ADVERTISEMENT

ಕೆಜಿಎಫ್: ರಾಜಸ್ವ ನಿರೀಕ್ಷಕರ ಗೈರಿನಿಂದ ಸರ್ವೆ ರದ್ದು

ಗೋಮಾಳ ಒತ್ತುವರಿ ಆರೋಪ: ಸರ್ವೆಗೆ ಅಡ್ಡಿಪಡಿಸಿದ ಕೋಳಿ ಫಾರ್ಮ್‌ ಮಾಲೀಕ, ಗ್ರಾಮಸ್ಥರ ನಡುವೆ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 7:55 IST
Last Updated 24 ಡಿಸೆಂಬರ್ 2025, 7:55 IST
ಕೆಜಿಎಫ್ ತಾಲ್ಲೂಕು ಕ್ಯಾಸಂಬಳ್ಳಿ ಹೋಬಳಿ ತೂಕಲ ಗ್ರಾಮದಲ್ಲಿ ಸರ್ವೆ ಸಂಬಂಧ ಮಂಗಳವಾರ ಗ್ರಾಮಸ್ಥರು ಹಾಗೂ ‌ಕೋಳಿ ಫಾರ್ಮ್‌ ಮಾಲೀಕರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು
ಕೆಜಿಎಫ್ ತಾಲ್ಲೂಕು ಕ್ಯಾಸಂಬಳ್ಳಿ ಹೋಬಳಿ ತೂಕಲ ಗ್ರಾಮದಲ್ಲಿ ಸರ್ವೆ ಸಂಬಂಧ ಮಂಗಳವಾರ ಗ್ರಾಮಸ್ಥರು ಹಾಗೂ ‌ಕೋಳಿ ಫಾರ್ಮ್‌ ಮಾಲೀಕರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು   

ಕೆಜಿಎಫ್: ಕ್ಯಾಸಂಬಳ್ಳಿ ಹೋಬಳಿ ತೂಕಲ ಗ್ರಾಮದ ಸರ್ಕಾರಿ ಗೋಮಾಳ ಒತ್ತುವರಿಯಾಗಿದೆ ಎಂಬ ಆರೋಪದ ಮೇಲೆ ಮಂಗಳವಾರ ಸರ್ವೆ ಮಾಡಲು ಹೋಗಿದ್ದ ಅಧಿಕಾರಿಗಳು ರಾಜಸ್ವ ನಿರೀಕ್ಷಕರ ಗೈರಿನಿಂದ ಸರ್ವೆ ರದ್ದುಗೊಳಿಸಿದ್ದಾರೆ.

ಗ್ರಾಮದಲ್ಲಿ ಕೋಳಿ ಫಾರ್ಮ್‌ ನಡೆಸುತ್ತಿರುವವರು ಮತ್ತು ಗ್ರಾಮಸ್ಥರ ನಡುವೆ ಬಹಳ ದಿನಗಳಿಂದ ಗೋಮಾಳ ಜಾಗ ಒತ್ತುವರಿ ಬಗ್ಗೆ ವಿವಾದ ಉಂಟಾಗಿತ್ತು. ನಾಲ್ಕು ಎಕರೆ ಗೋಮಾಳ ಒತ್ತುವರಿಯಿಂದ ಜಾನುವಾರುಗಳಿಗೆ ಮೀಸಲಿಟ್ಟ ಭೂಮಿ ಕಣ್ಮರೆಯಾಗಿದೆ ಎಂದು ಆರೋಪಿಸಿ ಒತ್ತುವರಿ ತೆರವು ಹಾಗೂ ಬೀರೇಶ್ವರ ದೇವಾಲಯಕ್ಕೆ ಕಾಲುದಾರಿ ಬಿಡಿಸಿಕೊಡುವ ಸಂಬಂಧ ಗ್ರಾಮಸ್ಥರು ತಹಶೀಲ್ದಾರ್‌ಗೆ ಮನವಿ ಮಾಡಿದ್ದರು. 

ಈ ಸಂಬಂಧ ಪೊಲೀಸ್ ಬಂದೋಬಸ್ತಿನೊಂದಿಗೆ ಗ್ರಾಮಕ್ಕೆ ತೆರಳಿದ ತಾಲ್ಲೂಕು ಸರ್ವೆಯರ್ ಮೌಲಾಖಾನ್, ಗ್ರಾಮ ಆಡಳಿತಾಧಿಕಾರಿ ಮೇರಿಯ ರೋಜಾ ದೇವಾಲಯದ ತಕರಾರನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಇತ್ಯರ್ಥ ಪಡಿಸಿದರು. ಜೊತೆಗೆ ಕೋಳಿ ಫಾರ್ಮ್‌ ಸುತ್ತಮುತ್ತ ಜಾಗ ಸರ್ವೆ ಮಾಡಲು ಮುಂದಾದಾಗ ಕೋಳಿ ಫಾರ್ಮ್‌ ಮಾಲೀಕರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಗ್ರಾಮಸ್ಥರು ಮತ್ತು ಕೋಳಿ ಫಾರ್ಮ್‌ ಮಾಲೀಕರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ADVERTISEMENT

ನೋಟಿಸ್ ನೀಡದೆ ಸರ್ವೆ ಮಾಡಲು ಆಗುವುದಿಲ್ಲ ಎಂದು ಕೋಳಿ ಫಾರ್ಮ್‌ ಮಾಲೀಕರ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರಿ ಜಾಗ ಅಳಿಯಲು ಯಾರಿಗೂ ನೋಟಿಸ್ ನೀಡುವ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳು ಸಮಜಾಯಿಸಿ ನೀಡಿದರು.

ನಂತರ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಕಂಡ ತಾಲ್ಲೂಕು ಸರ್ವೆಯರ್ ಮೌಲಾಖಾನ್ ಅವರು ರೆವೆನ್ಯೂ ಇನ್‌ಸ್ಪೆಕ್ಟರ್‌ ಇಲ್ಲದೆ ಸರ್ವೆ ನಡೆಸಲು ಆಗುವುದಿಲ್ಲ ಎಂದು ಸರ್ವೆಯರ್ ಮುಂದಿನ ದಿನಾಂಕಕ್ಕೆ ಮುಂದೂಡಿದರು. ಅಧಿಕಾರಿಗಳ ನಡೆಯಿಂದ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತಿ ಸದಸ್ಯ ರವಿ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.