಭಾಗಿ

​ಪ್ರಜಾವಾಣಿ ವಾರ್ತೆ
Published 2 ಮೇ 2019, 13:55 IST
Last Updated 2 ಮೇ 2019, 13:55 IST
ಜಿ.ಜಗದೀಶ್‌
ಜಿ.ಜಗದೀಶ್‌   

ಕೋಲಾರ: ‘ತಾಲ್ಲೂಕಿನ ವೇಮಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಸತಿ ಬಡಾವಣೆಗಳ ನಿವೇಶನ ಹಂಚಿಕೆ ಅಕ್ರಮದ ಸಂಬಂಧ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ 49 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘14 ವಸತಿ ಬಡಾವಣೆಗಳಲ್ಲಿನ ನಿವೇಶನಗಳನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಪರಭಾರೆ ಮಾಡಿ ಸರ್ಕಾರಕ್ಕೆ ಮತ್ತು ಗ್ರಾ.ಪಂಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಲಾಗಿದೆ. ಈ ಸಂಬಂಧ ಜಿ.ಪಂ ಸಹಾಯಕ ಯೋಜನಾ ನಿರ್ದೇಶಕರು ತನಿಖೆ ನಡೆಸಿದ್ದು, ಅಕ್ರಮ ಮೇಲ್ನೋಟಕ್ಕೆ ಸಾಬೀತಾಗಿದೆ’ ಎಂದರು.

‘ವಸತಿ ಬಡಾವಣೆಗಳ ನಿರ್ಮಾಣಕ್ಕೂ ಮುನ್ನ ಜಿಲ್ಲಾಧಿಕಾರಿಯು ನಿಯಮಾನುಸಾರ ಭೂಪರಿವರ್ತನೆಗೆ ಅನುಮತಿ ನೀಡಿದ್ದರು. ಜತೆಗೆ ಗ್ರಾಮೀಣ ಹಾಗೂ ನಗರ ಯೋಜನಾ ಪ್ರಾಧಿಕಾರವು ಹೊಸ ಬಡಾವಣೆಗಳಿಗೆ ನಕ್ಷೆ ಅನುಮೋದನೆ ನೀಡಿತ್ತು. ಸಾರ್ವಜನಿಕರ ಸೌಲಭ್ಯಕ್ಕೆ ಸರ್ಕಾರದ ನಿಯಮದಂತೆ ಬಡಾವಣೆಗಳಲ್ಲಿ ಉದ್ಯಾನ, ಸಿ.ಎ ನಿವೇಶನ, ಶಾಲೆ ಮತ್ತು ಅಂಗನವಾಡಿಗೆ ಜಾಗ ಮೀಸಲಿಡಲಾಗಿತ್ತು’ ಎಂದು ವಿವರಿಸಿದರು.

ADVERTISEMENT

‘ಅನುಮೋದಿತ ನಕ್ಷೆ ಬದಲಿಸುವ ಅಧಿಕಾರ ಗ್ರಾ.ಪಂಗೆ ಇಲ್ಲ. ಆದರೆ, ಗ್ರಾ.ಪಂ ಚುನಾಯಿತ ಮಂಡಳಿಯು ಅನುಮೋದಿತ ನಕ್ಷೆ ಉಲ್ಲಂಘಿಸಿದೆ. ಅಲ್ಲದೇ, ನಕಲಿ ನಕ್ಷೆ ಸಿದ್ಧಪಡಿಸಿ ಸಾರ್ವಜನಿಕ ಸೌಲಭ್ಯಕ್ಕೆ ಮೀಸಲಿದ್ದ ರಸ್ತೆ ಮತ್ತು ಉದ್ಯಾನದ ಜಾಗ, ಸಿ.ಎ ನಿವೇಶನ ಒಳಗೊಂಡಂತೆ ಸುಮಾರು 863 ಚದರ ಮೀಟರ್‌ ಜಾಗವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಅಧಿಕಾರಿಗಳು ಭಾಗಿ: ‘2010ರಿಂದ 2015ರವರೆಗೆ ಅಧಿಕಾರದಲ್ಲಿದ್ದ ಚುನಾಯಿತ ಸದಸ್ಯರು ನಕಲಿ ದಾಖಲೆಪತ್ರ ಸೃಷ್ಟಿಸಿ ಈ ಅಕ್ರಮ ಎಸಗಿದ್ದಾರೆ. ಆಗಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಸಹ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಲೇಔಟ್‌ನ ದಾಖಲೆಪತ್ರ ಪರಿಶೀಲಿಸಲಾಯಿತು’ ಎಂದು ಹೇಳಿದರು.

