ADVERTISEMENT

ಭೂ ಹಗರಣ: ಕ್ರಿಮಿನಲ್ ಪ್ರಕರಣ

ಕಂದಾಯ ಅಧಿಕಾರಿಗಳು ಅಮಾನತು: ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಕುಮಾರಿ ಭಾಗಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 4:41 IST
Last Updated 10 ಜನವರಿ 2021, 4:41 IST

ಕೆಜಿಎಫ್‌: ಭೂಹಗರಣಕ್ಕೆ ಸಂಬಂಧಿಸಿದಂತೆ ಕೆಜಿಎಫ್‌ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಮತ್ತು ಕೋಟಿಲಿಂಗೇಶ್ವರ ದೇವಾಲಯ ಆಡಳಿತಾಧಿಕಾರಿ ಕೆ.ವಿ.ಕುಮಾರಿ, ಶಿರಸ್ತೇದಾರ್ ಸಂಪತ್‌ಕುಮಾರ್ ಮತ್ತುಪಿಡಿಒ ಶ್ರೀನಿವಾಸರೆಡ್ಡಿ ವಿರುದ್ಧ ಶನಿವಾರ ಬೇತಮಂಗಲ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

ಕಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್‌ 1 ರಲ್ಲಿ ಬರುವ 4.20 ಎಕರೆ ಗೋಮಾಳ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇರೆಗೆ ಮೂವರ ವಿರುದ್ಧ ಭೂ ಕಂದಾಯ ಕಾಯ್ದೆ ಅಡಿಯಲ್ಲಿ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದ್ದರು. ತಹಶೀಲ್ದಾರ್ ಕೆ.ಎನ್‌.ಸುಜಾತ ಅವರು ಶುಕ್ರವಾರ ರಾತ್ರಿ ಬೇತಮಂಗಲ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಏನಿದು ಪ್ರಕರಣ?

ADVERTISEMENT

ಬೇತಮಂಗಲ ಹೋಬಳಿ ಕಮ್ಮಸಂದ್ರ ಗ್ರಾಮದ
ಸರ್ವೆ ನಂಬರ್‌ 1 ರಲ್ಲಿ 4.20 ಎಕರೆ ಸರ್ಕಾರಿ ಗೋಮಾಳ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಕಮಲಸಾಂಭವ (ಕೋಟಿಲಿಂಗೇಶ್ವರ ದೇವಾಲಯದ ಧರ್ಮಾಧಿಕಾರಿ) ಆಲಿಯಾಸ್‌ ಸಾಂಬಶಿವಮೂರ್ತಿ ಅವರಿಗೆ 1997ರಲ್ಲಿ ಸಾಗುವಳಿ ಚೀಟಿ ನೀಡಲಾಗಿತ್ತು. ಅದಕ್ಕೆ ಎಂ.ಆರ್ ನಂಬರ್ ಕೂಡ ನೀಡಲಾಗಿತ್ತು. ಎಂ.ಆರ್‌ ನಂಬರ್‌ 6/99–2000 ರಂತೆ ಅವರಿಗೆ ಹಕ್ಕು ಕೂಡ ಬದಲಾವಣೆ
ಮಾಡಲಾಗಿತ್ತು.

ನಂತರ ಕಮ್ಮಸಂದ್ರ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರಿ ಜಮೀನನ್ನು ನಿಯಮ ಬಾಹಿರವಾಗಿ ಕೆ.ವಿ.ಕುಮಾರಿ ಅವರ ಹೆಸರಿಗೆ ಖಾತೆ ಬದಲಾಯಿಸಿ,
ಇ– ಸ್ವತ್ತುಗಳ ಮೂಲಕ ಖಾತೆ ಮಾಡಲಾಗಿತ್ತು. ಖಾತೆ ಮಾಡಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸರೆಡ್ಡಿ ಸರ್ಕಾರಕ್ಕೆ ಸಾಕಷ್ಟು ನಷ್ಟವನ್ನು ಉಂಟು ಮಾಡಿದ್ದಾರೆ.ಎಂ.ಆರ್ ಮೂಲಕ ಹಕ್ಕು ಬದಲಾವಣೆ ಮಾಡಿರುವ ಅಂದಿನ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಸಂಪತ್‌ಕುಮಾರ್‌ (ಪ್ರಸ್ತುತ ಮುಳಬಾಗಲಿನಲ್ಲಿ ಶಿರಸ್ತೇದಾರ್‌) ಕೂಡ ಅಕ್ರಮ ಎಸಗಿದ್ದಾರೆ ಎಂದು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಲ್ಲದೆ, ಅಕ್ರಮವಾಗಿ ಖಾತೆ ಬದಲಾವಣೆ ಮಾಡಿಸಿಕೊಂಡಿರುವ ಕೆ.ವಿ.ಕುಮಾರಿ, ಶಿರಸ್ತೇದಾರ್ ಸಂಪತ್‌ಕುಮಾರ್ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸರೆಡ್ಡಿ ವಿರುದ್ಧ ಭೂ ಕಂದಾಯ ಕಾಯ್ದೆ 1964 ರ ಕಲಂ 192 ಎ ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲೆ ಮಾಡುವಂತೆ ತಹಶೀಲ್ದಾರರು ದೂರಿತ್ತಿದ್ದಾರೆ.

ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವಬೇತಮಂಗಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆಇಬ್ಬರೂ ಸರ್ಕಾರಿ ನೌಕರರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.