‘ಸಾರ್ವಜನಿಕರ ದೂರು ಆಧರಿಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವಂತೆ ತಾ.ಪಂ ಕಾರ್ಯ ನಿರ್ವಹಣಾಧಿಕಾರಿಗೆ ಸೂಚಿಸಿದ್ದೆ. ಲೋಕಸಭಾ ಚುನಾವಣೆ ಕರ್ತವ್ಯದ ಒತ್ತಡದಿಂದಾಗಿ ಸಕಾಲಕ್ಕೆ ದೂರು ದಾಖಲಿಸಲು ಸಾಧ್ಯವಾಗಿರಲಿಲ್ಲ. ಇದೀಗ ವೇಮಗಲ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಉನ್ನತ ತನಿಖೆಗೆ ಸಮಿತಿ ರಚಿಸುತ್ತೇವೆ. ಯಾವುದೇ ಒತ್ತಡಕ್ಕೆ ಮಣಿಯದೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ’ ಎಂದರು.

ಕೊಳವೆ ಬಾವಿ ದುರ್ಬಳಕೆ: ‘ತಾಲ್ಲೂಕಿನ ತೊಟ್ಲಿ ಗ್ರಾ.ಪಂ ವ್ಯಾಪ್ತಿಯ ಕಿತ್ತಂಡೂರು ಗ್ರಾಮದಲ್ಲಿ ಸರ್ಕಾರಿ ಕೊಳವೆ ಬಾವಿಯನ್ನು ಖಾಸಗಿ ವ್ಯಕ್ತಿ ಉಪಯೋಗಿಸುತ್ತಿರುವ ಸಂಗತಿ ಗಮನಕ್ಕೆ ಬಂದಿದೆ. ಅಧಿಕಾರಿಗಳಿಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡುವಂತೆ ಸೂಚಿಸಿದ್ದೇನೆ. ಆತ ಸಾಮಾನ್ಯ ವ್ಯಕ್ತಿಯಾದರೆ ಶಿಸ್ತುಕ್ರಮ ಜರುಗಿಸುತ್ತೇವೆ. ಜನ ಪ್ರತಿನಿಧಿಯಾದರೆ ಸದಸ್ಯತ್ವ ರದ್ದುಗೊಳಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅನುದಾನದ ಕೊರತೆಯಿಲ್ಲ. ಬರ ನಿರ್ವಹಣಾ ಕಾರ್ಯಪಡೆಗೆ ಬಂದಿದ್ದ ₹ 7.50 ಕೋಟಿ ಅನುದಾನ ಬಳಕೆಯಾಗಿದೆ. ಬರ ನಿರ್ವಹಣೆಗೆ ಪ್ರಾಕೃತಿಕ ವಿಕೋಪ ನಿಧಿಯ ಅನುದಾನವಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ 92 ಹಳ್ಳಿಗಳಲ್ಲಿ ನೀರಿನ ಸಮಸ್ಯೆಯಿದ್ದು, 32 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಮತ್ತು ಉಳಿದ ಹಳ್ಳಿಗಳಿಗೆ ಖಾಸಗಿ ಕೊಳವೆ ಬಾವಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.